ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ; ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವ ಸಂದೇಶ ನಮಗೆ ಬಂದಿದೆ ; ಮೃಣಾಲ್ ಭವಿಷ್ಯದ ನಾಯಕ, ಮುಂದೆ ಪಕ್ಷ ಮತ್ತು ಜಿಲ್ಲೆಗೆ ದೊಡ್ಡ ಆಸ್ತಿಯಾಗಲಿದ್ದಾರೆ : ಸತೀಶ್ ಜಾರಕಿಹೊಳಿ ; ಬೆಳಗಾವಿ ಪುತ್ರ ಮೃಣಾಲ್ ಆಯ್ಕೆ ಮಾಡಿ – ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವ ಸಂದೇಶ ನಮಗೆ ಬಂದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಇಂದು ನಡೆದ ಬೆಳಗಾವಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಆಂತರಿಕ ಸಮೀಕ್ಷೆ ನಡೆಸಿದೆ. ಎರಡೂ ಕಡೆ ಹೆಚ್ಚಿನ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಭರವಸೆ ಮೂಡಿದೆ. ಕಳೆದ 50 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದೇವೆ. ಜನರ ಜೀವನ ಮಟ್ಟ ಎತ್ತರಿಸಿದ್ದೇವೆ. ಈಗ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. 10 ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯವರು ನೀಡಿದ್ದ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಬುಲೆಟ್ ಟ್ರೇನ್, ರೈತರ ಆದಾಯ ದ್ವಿಗುಣ, ಪ್ರತಿಯೊಬ್ಬರಿಗೆ 15 ಲಕ್ಷ ರೂ. ಸ್ವಿಸ್ ಬ್ಯಾಂಕ್ ನಿಂದ ಹಣ ವಾಪಸ್ಸು ತರುವುದು ಸೇರಿ ಅನೇಕ ಭರವಸೆ ಕೊಟ್ಟಿದ್ದರು. ಆದರೆ, ಏನೂ ಮಾಡಿಲ್ಲ. ಮಹಿಳೆಯರು, ಬಡವರು, ಎಸ್ಸಿ, ಎಸ್ಟಿಗಳಿಗೆ ಏನು ಮಾಡಿದ್ದಾರೆ? ಪುಷ್ಪಕ ವಿಮಾನ ಕಥೆ ಅಷ್ಟೇ ಹೇಳಿದ್ದಾರೆ. ಜಲಾಶಯ, ಇಸ್ರೋ, ವಿಶ್ವವಿದ್ಯಾಲಯ, ಐಐಟಿ ಸೇರಿ ಅನೇಕ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ. ಮೃಣಾಲ್ ಭವಿಷ್ಯದ ನಾಯಕ. ಮುಂದೆ ಪಕ್ಷ ಮತ್ತು ಜಿಲ್ಲೆಗೆ ದೊಡ್ಡ ಆಸ್ತಿಯಾಗಲಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದರು.

ಮೃಣಾಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ಭವಿಷ್ಯವನ್ನು ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಂಪಿ ಆಗುವ ಅವಶ್ಯಕತೆ ಇರಲಿಲ್ಲ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಆರಾಮವಾಗಿ ಇರಬಹುದಿತ್ತು. ಆದರೆ, ನಮ್ಮ ಒತ್ತಾಯಕ್ಕೆ ಜನರ ಸೇವೆ ಮಾಡಲು ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಒಂದಿಷ್ಟು ಜನರು ಇವ್ರು ಸಣ್ಣವರು ಎನ್ನುತ್ತಿದ್ದಾರೆ. ಈಗ ಸಣ್ಣವರೇ ಮುಂದೆ ದೊಡ್ಡವರಾಗುತ್ತಾರೆ. ರಾಜಕೀಯ ಹೊಸದಾಗಿ ಇರಬಹುದು. ಆದರೆ, ನಾಲ್ಕೈದು ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದಾರೆ. ಕೊರೊನಾ, ಪ್ರವಾಹ ಸಂದರ್ಭದಲ್ಲಿ ಜನರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಜಾರಕಿಹೊಳಿ ಹೇಳಿದರು.
