
ಇಂದು ಕೆಎಂಎಫ್ ಚುನಾವಣೆ: ಬಾಲಚಂದ್ರ ಜಾರಕಿಹೊಳಿ ಆಯ್ಕೆ ಖಚಿತ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಜ್ಯ ರಾಜಕೀಯದ ಪ್ರಸ್ತುತ ಸಂದರ್ಭದಲ್ಲಿ ಭಾರೀ ಕುತೂಹಲ ಮೂಡಿಸಿರುವ ರಾಜ್ಯ ಹಾಲು ಮಹಾಮಂಡಳ (ಕೆಎಎಫ್) ಚುನಾವಣೆ ಇಂದು ನಡೆಯಲಿದೆ.
10.30ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ – ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ?
ಕೆಎಂಎಫ್ ಚೇರಮನ್ ಆಗಿ ಅರಬಾವಿ ಶಾಸಕ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗುವುದು ಬಹುತೇಕ ಖಚಿತ. ಈಗಾಗಲೆ (ಜುಲೈ 28ರಂದು ಚುನಾವಣೆ ಮುಂದೂಡುವ ಮುನ್ನ) ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪರ್ಧೆಯಲ್ಲಿದ್ದರೂ ಹೆಸರಿಗೆ ಮಾತ್ರ. ಅವರು ಮತ ಚಲಾಯಿಸಲು ಬರುವುದೂ ಡೌಟ್. ಇನ್ನೋರ್ವ ಆಕಾಂಕ್ಷಿ ಭೀಮಾ ನಾಯಕ್ ಕೂಡ ಬಾಲಚಂದ್ರ ಜಾರಕಿಹೊಳಿ ಬೆಂಬಲಿಸುವ ಸಾಧ್ಯತೆ ಇದೆ.
11ಕ್ಕೂ ಹೆಚ್ಚು ಸದಸ್ಯರು ಬಾಲಚಂದ್ರ ಜಾರಕಿಹೊಳಿ ಪರವಾಗಿದ್ದು, ಅಧಿಕಾರಿಗಳೂ ಅವರ ಪರವಾಗಿಯೇ ಮತ ಹಾಕಲಿದ್ದಾರೆ. ಹಾಗಾಗಿ ಅವರು ಪ್ರಯಾಸವಿಲ್ಲದೆ ಆಯ್ಕೆಯಾಗಲಿದ್ದಾರೆ.
ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಬಾಲಚಂದ್ರ ಮನವಿ ಮಾಡಿದ್ದರು. ಆದರೆ ರೇವಣ್ಣ ಈ ಹಿಂದೆಯೇ (ತಡೆಯಾಜ್ಞೆ ಬರುವುದಕ್ಕೂ ಮೊದಲೇ) ನಮಾಪತ್ರ ಸಲ್ಲಿಸಿದ್ದರು. ಅವರು ನಾಮಪತ್ರ ಹಿಂಪಡೆಯುವುದಕ್ಕೂ ಬರುವ ಸಾಧ್ಯತೆ ಇಲ್ಲದಿರುವುದರಿಂದ ಚುನಾವಣೆ ಅನಿವಾರ್ಯವಾಗಲಿದೆ.
ಕಳೆದ ಜುಲೈ 27ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಸರಕಾರ ಹಠಾತ್ ಅದನ್ನು ಮುಂದೂಡಿತ್ತು. ಆ ನಂತರದ ಬೆಳವಣಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್ ನಿರ್ದೇಶಕರನ್ನಾಗಿ ಸರಕಾರ ನಾಮಕರಣ ಮಾಡಿತ್ತು. ಮಂತ್ರಿಸ್ಥಾನದ ಆಕಾಂಕ್ಷಿಯಾಗಿದ್ದ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಲುವಾಗಿಯೇ ಚುನಾವಣೆ ಮುಂದೂಡಿ, ಅವರನ್ನು ನಾಮಕರಣ ಮಾಡಲಾಗಿದೆ.
ಮಂತ್ರಿಮಂಡಳದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇರ್ಪಡೆ (ನ್ಯಾಯಾಲಯದ ತೀರ್ಮಾನದ ನಂತರ) ಖಚಿತವಾಗಿದ್ದರಿಂದ ಒಂದೇ ಕುಟುಂಬದ ಇಬ್ಬರನ್ನು ಸೇರಿಸಿಕೊಳ್ಳುವ ಸಮಸ್ಯೆಯಿಂದ ಪಾರಾಗಲು ಬಾಲಚಂದ್ರ ಅವರಿಗೆ ಕೆಎಎಫ್ ಅಧ್ಯಕ್ಷಸ್ಥಾನ ನೀಡಲು ನಿರ್ಧರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