ಪೋಷಣ್ ಮಾಹೆ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯ ಕೊರತೆ ನಿಗಿಸಲು ಸರ್ಕಾರವು ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಮಾಹೆ ಕಾರ್ಯಕ್ರಮವನ್ನು ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ವಾರ್ಡ್ ನಂ ೪೦ರ ಕಾರ್ಪೋರೇಟರ್ ಅನುಶ್ರೀ ದೇಶಪಾಂಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗರ್ಭಿಣಿಯರ ಹಾಗೂ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದ್ದು ಅದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಲು ಪೋಷಣಾ ಅಭಿಯಾನ ಅನುಕೂಲಕರವಾಗಿದೆ ಎಂದು ಹೇಳಿದರು. ಹಾಗೆಯೆ ಇಂತಹ ಕಾರ್ಯಾಕ್ರಮಗಳನ್ನು ಯಶಸ್ವಿಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಿಕಿಯಾದ ಕಮಲಾ ಬಾಸರಗಿ ಅವರು ಮಾತನಾಡಿ ಸತ್ಪ್ರಜೆಗಳನ್ನು ರೂಪಿಸಲು ಗರ್ಭಾವಸ್ಥೆಯಿಂದಲೆ ಮಹಿಳೆಯರಿಗೆ ಸತ್ವಯುತ ಆಹಾರ ನೀಡುವುದು ಸ್ವಚ್ಚವದ ನೀರು ಹಾಗೂ ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವುದೆ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ನಾಗೇಂದ್ರ ವ್ಹಿ. ಹಿರೇಮಠ ಮಾತನಾಡಿ ಅಪೌಷ್ಠಿಕತೆ ನಿರ್ಮೂಲನೆಗಾಗಿ ಪೋಷಣ ಅಭಿಯಾನ ಒಳ್ಳೆಯ ಉದ್ದೇಸ ಒಳಗೊಂಡ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಮದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಿ ಆರತಿ ಮಾಡುವುದರ ಮೂಲಕ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ಮೇಲ್ವಿಚಾರಿಕಿಯಾದ ಜ್ಯೋತಿ ಇಂಡಿ, ಲೀಲಾ ದಾಕ್ಷಿನಕೊಪ್ಪ, ಹನಮಾನ ಮಂದಿರ ಟ್ರಸ್ಟ್‌ನ ಎಮ್.ಎಸ್. ಸಂಭಯ್ಯನವರ, ಶಕುಂತಲಾ ರೆಡ್ಡಿ, ಶೋಭಾ ಕ್ಷೀರಸಾಗರ, ಶಾರದಾ ಐಹೊಳೆ, ಪ್ರಾಥಮಿಕ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ
ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ೧೩-ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೨೦೧೯ರ ಸಪ್ಟೆಂಬರ್ ೧ ರಿಂದ ಅಕ್ಟೋಬರ್ ೧೫ ರವರೆಗೆ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮತದಾರರ ಪಟ್ಟಿಯಲ್ಲಿ ದಾಖಲಿರುವ ಪ್ರತಿ ಮತದಾರರ ಹೆಸರುಗಳನ್ನು ಸಂಬಂಧಿಸದವರಿಂದ ಧೃಡೀಕರಿಸುವದು ಹಾಗೂ ನಾನು ಪ್ರತಿಶತ ೧೦೦ ರಷ್ಟು ಮತದಾರರ ವಿವರಗಳನ್ನು ಸರಿ ಪಡಿಸುವೆ ಎನ್ನುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಂದ ಅವರ ಗುರುತಿನ ಪತ್ರಗಳಾದ ಪಾಸ್ ಪೋರ್ಟ, ಆಧಾರ ಕಾರ್ಡ, ಪ್ಯಾನ್ ಕಾರ್ಡ, ರೇಶನ್ ಕಾರ್ಡ, ವಾಹನ ಚಾಲನಾ ಪ್ರಮಾಣ ಪತ್ರ, ಸರ್ಕಾರಿ -ಅರೇ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರ ದಾಖಲೆಗಳನ್ನು ಪಡೆದುಕೊಂಡು ಸ್ಥಳದಲ್ಲಿಯೇ ಅವರ ಮೊಬೈಲ ಆಪ್ ಮೂಲಕ ಅಪಲೋಡ್ ಮಾಡುವ ಮೂಲಕ ದೃಢೀಕರಿಸುತ್ತಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಸಹಕರಿಸಲು ಕೋರಿದೆ.