ದೇಶದಲ್ಲಿ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರ ನಡೆದಿದೆ. ಜನ ಮನಸ್ಸು ಮಾಡಿದರೆ ಯಾವ ಬದಲಾವಣೆ ಬೇಕಾದರೂ ಆಗುತ್ತದೆ. ಮೃಣಾಲ್, ಪ್ರಿಯಾಂಕಾ ಎಂಪಿ ಆಗುವುದರಲ್ಲಿ ಸಂಶಯವೇ ಇಲ್ಲ. ಚಿಕ್ಕ ವಯಸ್ಸಿನ ಸಂಸದರನ್ನು ಸಂಸತ್ತಿಗೆ ಕಳಿಸಿ ಕೊಟ್ಟ ಶ್ರೇಯ ಬೆಳಗಾವಿ ಮತ್ತು ಚಿಕ್ಕೋಡಿಗೆ ಸಲ್ಲಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಪುತ್ರ ಮೃಣಾಲ್ ಆಯ್ಕೆ ಮಾಡಿ – ಲಕ್ಷ್ಮೀ ಹೆಬ್ಬಾಳಕರ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೆಳಗಾವಿ ಪುತ್ರ, ಲೋಕಲ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಇಡೀ ದೇಶದ ಗಮನ ಸೆಳೆದಿವೆ. ಯಾಕೆಂದರೆ ಇಲ್ಲಿ ಕಾಂಗ್ರೆಸ್ ಯುವಕರಿಗೆ ಅವಕಾಶ ಮಾಡಿಕೊಟ್ಟಿದೆ. ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರ ಆಶೀರ್ವಾದದಿಂದ ನನ್ನ ಪುತ್ರನಿಗೆ ಟಿಕೆಟ್ ಸಿಕ್ಕಿದ್ದು, ಇವರಿಗೆಲ್ಲಾ ನಾನು ಚಿರಋಣಿ ಆಗಿರುತ್ತೇನೆ. ಇನ್ನು ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳನ್ನು ಖಂಡಿತವಾಗಲೂ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಗ್ಯಾರಂಟಿ ಯೋಜನೆಗಳಿಂದ ತಮಗೆ ಉಪಯೋಗ ಆಗಿದೆಯೋ ಇಲ್ಲವೋ ಎಂದು ನೆರೆದಿದ್ದ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದಾಗ ಕೈ ಮೇಲೆ ಎತ್ತಿ ನಮಗೆ ಉಪಯೋಗ ಆಗಿದೆ ಎಂಬ ಉತ್ತರ ಮಹಿಳೆಯರಿಂದ ಕೇಳಿ ಬಂತು.
ಇಡೀ ವಿಶ್ವದಲ್ಲೇ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆ ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಎರಡನೇ ರಾಜಧಾನಿ ಬೆಳಗಾವಿ ಅಭಿವೃದ್ಧಿ ಬಗ್ಗೆ ದೆಹಲಿಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತುವ ಸಂಸದರ ಅವಶ್ಯಕತೆಯಿದೆ. ಬೆಳಗಾವಿಗೆ ಏನಾದರೂ ಮಾಡಬೇಕು ಎಂಬ ತುಡಿತ ಹೊಂದಿರುವ ಯುವಕ ಮೃಣಾಲ್ ಗೆ ಆಶೀರ್ವಾದ ಮಾಡಬೇಕು. ಬೆಳಗಾವಿ ಜಿಲ್ಲೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಅಷ್ಟೊಂದು ಅಭಿವೃದ್ಧಿ ಆಗಿಲ್ಲ. ಇದಕ್ಕೆ ಅನುದಾನ ತೆಗೆದುಕೊಂಡು ಬರುವಷ್ಟು ಇಚ್ಛಾಶಕ್ತಿ ಹೊಂದಿರುವ ಸಂಸದರು ಇರಲಿಲ್ಲ. ನಾನು ಹೇಗೆ ಕೆಲಸ ಮಾಡುತ್ತೆನೋ ಅದೇ ರೀತಿ ನನ್ನ ಪುತ್ರ ಕೂಡ ಒಳ್ಳೆಯ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಾನೆ ಎಂದರು.

ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಯುವಕರೇ ಈ ದೇಶದ ಆಸ್ತಿ, ಭವಿಷ್ಯ ಎಂದು ಬೆಳಗಾವಿಯಲ್ಲಿ ನನಗೆ ಮತ್ತು ಚಿಕ್ಕೋಡಿಯಲ್ಲಿ ಸಹೋದರಿ ಪ್ರಿಯಾಂಕಾಗೆ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ನಮ್ಮ ಕಾಂಗ್ರೆಸ್ ಸರ್ಕಾರ ತಲುಪಿಸಿದೆ. ಇದರಿಂದ ಜನ ತುಂಬಾ ಖುಷಿಯಲ್ಲಿದ್ದಾರೆ. ನನಗೊಂದು ಸುವರ್ಣಾವಕಾಶ ಸಿಕ್ಕಿದ್ದು, ದಯವಿಟ್ಟು ನನಗೆ ನೀವು ಆಶೀರ್ವಾದ ಮಾಡಬೇಕು ಎಂದು ಕೇಳಿಕೊಂಡರು.

