ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-: ರೈಲು ಸಂಖ್ಯೆ 17325/26 ವಿಶ್ವಮಾನವ ಎಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ಹಸಿರು ನಿಶಾನೆ ಮತ್ತು ರೈಲು ಗಾಡಿ ಸಂಖ್ಯೆ 06526/06525 ಬೆಳಗಾವಿ -ಕೆಎಸ್ಆರ್ ಬೆಂಗಳೂರು -ಬೆಳಗಾವಿ ಎಕ್ಸಪ್ರೆಸ್ ನ ನಿಯಮಿತ ಸೇವೆಯ ಆರಂಭ ಹಾಗೂ ಅಧುನಿಕ ಎಲ್.ಎಚ್.ಬಿ ಬೋಗಿಗಳಾಗಿ ಪರಿವರ್ತನೆಯ ಘೋಷಣೆ ಕಾರ್ಯಕ್ರಮ ಶುಕ್ರವಾರ(ನ.1) ರಂದು ಸಾಯಂಕಾಲ 4.30 ಘಂಟೆಗೆ ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆಯಲಿದೆ.
ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಸಿ. ಅಂಗಡಿ ಹಾಗೂ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ, ಕೃಷಿ ಸಚಿವರಾದ ಲಕ್ಷ್ಮಣ್ ಎಸ್.ಸವದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಗಾವಿ ಉತ್ತರ ಶಾಸಕರಾದ ಅನಿಲ ಎಸ್.ಬೆನಕೆ ಹಾಗೂ ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶ್ವಮಾನವ ಎಕ್ಸಪ್ರೆಸ್ ರೈಲು ಮೈಸೂರಿನಿಂದ ಧಾರವಾಡದವರೆಗಷ್ಟೆ ಬರುತ್ತಿತ್ತು. ಅದನ್ನು ಈಗ ಬೆಳಗಾವಿವರೆಗೂ ವಿಸ್ತರಿಸಲಾಗುತ್ತಿದೆ. ಇದರ ಜೊತೆಗೆ ಬೆಳಗಾವಿ -ಬೆಂಗಳೂರು ಫಾಸ್ಟ್ ಎಕ್ಸಪ್ರೆಸ್ ರೈಲು ಈವರೆಗೆ ತತ್ಕಾಲ್ ವ್ಯವಸ್ಥೆ ಅಡಿಯಲ್ಲಿತ್ತು. ಅದನ್ನು ಸಾಮಾನ್ಯ ರೈಲನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಟಿಕೆಟ್ ದರ ಕಡಿಮೆಯಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