Latest

ತುಮಕೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲು ಅಗತ್ಯ ವ್ಯವಸ್ಥೆ: ಸಿಎಂ ಸೂಚನೆ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ತುಮಕೂರು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರಿನಲ್ಲಿ ಶನಿವಾರ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರದ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿ ಮಾತನಾಡುತ್ತಿದ್ದರು.

ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಜಯದೇವ ಹೃದಯ ಆರೋಗ್ಯ ಸಂಸ್ಥೆಯನ್ನು ಎಲ್ಲ ಜಿಲ್ಲೆಗಳಲ್ಲಿ ಸ್ಥಾಪಿಸಲು ಚಿಂತನೆ ಮಾಡಲಾಗುತ್ತಿದೆ ಎಂದರು.

ತುಮಕೂರು ಬೆಂಗಳೂರಿನ ನಂತರ ಪ್ರಮುಖ ಜಿಲ್ಲೆಯಾಗಿದ್ದು, ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ, ಮತ್ತು ವಾಣಿಜ್ಯವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿಗೆ ಸ್ಯಾಟಿಲೈಟ್ ಟೌನ್ ಆಗುವ ಎಲ್ಲ ಅರ್ಹತೆಗಳನ್ನು ಪಡೆದುಕೊಂಡಿರುವ ಜಿಲ್ಲೆ ತುಮಕೂರು. ಈ ಜಿಲ್ಲೆಯ ಅಭಿವೃದ್ಧಿ ಬೆಂಗಳೂರಿನ ಒತ್ತಡ ಹಾಗೂ ಭಾರವನ್ನು ಕಡಿಮೆಮಾಡಬಹುದು. ಹೀಗಾಗಿ ಬೆಂಗಳೂರಿನಲ್ಲಿರುವ ಎಲ್ಲಾ ಸೌಲಭ್ಯಗಳು ಇಲ್ಲಿ ಬರಬೇಕು ಎನ್ನುವುದು ನಮ್ಮ ಚಿಂತನೆ. ಯಾವುದೇ ಕಾರ್ಯಕ್ಕೂ ಬೆಂಗಳೂರಿನ ಮೇಲೆ ಅವಲಂಬಿತವಾಗಬಾರದು ಎನ್ನುವುದು ಈ ಜಿಲ್ಲೆಯ ಪ್ರಮುಖ ಜವಾಬ್ದಾರಿ. ಇಲ್ಲಿಗೆ ಕ್ಯಾನ್ಸರ್ ಆಸ್ಪತ್ರೆ ಬಂದಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಿದ್ವಾಯಿ ಆಸ್ಪತ್ರೆಗೆ ಕೇವಲ ನಮ್ಮ ರಾಜ್ಯದವರು ಮಾತ್ರವಲ್ಲ, ದಕ್ಷಿಣ ಭಾರತದಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಂಥ ಸಂಸ್ಥೆಯ ಅಂಗ ಸಂಸ್ಥೆ ತುಮಕೂರಿನಲ್ಲಿ ಸ್ಥಾಪನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚೆಗೆ ಕ್ಯಾನ್ಸರ್ ರೋಗ ಬಹಳ ಹೆಚ್ಚುತ್ತಿದ್ದು, ಆಧುನಿಕ ಸಂಶೋಧನೆಯೊಂದಿಗೆ ಗುಣಮುಖರಾಗುವುದು ಸಾಧ್ಯವಾಗಿದೆ ಎಂದು ತಿಳಿಸಿದರು.

ಸ್ತ್ರೀಯರಿಗೆ ತಗಲುವ ಕ್ಯಾನ್ಸರ್ ಗೂ ಸಹ ಚಿಕಿತ್ಸೆ ಲಭ್ಯವಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ತಾಯಿ ಮಕ್ಕಳ ಆಸ್ಪತ್ರೆ ಅತ್ಯಂತ ಅವಶ್ಯಕವಾಗಿರುವಂಥದ್ದು. 2030ರೊಳಗೆ ತಾಯಿ ಮತ್ತು ಮಕ್ಕಳ ಸಂಪೂರ್ಣ ಆರೋಗ್ಯವನ್ನು ಕಾಪಾಡಬೇಕು ಎಂಬ ಗುರಿಯನ್ನು ಯುನೈಟೆಡ್ ನೇಷನ್ ಹೊಂದಿದೆ. ಕರ್ನಾಟಕದಲ್ಲಿ ಎಂ.ಎಂ.ಆರ್ ಮತ್ತು ಸಿ.ಎಂ.ಆರ್ ಕಡಿಮೆ ಮಾಡಬೇಕೆನ್ನುವುದು ನಮ್ಮ ಸರ್ಕಾರದ ಉದ್ದೇಶ. ಗರ್ಭಿಣಿ ಸ್ತ್ರೀಯರ ಹಾಗೂ ಬೆಳೆಯುವ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಬಹಳ ಮುಖ್ಯ. ಸರ್ಕಾರ ಈ ಎರಡೂ ಅಂಶಗಳಿಗೆ ಅತಿ ಹೆಚ್ಚಿನ ಮಹತ್ವ ನೀಡುತ್ತದೆ.