ಸಂಸತ್ತಿನಲ್ಲಿ ನಿಂತು ಮಾತಾಡುವ ಧೈರ್ಯ ಬಿಜೆಪಿ ಸಂಸದರಿಗಿಲ್ಲ – ಚನ್ನರಾಜ ಹಟ್ಟಿಹೊಳಿ
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಅತ್ಯಂತ ಮಹತ್ವದ ಲೋಕಸಭೆ ಚುನಾವಣೆ ಬಂದಿದೆ. ದೇಶ, ರಾಜ್ಯ ಸಂಕಷ್ಟದಲ್ಲಿದೆ. ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಲ್ಲಿ ನಾವೆಲ್ಲಾ ಪ್ರಜ್ಞಾವಂತರು ಸೇರಿದ್ದೇವೆ. ಬೆಳಗಾವಿ ಉತ್ತರ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ. ಐದು ವರ್ಷ ಯಾವ ಪಕ್ಷ ದೇಶದ ಚುಕ್ಕಾಣಿ ಹಿಡಿಬೇಕು ಎಂಬುದನ್ನು ನಿರ್ಧರಿಸಲು ಈಗ ಅವಕಾಶ ಬಂದಿದೆ. ನಾವು ಲೋಕಸಭೆ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕಿದೆ. ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಮಾಡೋಣ, ಸರ್ವಾಧಿಕಾರವನ್ನು ತೊಡೆದು ಹಾಕಿ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.
ಬೆಲೆ ಏರಿಕೆ ನೀತಿ, ನಿರುದ್ಯೋಗ ಸಮಸ್ಯೆ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಇಡಿ, ಐಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶವನ್ನು ತಪ್ಪು ದಾರಿಗೆ ಇವ್ರು ತೆಗೆದುಕೊಂಡು ಹೋಗುತ್ತಿದ್ದಾರೆ. ಮೋದಿಯನ್ನು ನೋಡಿ ವೋಟ್ ಹಾಕುವಂತೆ ಕೇಳಿಕೊಳ್ಳುವ ಇವರಿಗೆ ಸಂಸತ್ತಿನಲ್ಲಿ ನಿಂತು ಮಾತಾಡುವ ಧೈರ್ಯ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಹಣದ ಬಗ್ಗೆ ಪ್ರಶ್ನೆ ಮಾಡುವ ಶಕ್ತಿ ರಾಜ್ಯದ ಸಂಸದರಿಗಿಲ್ಲ. ತಮ್ಮದೇ ಪಕ್ಷದ ಪ್ರಧಾನಮಂತ್ರಿ ಮುಂದೆ ಮಾತಾಡುವ ತಾಕತ್ತು ಬಿಜೆಪಿ ಸಂಸದರಿಗಿಲ್ಲ ಎಂದು ಚನ್ನರಾಜ ಹಟ್ಟಿಹೊಳಿ ಹರಿಹಾಯ್ದರು.
ಕೇಂದ್ರ, ರಾಜ್ಯ ನಾಯಕರು ಒಮ್ಮತದಿಂದ ಯುವಕ ಮೃಣಾಲ್ ಗೆ ಟಿಕೆಟ್ ನೀಡಿದ್ದಾರೆ. ಮೃಣಾಲ್ ಜೊತೆ ನಾವೆಲ್ಲಾ ನಿಂತು ಆಶೀರ್ವಾದ ಮಾಡಿದರೆ ಮುಂದೆ ಜಿಲ್ಲೆಯ ಆಸ್ತಿಯಾಗಲಿದ್ದಾರೆ ಎಂದು ಚನ್ಬರಾಜ ಹಟ್ಟಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಬೆಳಗಾವಿ ಉತ್ತರ ಶಾಸಕ ಆಸೀಫ್(ರಾಜು) ಸೇಠ್, ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಾರ್ ಅಸೊಸಿಯೇಷನ್ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ, ಆರ್.ಪಿ.ಪಾಟೀಲ, ಯುವರಾಜ ಕದಂ, ಕಿರಣ ಸಾಧುನವರ್, ಸುನಿಲ್ ಹನಮಣ್ಣವರ್, ಮುಜಮಿಲ್ ದೋನಿ, ಸಿ.ಬಿ.ಪಾಟೀಲ್, ಬೈರೆಗೌಡ ಕಣಬರ್ಗಿ, ಸುಧೀರ್ ಗಡ್ಡೆ, ಮಲ್ಲೇಶ್ ಚೌಗುಲೆ, ರಾಜದೀಪ್ ಕೌಜಲಗಿ, ಸೇವಾದಳ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