ಅದರಂತೆ ಮತದಾರರು ತಮ್ಮ ಹೆಸರನ್ನು ದೃಢೀಕರಿಸಿಕೊಳ್ಳಬಹುದಾಗಿದೆ. ಅದಲ್ಲದೇ ಮತದಾರರು ಖುದ್ದಾಗಿ ಭಾರತ ಚುನಾವಣಾ ಆಯೋಗದ ವೆಬ್ಸೈಟ್ ಮೂಲಕವು ಸಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ ಧೃಡೀಕರಿಸಬಹುದಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿ ಆಚರಣೆ
ವಿಶ್ವಕರ್ಮರಂತಹ ಮಹಾನ್ ದಾರ್ಶನಿಕರು ನಡೆದು ಬಂದಿರುವ ದಾರಿ ಮತ್ತು ವಿಚಾರಧಾರೆಗಳನ್ನು ಅರಿತುಕೊಂಡು ಅವುಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ಬೂದೆಪ್ಪ ಎಚ್ ಬಿ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯಕ್ತಾಶ್ರಯದಲ್ಲಿ ಮಂಗಳವಾರ (ಸೆ. ೧೭) ನಡೆದ ೪ನೇ ವರ್ಷದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ವರ್ಷ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಬಂದಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಮನೆಗಳು, ಬೆಳೆಗಳು ಮತ್ತು ಜಾನುವಾರುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದ್ದರಿಂದ ಸರ್ಕಾರ ಹಾಗೂ ಸಮಾಜದ ಜನರ ಆಶಯದಂತೆ ಸರಳ ರೀತಿಯಲ್ಲಿ ಜಯಂತಿಯನ್ನು ಆಚರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ಯಾವುದೇ ಸಂಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿ ಎಲ್ಲರೂ ಒಗ್ಗಟ್ಟಾಗಿ ಬದುಕುವುದಕ್ಕೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳಬೇಕು ಎಂದು ಡಾ.ಬೂದೆಪ್ಪ ಹೇಳಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ದ್ವೇಷ, ವೈಷಮ್ಯ, ಜಾತಿಯತೆ, ದೌರ್ಜನ್ಯಗಳು ಹೋಗಲಾಡಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ರಾಯಬಾಗ ತಾಲ್ಲೂಕಿನ ಕಪ್ಪಲಗುದ್ದಿ ಗ್ರಾಮದ ಅಂದ ಕಲಾವಿದ ಕುಮಾರ ಬಡಿಗೇರ ಹಾಗೂ ಸಂಗಡಿಗರು ನಾಡಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಅಭಿವೃಧ್ಧಿ ನಿಗಮದ ಮಾಜಿ ಸದಸ್ಯರು ಕಲ್ಲಪ್ಪ ಬಡಿಗೇರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಜಪ್ಪ ಬಡಿಗೇರ, ಚನ್ನಪ್ಪ ಪತ್ತಾರ, ಪಿ.ಜಿ ಪತ್ತಾರ, ಶಂಕರ ಬಡಿಗೇರ, ರಾಜು ಬಡಿಗೇರ, ಡಾ. ಈರಪ್ಪ ಪತ್ತಾರ, ಪುಂಡಲಿಕ ಹೆಬ್ಬಳ್ಳಿ, ಮಾರುತಿ ಕಂಬಾರ, ಸುರೇಶ್ ಕಂಬಾರ, ಜನಾರ್ದನ ಬಡಿಗೇರ, ವಿಜಯ ಪತ್ತಾರ, ಮನೋಹರ ಬಡಿಗೇರ, ಕೃಷ್ಣಾ ಕಡಕೋಳ, ಗೀತಾ ಸುತಾರ,ಆನಂದ ಪತ್ತಾರ, ಪದ್ಮಶ್ರೀ ಪತ್ತಾರ, ರವಿಶಂಕರ ಪತ್ತಾರ, ವೈಶಾಲಿ ಸುತಾರ, ಅರ್ಚನಾ ಮೇಸ್ತ್ರಿ, ಭರತ ಶಿರೋಡಕರ, ಸಿ.ವಾಯ್ ಪತ್ತಾರ, ಪುಂಡಲೀಕ ಬಡಿಗೇರ, ಸುರೇಶ ಬಡಿಗೇರ, ಎಸ್.ಕೆ ಪತ್ತಾರ, ಎಲ್ ಎನ್ ಸುತಾರ,ಉಮೇಶ್ ಪತ್ತಾರ, ಪ್ರಭಾ ಪತ್ತಾರ, ಸಾವಿತ್ರಿ ಕಮ್ಮಾರ, ಮಂಜುಳಾ ಪೋತದಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ನಗರ: ನೀರು ಸರಬರಾಜಿನಲ್ಲಿ ವ್ಯತ್ಯಯ
