Kannada NewsKarnataka News

ಬೆಳಗಾವಿಯಲ್ಲೂ ರೆಮ್ ಡಿಸಿವರ್ ಮಾರುತ್ತಿದ್ದ ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರ ಸಿಸಿಬಿ ತಂಡ ದಾಳಿ ನಡೆಸಿ ಅಕ್ರಮವಾಗಿ ರೆಮ್‌ಡಿಸಿವರ್ ಔಷಧಿಯನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದೆ.
ನಗರದಲ್ಲಿ ಕೋವಿಡ್-೧೯ ರೋಗಿಗಳಿಗೆ ನೀಡುವ ರೆಮ್‌ಡಿಸಿವರ್ ಔಷಧಿಯನ್ನು ಅಕ್ರಮ/ಕಾಳ ಸಂತೆಯಲ್ಲಿ ಮಾರಾಟ ಮಾಡುವಂಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಡಾ|| ತ್ಯಾಗರಾಜನ್. ಕೆ. ಪೊಲೀಸ್ ಆಯುಕ್ತರು, ಸಿಟಿ ಕ್ರೈಂ ಬ್ರಾಂಚನ್ ಪಿಐ   ನಿಂಗನಗೌಡ ಪಾಟೀಲ ರವರಿಗೆ ಸೂಚಿಸಿದ್ದರು.

 ಸಿಕ್ಕ ಖಚಿತ ಮಾಹಿತಿಯಂತೆ  ಆರೋಪಿಯೊಂದಿಗೆ ತಮ್ಮ ಸಿಬ್ಬಂದಿಯೊಬ್ಬರ ಮುಖಾಂತರ ಸಾಮಾನ್ಯ ನಾಗರಿಕರಂತೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಕುಂಟುಂಬ ಸದಸ್ಯರಿಗೆ ರೆಮ್‌ಡಿಸಿವರ್ ಔಷಧಿ ಅವಶ್ಯವಿದ್ದು ಔಷಧಿ ಕೊಡಲು ತಿಳಿಸಿ ಅವರು ಹೇಳಿದ ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿ, ನಗರದ ಪ್ರಮುಖ ಹೋಟೇಲ್ ಬಳಿ ಬರಲು ತಿಳಿಸಿ ಅಕ್ರಮ ಚುಚ್ಚುಮದ್ದನ್ನು ಮಾರಾಟ ಮಾಡುವುದು ಖಚಿತವಾದಾಗ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಯಿತು.
ಆರೋಪಿತರಾದ  ಮಂಜುನಾಥ ದುಂಡಪ್ಪ ದಾನವಾಡಕರ, (೩೫) (ಸಾ: ರಾಮಪೂರ, ತಾ: ರಬಕವಿ-ಬನಹಟ್ಟಿ, ಜಿ: ಬಾಗಲಕೋಟೆ, ಸಧ್ಯ ಸಮರ್ಥಗಲ್ಲಿ ಶಾಹೂನಗರ, ಬೆಳಗಾವ ಮತ್ತು ಸಂಜೀವ ಚಂದ್ರಶೇಖರ ಮಾಳಗಿ, (೩೩) (ಸಾ: ನಯಾನಗರ, ತಾ: ಬೈಲಹೊಂಗಲ, ಜಿ: ಬೆಳಗಾವಿ, ಸಧ್ಯ ಶಿವಾಜಿ ನಗರ, ಬೆಳಗಾವಿ) ಇವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಇಬ್ಬರೂ ನಗರದ ಖಾಸಗಿ ಆಸ್ಪತ್ರೆ ಗಳಲ್ಲಿ ಸ್ಟಾಫ್ ನರ್ಸ ಆಗಿ ಕೆಲಸ ಮಾಡುತ್ತಿದ್ದು, ಕೋವಿಡ್-೧೯ ರೋಗಿಗಳಿಗೆ ನೀಡುವ ರೆಮ್‌ಡಿಸಿವರ್ ಔಷಧಿಯನ್ನು ಸರ್ಕಾರದಿಂದ ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ನಿಷೇಧಿಸಿದ್ದರೂ ಕೂಡ ಇದನ್ನು ಉಲ್ಲಂಘಿಸಿ, ಆರೋಪಿತರು ಅಪ್ರಾಮಾಣಿಕವಾಗಿ ಅದನ್ನು ಪಡೆದುಕೊಂಡು ಅದರ ಬೆಲೆ ತಲಾ ರೂ.೩,೪೦೦/- ಇದ್ದರೂ ಅದನ್ನು ಸುಮಾರು ೨೫-೩೦ ಸಾವಿರದಷ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.

ಅವರಿಂದ ರೂ. ೧೧,೬೦೦/-ಮೌಲ್ಯದ ೩ ಔಷಧ ಬಾಟಲಿಗಳು, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಮತ್ತು ೨- ಮೋಬೈಲ್ ವಸ್ತುಗಳನ್ನು ಅವರಿಂದ ಜಪ್ತ ಪಡಿಸಿಕೊಂಡು ಅವರ ವಿರುದ್ಧ  ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಸುನೀಲ ಪಾಟೀಲ್ ಪಿಐ ಮಾಳಮಾರುತಿ ನಡೆಸುತ್ತಿದ್ದಾರೆ.
ಅಕ್ರಮವಾಗಿ ರೆಮ್‌ಡಿಸಿವರ್ ಔಷಧಿಯನ್ನು ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಿದ  ನಿಂಗನಗೌಡ ಪಾಟೀಲ ಪಿಐ ಸಿಸಿಬಿ, ಬೆಳಗಾವಿ ನಗರ ಹಾಗೂ ಅವರ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ|| ತ್ಯಾಗರಾಜನ್. ಕೆ., ಬೆಳಗಾವಿ ನಗರ, ಡಿಸಿಪಿಗಳು ಶ್ಲಾಘಿಸಿದ್ದಾರೆ.

Home add -Advt

ಕೋವಿಡ್-೧೯ ಔಷಧಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಬಗ್ಗೆ ಮಾಹಿತಿ ಬಂದಲ್ಲಿ ಸಾರ್ವಜನಿಕರು ಪೊಲೀಸ್‌ರಿಗೆ ಮಾಹಿತಿ ನೀಡುವಂತೆ ಈ ಮೂಲಕ ಕೋರಲಾಗಿದೆ.

ಔಷಧ ಅಂಗಡಿ ಸಿಬ್ಬಂದಿಯಿಂದಲೇ ರೆಮ್ ಡಿಸಿವಿರ್ ಅಕ್ರಮ ಮಾರಾಟ; ಬೃಹತ್ ಗ್ಯಾಂಗ್ ಬಂಧಿಸಿದ ಸಿಸಿಬಿ

Related Articles

Back to top button