ಕೋವಿಡ್ 3 ನೇ ಅಲೆ ಮಕ್ಕಳಿಗೆ ತಗಲಬಹುದೆಂಬ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಪೌಷ್ಟಿಕ ಆಹಾರದ ಕೊರತೆ ನೀಗಿಸಲು ಪೌಷ್ಟಿಕ ಆಹಾರ ಒದಗಿಸುವುದು, ಖಾಯಿಲೆಗಳಿದ್ದರೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಒಂದು ವರ್ಷದಲ್ಲಿ 24 ಸಾವಿರ ಐ.ಸಿ.ಯು ಬೆಡ್ ಗಳ ವ್ಯವಸ್ಥೆ:

ಆರೋಗ್ಯ ಮೂಲಸೌಕರ್ಯಕ್ಕೆ ಮಹತ್ವ ನೀಡಿ ಅಗತ್ಯ ಅನುದಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒದಗಿಸಿದ್ದಾರೆ. ಅವರ ದೂರದೃಷ್ಟಿಯಿಂದ ರಾಜ್ಯದಲ್ಲಿ 24 ಸಾವಿರ ಐ.ಸಿ.ಯು ಬೆಡ್ ಗಳನ್ನು ಒಂದೇ ವರ್ಷದಲ್ಲಿ ಮಾಡಲಾಗಿದೆ. 50 ವರ್ಷಗಳಿಂದ ಆಗದೆ ಇದ್ದುದನ್ನು ಒಂದು ವರ್ಷದಲ್ಲಿ ಸಾಧಿಸಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರ ಬಹಳಷ್ಟು ಒತ್ತಡಕ್ಕೆ ಸಿಕ್ಕಿಕೊಂಡಿತ್ತು. ಇದೊಂದು ಸವಾಲಾಗಿತ್ತು. ಆದರೆ ತಮ್ಮ ಜೀವದ ಹಂಗನ್ನು ತೊರೆದು ಮಾನವೀಯತೆಯಿಂದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೊಲೀಸ್, ಡಿ ವರ್ಗದ ನೌಕರರು, ಪೌರಕಾರ್ಮಿಕರು ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಇಂಥ ವಿಷಯಗಳಲ್ಲಿ ಸಮುದಾಯ, ಸರ್ಕಾರ ಹಾಗೂ ಸಂಸ್ಥೆ – ಈ ಮೂರು ಅಂಗಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜನರ ಜೀವ ಉಳಿಸುವ , ನೋವು ಕಡಿಮೆ ಮಾಡುವ ಈ ಕಾರ್ಯದಲ್ಲಿ ಸೂಕ್ಷ್ಮವಾಗಿರಬೇಕು. ಮೂರನೇ ಅಲೆ ತಡೆಯಲು ಸಿದ್ಧತೆಗಳಾಗಿದೆ. ಆಕ್ಸಿಜನ್, ಬೆಡ್ ಗಳ ಕೊರತೆ ಯಾಗದಂತೆ ವಿಶೇಷ ಗಮನ ಹರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಣ್ಣ ನೀರಾವರಿ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದರಾದ ಜಿ.ಎಸ್ ಬಸವರಾಜ್, ಶಾಸಕರು, ಮತ್ತಿತರರು ಉಪಸ್ಥಿತರಿದ್ದರು.

ಸಾರ್ಥಕತೆಯ ಬದುಕಿಗೆ ಮಹಾತ್ಮರ ಚರಿತಾಮೃತ ದಾರಿದೀಪ: ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button