Kannada NewsKarnataka NewsLatest

ಬೆಳಗಾವಿಗರ ಸಹನೆ, ತ್ಯಾಗಕ್ಕೆ ಶೀಘ್ರವೇ ಸಿಗಲಿದೆ ರಾಷ್ಟ್ರೀಯ ಮಾನ್ಯತೆ; ಬೆಳಗಾವಿಯಲ್ಲಿ ನೋಡೋದಕ್ಕೇನಿದೆ ಅನ್ನೋರಿಗೂ ಸಿಗಲಿದೆ ಉತ್ತರ

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ರಾಷ್ಟ್ರದಲ್ಲೇ ವಿಶಿಷ್ಠ, ಏಕೆ? 

Belgaum Smart City Project is unique in the country, Why?

 

ಪ್ರಗತಿ ಮೀಡಿಯಾ ಹೌಸ್/ ಪ್ರಗತಿವಾಹಿನಿ  ಎಕ್ಸಕ್ಲೂಸಿವ್ 

Pragati Media House/ Pragativahini Exclusive

ಎಂ.ಕೆ.ಹೆಗಡೆ, ಬೆಳಗಾವಿ – ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಆಯ್ಕೆಗೊಂಡಾಗ ಕುಣಿದಾಡಿದ ಜನರೇ ಈಗ ಸ್ಮಾರ್ಟ್ ಸಿಟಿ ಯೋಜನೆ ಯಾಕಾದರೂ ಬಂತಪ್ಪ ಎಂದು ಸಂಕಟಪಡುವಂತಾಗಿದೆ. ಅಷ್ಟರಮಟ್ಟಿಗೆ ಹೈರಾಣಾಗಿದ್ದಾರೆ ಜನ.

ಆದರೂ ಸಹನೆಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನಮ್ಮ ನಗರ ಸ್ಮಾರ್ಟ್ ಆಗಲಿದೆ, ಬರುವ ದಿನಗಳು ಸುಂದರವಗಲಿದೆ ಎನ್ನುವ ಮಹಾನಿರೀಕ್ಷೆ.

ಬೆಳಗಾವಿ ಜನರು ಇಷ್ಟು ದಿನಗಳಿಂದ ಸಹಿಸಿಕೊಂಡಿದ್ದಕ್ಕೆ ಹಾಗೂ ಅಪರೂಪದ ಯೋಜನೆ ಜಾರಿಗಾಗಿ ಮಾಡಿದ ತ್ಯಾಗಕ್ಕೆ ರಾಷ್ಟ್ರಮಟ್ಟದ ಮಾನ್ಯತೆ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ರಾಷ್ಟ್ರದಲ್ಲೇ ವಿಶಿಷ್ಟವಾಗಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಅತೀ ಶೀಘ್ರದಲ್ಲಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ. ರಾಷ್ಟ್ರದ ಸ್ಮಾರ್ಟ್ ಸಿಟಿಗಳಲ್ಲೇ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸಿದ ಮೊದಲ ನಗರವಾಗುವ ನಿರೀಕ್ಷೆಯೂ ಗರಿಗೆದರಿದೆ.

ಬಾಲಗ್ರಹಪೀಡೆ

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಬಾಲಗ್ರಹಪೀಡೆ ಅಂಟಿಕೊಂಡಿದ್ದು ನಿಜ. ಆರಂಭದಲ್ಲಿ ಹಲವಾರು ವಿಘ್ನಗಳನ್ನು ಎದುರಿಸಿದೆ. ಇದರಿಂದಾಗಿ ಕಾಮಗಾರಿ ಒಂದು ಸ್ಪಷ್ಟ ಸ್ವರೂಪ ಪಡೆಯುವಲ್ಲಿ ವಿಳಂಬವಾಯಿತು. ವಿಳಂಬಕ್ಕೆ ಪ್ರಮುಖ ಕಾರಣಗಳು:

  1. ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ಸ್ಥಾಪನೆ ವಿಳಂಬ
  2. ಅದಕ್ಕೆ ರಾಜ್ಯ ಸರಕಾರ ನೀಡಬೇಕಿದ್ದ ಅಧಿಕಾರ ನೀಡುವಲ್ಲಿ ವಿಳಂಬ
  3. 4-5 ಬಾರಿ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ
  4. ತಜ್ಞ ಸಿಬ್ಬಂದಿ ಕೊರತೆ, ಪಿಎಂಸಿ ಗೊಂದಲ
  5. ಹಲವು ಬಾರಿ ಯೋಜನೆಗಳ ಬದಲಾವಣೆ
  6. ಎಬಿಡಿ ಏರಿಯಾ ಬದಲಾವಣೆ
  7. ಜನಪ್ರತಿನಿಧಿಗಳ ಬದಲಾವಣೆ
  8. ಕೆಲವೆಡೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು

ಆದರೆ ಕಳೆದ 3-4 ತಿಂಗಳಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ನಗರದ ಎಲ್ಲ ಕಡೆಗಳಲ್ಲಿ ಏಕಕಾಲದಲ್ಲಿ ಹಲವಾರು ಕಾಮಗಾರಿಗಳನ್ನು ಆರಂಭಿಸಲಾಯಿತು. ಈಗ ಸ್ಮಾರ್ಟ್ ಸಿಟಿ ಯೋಜನೆಯ 64 ಕಾಮಗಾರಿಗಳು ಏಕಕಾಲದಲ್ಲಿ ಒಂದಲ್ಲ ಒಂದು ಹಂತದಲ್ಲಿ ನಡೆಯುತ್ತಿವೆ. ಇದರಿಂದಾಗಿ ಜನರು ತೀವ್ರ  ಸಂಕಷ್ಟ ಅನುಭವಿಸುವಂತಾಯಿತು. ಆದರೂ ತಾಳ್ಮೆಯಿಂದ ಸಹಿಸಿಕೊಂಡಿದ್ದಾರೆ.

ಪ್ರಮುಖ ಯೋಜನೆಗಳು

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಟ್ಟೂ 100 ಕಾಮಗಾರಿಗಳಿವೆ. ಅವುಗಳಲ್ಲಿ 14 ಪೂರ್ಣಗೊಂಡಿವೆ. 64 ಚಾಲನೆಯಲ್ಲಿದೆ. 14 ಟೆಂಡರ್ ಮುಗಿದು ಕೆಲಸದ ಆದೇಶ ನೀಡಲಾಗಿದೆ. 8 ಡಿಪಿಆರ್ ಹಂತದಲ್ಲಿದೆ.

ಪಿಪಿಪಿ ಮಾಡೆಲ್ ನಲ್ಲಿ 395 ಕೋಟಿ ರೂ.ಗಳ 7 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 3 ಕಾಮಗಾರಿಗೆ ಟೆಂಡರ್ ಕರೆದು ಕೆಲಸದ ಆದೇಶ ನೀಡಲಾಗಿದೆ. 1 ಡಿಪಿಆರ್ ಹಂತದಲ್ಲಿ ಹಾಗೂ 3 ಕಾನ್ಸೆಪ್ಟ್ ತಯಾರಿ ಹಂತದಲ್ಲಿದೆ.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಯುನಿಕ್ ಯೋಜನೆಯಾದ ಸ್ಮಾರ್ಟ್ ಕ್ಲಾಸ್ ರೂಂ 11 ಶಾಲೆಗಳಲ್ಲಿ ಜಾರಿಯಾಗಿದೆ. ಇದಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ಬಂದಿದೆ. 5 ಬಸ್ ಶೆಲ್ಟ್ ನಿರ್ಮಾಣ ಮಾಡಲಾಗಿದ್ದು, ಇನ್ನೂ 35 ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

5 ಕಡೆ ವಾಟರ್ ಕಿಯೋಸ್ಕ್ ಸ್ಥಾಪನೆಯಾಗಿದ್ದು, ಇನ್ನೂ 7 ಕಡೆ ಕಾಮಗಾರಿ ಆರಂಭವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ  ಅತ್ಯಾಧುನಿಕ ಟ್ರಾಮಾ ಸೆಂಟರ್ ಸ್ಥಾಪನೆ ಮಾಡಲಾಗಿದ್ದು, ಸುಸಜ್ಜಿತ ಅಂಜುಲೆನ್ಸ್ ದೇಣಿಗೆ ನೀಡಲಾಗಿದೆ. 31 ಲಕ್ಷ ರೂ. ವೆಚ್ಚದಲ್ಲಿ 65 ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಶಿನ್ ಅಳವಡಿಸಲಾಗಿದೆ.