ಹಿಡಕಲ್ ಜಲಾಶಯ ಮೂಲಕ ಬೆಳಗಾವಿ ನಗರಕ್ಕೆ ನೀರು ಸರಬಾರಾಜಾಗುವ ಮುಖ್ಯ ಕೊಳವೆ ಮಾರ್ಗದ ಕಣಬರ್ಗಿ ಹತ್ತಿರ ಸೋರಿಕೆಯ ದುರಸ್ತಿ ಹಾಗೂ ಖನಗಾಂವ ಗ್ರಾಮದ ನೀರಿನ ಸಂಪರ್ಕವನ್ನು ದುರಸ್ತಿ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಸೆಪ್ಟಂಬರ್ ೧೯ ರಿಂದ ಸೆಪ್ಟಂಬರ್ ೨೦ ರವರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿಲಿದ್ದು ನಾಗರಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೇಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಸವದತ್ತಿ ತಾಲೂಕಿನ ವ್ಯಾಪ್ತಿಯ ಒಟ್ಟು ೦೬ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ, ನಿರಂತರ ಗೈರು ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವ್ಹಿ. ಆರ್. ಡಬ್ಲ್ಯೂ.) ಹುದ್ದೆಗಳನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಮಾಸಿಕ ರೂ.೩೦೦೦ ಗಳ ಗೌರವ ಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅಕ್ಟೋಬರ ೨೫ ರ ಸಂಜೆ ೫ ಗಂಟೆಯೊಳಗಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ, ಸವದತ್ತಿ ಇವರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಸವದತ್ತಿ ತಾಲೂಕಿನ ಅಕ್ಕಿಸಾಗರ, ಮಲ್ಲೂರ, ಹಾರುಗೊಪ್ಪ, ಶಿಂದೋಗಿ, ಕಗದಾಳ, ಮರಕುಂಬಿ ಗ್ರಾಮ ಪಂಚಾಯತಿಗಳಲ್ಲಿ ತಲಾ ಒಂದರಂತೆ ಖಾಲಿ ಇರುವ ಹುದ್ದೆಗಳಿಗೆ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸಂಬಂಧಪಟ್ಟ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಥವಾ ಎಂ.ಆರ್.ಡಬ್ಲ್ಯೂ ಅವರನ್ನು ಸಂಪರ್ಕಿಸುವುದು ಎಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಷರತ್ತುಗಳು :
ಅರ್ಜಿದಾರರು ವಿಕಲಚೇತನರಿದ್ದು, ಕನಿಷ್ಟ ೪೦% ರಷ್ಟು ವಿಕಲತೆ ಪ್ರಮಾಣ ಹೊಂದಿರತಕ್ಕದ್ದು, ಅರ್ಜಿದಾರರು ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೊಳಪಟ್ಟಿರಬೇಕು, ಅರ್ಜಿದಾರರು ಕನಿಷ್ಠ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕು ಮತ್ತು ಕಂಪ್ಯೂಟರ ಜ್ಞಾನ ಹೊಂದಿರತಕ್ಕದ್ದು, ಅರ್ಜಿದಾರರು ಅರ್ಜಿ ಸಲ್ಲಿಕೆ ಕೊನೆಯ ದಿನ ಅಕ್ಟೋಬರ ೨೫ ಕ್ಕೆ ಕನಿಷ್ಠ ೧೮ ವರ್ಷ ಹಾಗೂ ಗರಿಷ್ಠ ೪೫ ವರ್ಷ ವಯೋಮಿತಿಯಲ್ಲಿರಬೇಕು, ವಿಕಲಚೇತನ ಮಹಿಳಾ, ಪ.ಜಾತಿ ಮತ್ತು ಪ. ಪಂಗಡದ ಅಭ್ಯರ್ಥಿಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ವೃದ್ಧಾಶ್ರಮಕ್ಕೆ ಪ್ರವೇಶ ಪ್ರಾರಂಭ
೨೦೧೯-೨೦ ನೇ ಸಾಲಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಡಿ ಡಾ. ಬಿ. ಆರ್. ಅಂಬೇಡ್ಕರ್ ಹರಿಜನ ಶಿಕ್ಷಣ ಸಂಸ್ಥೆಯ ಮುಖಾಂತರ ಬೆಳಗಾವಿ ನಗರದಲ್ಲಿ ಉದ್ಯೋಗಸ್ಥ ವಿಕಲಚೇತನ ಮಹಿಳೆಯರಿಗಾಗಿ ಹಾಗೂ ವಿಕಲಚೇತನ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಕ್ಕೆ ಹಾಗೂ ವಯೋವೃದ್ಧರಿಗಾಗಿ ವೃದ್ಧಾಶ್ರಮಕ್ಕೆ ಪ್ರವೇಶ ಪ್ರಾರಂಭವಾಗಿರುತ್ತದೆ.
