
ಪ್ರಗತಿವಾಹಿನಿ ಸುದ್ದಿ: ಸಂಚಾರಿ ಪೊಲೀಸರು ಎಡವಟ್ಟು ಮಾಡಿ ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸಿಲ್ಲ ಎಂದುದಂಡ ವಿಧಿಸಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ.
ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಲಾರಿ ಚಾಲನೆಗೂ ಹೆಲ್ಮೆಟ್ ಧರಿಸಬೇಕೆ? ಎಂಬ ಪ್ರಶ್ನೆ ಮೂಡಿದೆ. ಚಂದ್ರಕಾಂತ್ ಹಳ್ಳೇರ ಎಂಬುವವರು ಮರಳು ತುಂಬಿದ ಟಿಪ್ಪರ್ ಲಾರಿ ಚಲಾಯಿಸುತ್ತಿದ್ದರು. ಹೊನ್ನಾವರದ ಅಳಂಕಿ ಬಳಿ ಹೊನ್ನಾವರ ಸಂಚಾರಿ ಪೊಲೀಸರು ಲಾರಿ ತಡೆದಿದ್ದಾರೆ. ಬಳಿಕ ಲಾರಿ ಚಾಲಕನಿಗೆ 500 ರೂಪಾಯಿ ದಂಡ ವಿಧಿಸಿ ರಶೀದಿ ನೀಡಿದ್ದಾರೆ. ರಶೀದಿ ನೋಡಿದ ಚಾಲಕನಿಗೆ ಅಚ್ಚರಿಯಾಗಿದೆ. ಕಾರಣ ರಶೀದಿಯಲ್ಲಿ ವಿಥೌಟ್ ಹೆಲ್ಮೆಟ್ ಗೆ ಡಂಡ ಎಂದಿತ್ತು.
ಸಾವರಿಸಿಕೊಂಡು ಲಾರಿ ಚಾಲಕ ಸರ್ ನಾನು ಬೈಕ್ ಓಡಿಸುತ್ತಿಲ್ಲ, ಟಿಪ್ಪರ್ ಲಾರಿ ಓಡಿಸುತ್ತಿದ್ದೇನೆ ಎಂದು ಪೊಲಿಸರಿಗೆ ಹೇಳಿದ್ದಾರೆ. ಆದರೂ ಪೊಲೀಸರು ಹೇ ಅದೆಲ್ಲ ಇರುತ್ತೆ ಎಂದು ಹೇಳಿ ರಶೀದಿ ಕೊಟ್ಟು ಕಳುಹಿಸಿದ್ದಾರೆ.
ಮಾವಿನ ಖುರ್ವದ ವಿನುತಾ ವಿನೋದ್ ನಾಯ್ಕ್ ಎಂಬುವವರಿಗೆ ಸೇರಿದ ಟಿಪ್ಪರ್ ಲಾರಿಗೆ ಚಂದ್ರಕಾಂತ್ ಚಾಲಕರಾಗಿದ್ದಾರೆ. ಸಂಚಾರಿ ಪೊಲೀಸರ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.