74 ಲಕ್ಷ ರೂ. ವೆಚ್ಚದಲ್ಲಿ ಬಿಡಾಡಿ ದನಗಳ ಪುನರ್ವಸತಿ ಕೇಂದ್ರ ನಿರ್ಮಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಪಾರ್ಕ್ ಗಳಲ್ಲಿ ಮಳೆ ನೀರು ಕೊಯ್ಲು ಕಾಮಗಾರಿ ನಡೆಸಲಾಗಿದೆ.

ರಸ್ತೆಗೇಕೆ ಪ್ರಾಧಾನ್ಯತೆ?

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಅತೀ ಹೆಚ್ಚು ಹಣ ಒದಗಿಸಲಾಗಿದೆ. ಒಟ್ಟೂ 450 ಕೋಟಿ ರೂ.ಗಳನ್ನು ರಸ್ತೆಗಾಗಿಯೇ ವ್ಯಯಿಸಲಾಗುತ್ತಿದೆ. ರಸ್ತೆ ನಿರ್ಮಾಣ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಮೊದಲಾದವುಗಳ ಕೆಲಸ. ಅದಕ್ಯಾಕೆ ಸ್ಮಾರ್ಟ್ ಸಿಟಿ ಇಷ್ಟೊಂದು ಹಣ ಖರ್ಚು ಮಾಡಬೇಕೆನ್ನುವ ಪ್ರಶ್ನೆಯೂ ಎದ್ದಿತ್ತು.

ಸ್ಮಾರ್ಟ್ ಸಿಟಿ ಯೋಜನೆ ಪ್ರಸ್ತಾವನೆ ಸಿದ್ದಪಡಿಸುವಾಗ ಸಾರ್ವಜನಿಕರಿಂದ ಅಹವಾಲು ಆಹ್ವಾನಿಸಲಾಗಿತ್ತು. ಒಟ್ಟೂ 1.60 ಲಕ್ಷ ಸಲಹೆಗಳು ಬಂದಿದ್ದವು. ಇವುಗಳಲ್ಲಿ, ಬೆಳಗಾವಿ ನಗರದ ರಸ್ತೆಗಳು ಮತ್ತು ಸಂಚಾರ ಅವ್ಯವಸ್ಥೆ ಕುರಿತೇ ಹೆಚ್ಚಿನ ಪ್ರಸ್ತಾವನೆಗಳಿದ್ದವು. ಜನರ ಮೊದಲ ಅಪೇಕ್ಷೆ ರಸ್ತೆಗಳ ಅಭಿವೃದ್ಧಿ ಎನ್ನುವುದು ಇದರಿಂದ ಗೊತ್ತಾಗಿತ್ತು.

ಮಹಾನಗರ ಪಾಲಿಕೆಯೇ ತನ್ನ ಇತಿಮಿತಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕೆಂದರೆ ಇನ್ನೂ ನೂರು ವರ್ಷ ಬೇಕಾಗಿತ್ತು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 3 ಮಾದರಿಯ ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ.

  1. ಸ್ಮಾರ್ಟ್ ರಸ್ತೆ -ಹೆಸ್ಕಾಂ ರಸ್ತೆ ಮತ್ತು ಮಂಡೋಳಿ ರಸ್ತೆ. ಇವು ಡೆಮೋ ರಸ್ತೆಗಳಾಗಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಡಕ್ಟ್ ಅಳವಡಿಸಲಾಗಿದೆ.
  2. ವೈಟ್ ಟಾಪಿಂಗ್ ರಸ್ತೆಗಳು -ಇದರಲ್ಲಿ 15 ಮೀಟರ್ ಗೆ ಒಂದು ಕ್ರಾಸ್ ಡ್ರೈನ್ ಅಳವಡಿಸಲಾಗಿದೆ. ಪುಟ್ ಪಾತ್, ಸೈಕಲ್ ಟ್ರ್ಯಾಕ್ (ಸ್ಥಳಾವಕಾಶವಿರುವಲ್ಲಿ), ಮೀಡಿಯನ್ ಇಂಪ್ರೂವ್ ಮೆಂಟ್ ಮಾಡಲಾಗಿದೆ.
  3. ಪೇವರ್ಸ್ ರಸ್ತೆಗಳು -ನಗರದ ಒಳಗಿನ ರಸ್ತೆಗಳನ್ನು ಪೇವರ್ಸ್ ಹಾಕಿ ಅಭಿವೃದ್ಧಿಪಡಿಸಲಾಗುತ್ತಿದೆ.