ಆಸಕ್ತಿಯುಳ್ಳ ಉದ್ಯೋಗಸ್ಥ ವಿಕಲಚೇತನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಅಂಗವಿಕಲ ಮಹಿಳಾ ವಸತಿ ನಿಲಯ, ಹಳೆ ಮೈಸೂರು ಬ್ಯಾಂಕ್ ಹಿಂಬಾಗ, ಮಹಾಂತೇಶ ನಗರ, ಬೆಳಗಾವಿ ವಿಳಾಸದಲ್ಲಿರುವ ವಸತಿ ನಿಲಯಕ್ಕೆ ದಾಖಲಾಗಲು ಹಾಗೂ ಅನಾಥ, ನಿರ್ಗತಿಕ ವಯೋವೃದ್ಧರು ಬೆಳಗಾವಿ- ಅನಗೋಳ ಡಾ. ಅಂಬೇಡ್ಕರ್ ನಗರ, ಶ್ರೀ ಮಲ್ಲಿಕಾರ್ಜುನ ವಿದ್ಯಾಪೀಠ ಕಟ್ಟಡ, ಶ್ರೀ ಸಾಯಿನಾಥ ವೃದ್ಧಾಶ್ರಮಕ್ಕೆ ದಾಖಲಾಗುವಂತೆ ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಕಾರರ ಸಾಲ ಮನ್ನಾ: ಸೆ.೧೯ ರಂದು ಕಾರ್ಯಾಗಾರ
ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿದೋದ್ದೇಶ ಸಹಕಾರಿ ಸಂಘಗಳು, ಕೈಗಾರಿಕಾ ಸಹಕಾರಿ ಬ್ಯಾಂಕುಗಳು, ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ಧ ಸಹಕಾರಿ ಸಂಘ/ ಸೌಹಾರ್ಧ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ೨೦೧೨ರ ಜುಲೈ ರಿಂದ ಸಾಲ ಪಡೆದು ೨೦೧೯ರ ಮಾರ್ಚ ೩೧ಕ್ಕೆ ಹೊಂದಿದ ಹೊರಬಾಕಿಯಲ್ಲಿ ಅಸಲು ಮತ್ತು ಬಡ್ಡಿ ಸೇರಿ ಗರಿಷ್ಟ ರೂ.೧,೦೦,೦೦೦-೦೦ (ಒಂದು ಲಕ್ಷಗಳ) ಗಳ ಮೊತ್ತವನ್ನು ಮನ್ನಾ ಮಾಡಲು ಅವಕಾಶವಿರುತ್ತದೆ ಎಂದು ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಅದರಂತೆ ಈಗಾಗಲೇ ವೆಬ್‌ಐಡಿ ಹೊಂದಿದ ಸಂಸ್ಥೆ/ ಬ್ಯಾಂಕುಗಳು ವೆಬ್ ಪೊರ್ಟಲ್‌ಗೆ ತಮ್ಮ ಸಂಸ್ಥೆ/ ಬ್ಯಾಂಕುಗಳ ಸಾಲಮನ್ನಾ ಬಿಲ್ಲುಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಹಾಗೂ ವೆಬ್ ಪೊರ್ಟಲ್‌ಗೆ ಹೊಸದಾಗಿ ಸೆರ್ಪಡೆಯಾಗ ಬಯಸುವ ಸಂಸ್ಥೆ/ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಈಗಾಗಲೇ ವೆಬ್‌ಐ.ಡಿ ಹೊಂದಿದ ಸಂಸ್ಥೆ/ ಬ್ಯಾಂಕುಗಳು ಸಪ್ಟೆಂಬರ್ ೧೯ ರಂದು ದಿ.ಬೆಳಗಾವಿ ಇಂಡಸ್ಟ್ರೀಯಲ್ ಕೋ.ಆಫ್.ಬ್ಯಾಂಕ್ ಡಾ|| ಎಸ್.ಪಿ.ಎಮ್. ರೋಡ, (ಕೇಂದ್ರ ಕಚೇರಿ) ಬೆಳಗಾವಿ ಸಭಾಂಗಣದಲ್ಲಿ ಸದರಿ ಯೋಜನೆಯ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಸದರಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ ಉದ್ಯಮಬಾಗ ಬೆಳಗಾವಿ ದೂರವಾಣಿ ಸಂಖ್ಯೆ: ೦೮೩೧-೨೪೦೭೨೩೭, ೦೮೩೧-೨೪೪೩೨೪೬ ಇವರ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