ರಸ್ತೆ ಅಗಲವಾಗಿರುವ ಕಡೆ ಬೈಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ಕಣಬರ್ಗಿ ರಸ್ತೆ, ಬಾಕ್ಸೈಟ್ ರಸ್ತೆ, ಎಪಿಎಂಸಿ ರಸ್ತೆ, ಹನುಮಾನ್ ನಗರ ರಸ್ತೆಗಳಲ್ಲಿ ಬೈಸಿಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ.

11 ರಸ್ತೆಗಳಲ್ಲಿ ಭೂಗತವಾಗಿ ಹೆಸ್ಕಾಂ ಕೇಬಲ್ ಅಳವಡಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಇನ್ನು ಮುಂದೆ ಹೆಸ್ಕಾಂ ಲೈನ್ ಕಾಣಿಸುವುದಿಲ್ಲ.

ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್

ಸ್ಮಾರ್ಟ್ ಸಿಟಿ ಯೋಜನೆಯ ಅತ್ಯಂತ ಪ್ರಮುಖವಾದ ಯೋಜನೆ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್. ವಿಶ್ವೇಶ್ವರ ನಗರದಲ್ಲಿ 76 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಿದೆ. ಇದು ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.

 

 

ಇಡೀ ನಗರವನ್ನು ನಿಯಂತ್ರಿಸುವ ರೀತಿಯಲ್ಲಿ ಈ ಸೆಂಟರ್ ಕಾರ್ಯನಿರ್ವಹಿಸುತ್ತದೆ. 9 ಸ್ಮಾರ್ಟ್ ಪೋಲ್ಸ್, 20 ಸಾಲಿಡ್ ವೇಸ್ಟ್ ಮ್ಯಾನೇಜ್ ಮಂಟ್ ಪೋಲ್ಸ್ ಈ ಸೆಂಟರ್ ನಿಯಂತ್ರಣದಲ್ಲಿರುತ್ತವೆ. ಟ್ರಾಫಿಕ್ ಜಂಕ್ಷನ್, ಬಸ್ ಮೂವ್ ಮೆಂಟ್, ನೀರು ಸರಬರಾಜು ವ್ಯವಸ್ಥೆ ಸೇರಿದಂತೆ ಸಂಪೂರ್ಣ ವ್ಯವಸ್ಥೆಗಳನ್ನು ಒಂದೇ ಸ್ಥಳದಿಂದ ನಿಯಂತ್ರಿಸಲಾಗುತ್ತದೆ.

ಇತರ ಪ್ರಮುಖ ಯೋಜನೆಗಳು

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಒಟ್ಟೂ 100 ಕಾಮಗಾರಿ ನಡೆಯುತ್ತಿದೆ. ಅವುಗಳಲ್ಲಿ ಕೆಲವು ಹೀಗಿವೆ:

33.3 ಕೋಟಿ ರೂ. ವೆಚ್ಚದಲ್ಲಿ ನಗರ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಿಲ್ಟ್ರಿ ಅಧಿಕಾರಿಗಳ ಅಡ್ಡಿಯಿಂದಾಗಿ ಈ ಕಾಮಗಾರಿ 8-10 ತಿಂಗಳು ವಿಳಂಬವಾಗಿ ಆರಂಭವಾಯಿತು. ಈಗಲೂ 13 ಗುಂಟೆ ಜಾಗಕ್ಕೆ ಮಿಲ್ಟ್ರಿ ಸಿಬ್ಬಂದಿ ತಕರಾರು ತೆಗೆದಿದ್ದಾರೆ. ಆ ಪ್ರದೇಶ ಬಿಟ್ಟು ಕಾಮಗಾರಿ ನಡೆಸಲಾಗುತ್ತಿದೆ.

ಜಿಟಿಟಿಸಿಗೆ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ಗೆ 8 ಕೋಟಿ ರೂ. ನೀಡಲಾಗುತ್ತಿದೆ. ಸರಕಾರಿ ಜಿಟಿಟಿಸಿ ಸೆಂಟರ್ ಯಂತ್ರೋಪಕರಣ ಸೇರಿದಂತೆ ಮೂಲಭೂತ ಸೌಲಭ್ಯ ಹೆಚ್ಚಿಸಿಕೊಳ್ಳಲು ಈ ಹಣ ಬಳಸುತ್ತದೆ.

55 ಕೋಟಿ ರೂ. ವೆಚ್ಚದಲ್ಲಿ ನಗರಾದ್ಯಂತ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಲಾಗುತ್ತದೆ. ಕಣಬರ್ಗಿ ಮತ್ತು ಕೋಟೆಕೆರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮಹಾಂತೇಶ ನಗರದಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ 30 ಬೆಡ್ ಹೆರಿಗೆ ಆಸ್ಪತ್ರೆ ಮತ್ತು ವಡಗಾವಿಯಲ್ಲಿ 10 ಬೆಡ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ.

4.5 ಕೋಟಿ ರೂ. ವೆಚ್ಚದಲ್ಲಿ 56 ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಾಜಿನ ಗಾರ್ಡನ್ ಹತ್ತಿರ 3 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಲೈಬ್ರರಿ ತಲೆ ಎತ್ತಲಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 50 ಫಲಾನುಭವಿಗಳಿಗೆ ಬ್ಯಾಟರಿ ಆಪರೇಟೆಡ್ ಆಟೋರಿಕ್ಷಾಗಳನ್ನು ನೀಡಲಾಗುತ್ತಿದೆ. ತಲಾ 95 ಸಾವಿರ ರೂ. ವೆಚ್ಚದಲ್ಲಿ ಈಗಾಗಲೆ ಖರೀದಿ ಆಗಿದ್ದು, ಪರಿಶಿಷ್ಟ ಜಾತಿ, ಜನಾಂಗ, ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ನೀಡಲಾಗುವುದು.

ಬಸವೇಶ್ವರ ಸರ್ಕಲ್ ನಿಂದ ನಾಥ ಪೈ ಸರ್ಕಲ್ ವರೆಗೆ 10 ಕೋಟಿ ರೂ. ವೆಚ್ಚದಲ್ಲಿ ಹಾಕರ್ಸ್ ಝೋನ್ ನಿರ್ಮಾಣವಾಗಲಿದೆ.

ವ್ಯಾಕ್ಸಿನ್ ಡಿಪೋದಲ್ಲಿ ಆಗಲಿದೆ ಯುನಿಕ್ ಯೋಜನೆ

ಬೆಳಗಾವಿ ಸ್ಮಾರ್ಟ್ ಸಿಟಿಯ ಅತ್ಯಂತ ಯುನಿಕ್ ಯೋಜನೆ ವ್ಯಾಕ್ಸಿನ್ ಡಿಪೋದಲ್ಲಿ ನಿರ್ಮಾಣವಾಗಲಿದೆ. ಜನರು ಇಲ್ಲಿಗೆ ಬಂದು ಇಡೀ ದಿನ ಕಳೆಯುವಂತಹ ಪಿಕ್ ನಿಕ್ ಸ್ಪಾಟ್ ಮಾಡುವ ಯೋಜನೆ ಎಸ್ ಪಿವಿಯದ್ದು.

ಇದೊಂದು ನಾಲೆಡ್ಜ್ ಪಾರ್ಕ್ ಕೂಡ ಆಗಲಿದೆ. ಇಲ್ಲಿ ಫುಡ್ ಸ್ಟಾಲ್ ಗಳು ಕೂಡ ಇರಲಿದೆ. ಬೆಳಗಾವಿಯಲ್ಲಿ ನೋಡುವುದಕ್ಕೆ ಏನಿದೆ ಕೇಳಿದರೆ ಬನ್ನಿ, ವ್ಯಾಕ್ಸಿನ್ ಡಿಪೋಕ್ಕೆ ಎಂದು ಎದೆ ತಟ್ಟಿ ಹೇಳುವ ರೀತಿಯಲ್ಲಿ ನಿರ್ಮಾಣವಾಗಲಿದೆ.

35 ಕೋಟಿ ರೂ. ವೆಚ್ಚದಲ್ಲಿ ಹೆರಿಟೇಜ್ ಪಾರ್ಕ್, 12 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಭಾರತ ಮತ್ತು  ಆರ್ಟ್ ಗ್ಯಾಲರಿ ನಿರ್ಮಾಣವಾಗಲಿದೆ.

ವ್ಯಾಕ್ಸಿನ್ ಡಿಪೋದಲ್ಲಿ ಮಾಡೆಲ್ ಏರ್ಪೋರ್ಟ್ ನಿರ್ಮಾಣವಾಗಲಿದೆ. ಫ್ಲೈಟ್ ಯಾವರೀತಿಯಲ್ಲಿ ಟೇಕ್ ಆಫ್, ಲ್ಯಾಂಡಿಂಗ್ ಆಗಲಿದೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುತ್ತದೆ. ಹೆಲಿಕಾಪ್ಟರ್ ಮಾಡೆಲ್ ಇಡಲಾಗುತ್ತದೆ.

ಏರ್ ಪೋರ್ಟ್ ಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುವ ಯುನಿಕ್ ಪ್ರೊಜೆಕ್ಟ್ ಇದು.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಯುನಿಕ್, ಏಕೆ?

  1. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡ ಒಟ್ಟೂ ಯೋಜನೆಗಳ ಸಂಖ್ಯೆ 100.
  2. ಸ್ಮಾರ್ಟ್ ಕ್ಲಾಸ್ ರೂಂ ಪ್ರೊಜೆಕ್ಟ್ ರಾಷ್ಟ್ರದಲ್ಲೇ ವಿಶಿಷ್ಟ, ಈಗಾಗಲೆ ಅವಾರ್ಡ್ ಗೂ ಪಾತ್ರವಾಗಿದೆ. 
  3. ಇಲ್ಲಿಯಷ್ಟು ವೈವಿದ್ಯಮಯ ಯೋಜನೆಗಳು ಬೇರೆ ಯಾವುದೇ ಸ್ಮಾರ್ಟ್ ಸಿಟಿಯಲ್ಲಿಲ್ಲ.
  4. ಇಲ್ಲಿಯ ವ್ಯಾಕ್ಸಿನ್ ಡಿಪೋದಲ್ಲಿ ಜಾರಿಯಾಗುತ್ತಿರುವ ಯೋಜನೆ -ಹೆರಿಟೇಜ್ ಪಾರ್ಕ್ ಬೆಳಗಾವಿಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಲಿದೆ.

 

Rank ನಲ್ಲಿ ಹಿಂದುಳಿದಂತೆ ಕಾಣುವುದೇಕೆ?

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ರಾಷ್ಟ್ರಮಟ್ಟದ Ranking ನಲ್ಲಿ 30-35ನೇ ಸ್ಥಾನದಲ್ಲಿ ಕಾಣುತ್ತಿದೆ. ಇದಕ್ಕೆ ಕಾರಣ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳ ಸಂಖ್ಯೆ ಮತ್ತು ಮೊತ್ತ. ಬೇರೆ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಕನ್ವರ್ಜನ್ ಪ್ರೊಜೆಕ್ಟ್ ಸೇರಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಒಟ್ಟೂ ಮೊತ್ತ 1200 -1500 ಕೋಟಿ ರೂ.

ಆದರೆ ಬೆಳಗಾವಿಯಲ್ಲಿ ಇದರ ಮೊತ್ತ 3,600 ಕೋಟಿ ರೂ. ಈ ಮೊತ್ತದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಮೊತ್ತವನ್ನು ವಿಭಾಗಿಸಿದಾಗ ಸಹಜವಾಗಿ ಬೆಳಗಾವಿ ಹಿಂದೆ ಬಿದ್ದಿರುವಂತೆ ಕಾಣುತ್ತದೆ. ಆದಾಗ್ಯೂ ಕಳೆದ 3 ತಿಂಗಳಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಶರವೇಗದಲ್ಲಿ ಮುನ್ನಡೆಯುತ್ತಿದೆ. ಬರುವ ಜೂನ್ ಹೊತ್ತಿಗೆ ಬಹುಪಾಲು ಕಾಮಗಾರಿಗಳು ಪೂರ್ಣಗೊಂಡು ರಾಷ್ಟ್ರಮಟ್ಟದಲ್ಲೇ ಗುರುತಿಸಲ್ಪಡಲಿದೆ.

ಶಶಿಧರ ಕುರೇರ

ಸ್ಮಾರ್ಟ್ ಸಿಟಿ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿಯಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ನಿಜವಾದರೂ ಅದು ಅನಿವಾರ್ಯವಾಗಿದೆ. ಇಡೀ ನಮ್ಮ ತಂಡ ಹಗಲು, ರಾತ್ರಿ ಕೆಲಸ ಮಾಡುತ್ತಿದೆ.  ಬೆಳಗಾವಿ ಜನರಿಗೆ ಒಂದು ಯುನಿಕ್ ಯೋಜನೆ ಕೊಡುತ್ತಿರುವ ತೃಪ್ತಿ ನಮಗಿದೆ.

-ಶಶಿಧರ ಕುರೇರ್, ಸ್ಮಾರ್ಟ್ ಸಿಟಿ ಎಂಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button