Kannada NewsKarnataka NewsLatest

*ಮಗಳ ಸಾವಿನ ಬಳಿಕ ಆಕೆಯ ಪ್ರಿಯಕರನೊಂದಿಗೆ ಸೇರಿ ಅಳಿಯನನ್ನೇ ಕೊಲೆಗೈದ ತಾಯಿ ಹಾಗೂ ತಮ್ಮ*

ಪ್ರಗತಿವಾಹಿನಿ ಸುದ್ದಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದಂಡೀಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 32 ವರ್ಷದ ನರಸಿಂಹಮೂರ್ತಿ ಕೊಲೆಯಾದ ವ್ಯಕ್ತಿ. ಹೆಂಡತಿ ಸುಜಾತಾಳ ಸಾವಿನ ಬಳಿಕ ಮದ್ಯವ್ಯಸನಿಯಾಗಿದ್ದ ಈತ, ಆಕೆಯ ಪ್ರಿಯಕರ ಆಗಾಗ ಮನೆಗೆ ಬಂದು ಹೋಗುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ. ಇದನ್ನೇ ನೆಪವಾಗಿಸಿಕೊಂಡ ಸುಜಾತಾಳ ತಾಯಿ, ತಮ್ಮ ಹಾಗೂ ಪ್ರಿಯಕರ, ನರಸಿಂಹಮೂರ್ತಿಯನ್ನು ಕೊಲೆಗೈದಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕೊಡಿಗೇನಹಳ್ಳಿ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ನರಸಿಂಹಮೂರ್ತಿ ಸುಜಾತಾಳನ್ನು ಪ್ರೀತಿಸಿ ಕುಟುಂಬದವರ ಒಪ್ಪಿಗೆ ಪಡೆದು ವಿವಾಹವಾಗಿದ್ದ. ಮದುವೆಯ ನಂತರ ಸುಜಾತ ಗಾರ್ಮೆಂಟ್ಸ್ ಉದ್ಯೋಗಕ್ಕೆ ಸೇರಿದ್ದಳು. ಈ ವೇಳೆ ಆಕೆಗೆ ಅಮರ್ ಎಂಬ ಯುವಕ ಪರಿಚಯವಾಗಿದ್ದ. ನಂತರ ಅವರಿಬ್ಬರ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇದೇ ಸಮಯದಲ್ಲಿ ಸುಜಾತಾ ಒಂದು ಗಂಡು ಮಗುವಿಗೂ ಜನ್ಮ ಕೊಟ್ಟಿದ್ದಳು. ಆದರೆ ಅನಾರೋಗ್ಯದಿಂದ ಕೆಲವು ತಿಂಗಳ ಹಿಂದೆ ಸುಜಾತ ಸಾವನ್ನಪ್ಪಿದ್ದಳು.

ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ನರಸಿಂಹಮೂರ್ತಿ ಕುಡಿತದ ದಾಸನಾಗಿದ್ದ. ಮತ್ತೊಂದೆಡೆ ಸುಜಾತಾಳ ಗಂಡು ಮಗು ತನ್ನದೆಂದು ಭಾವಿಸಿದ್ದ ಅಮರ್, ಆಗಾತ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಅಮರ್​ಗೂ ಸುಜತಾಳ ತಾಯಿ ಜಯಮ್ಮ ಹಾಗೂ ಸಹೋದರ ನಂದೀಶ್ ಗೂ ಉತ್ತಮ ಸ್ನೇಹ ಬೆಳೆದಿತ್ತು. ಪದೆ ಪದೆ ಅಮರ್ ಮನೆಗೆ ಭೇಟಿ ನೀಡುತ್ತಿದ್ದುದನ್ನು ನರಸಿಂಹಮೂರ್ತಿ ಗಮನಿಸಿದ್ದಲ್ಲದೆ, ಜಯಮ್ಮಳ ಜೊತೆ ಇದೇ ವಿಷಯಕ್ಕೆ ಜಗಳವನ್ನೂ ಆಡಿದ್ದ. ಈ ಜಗಳದ ಬಗ್ಗೆ ಅಮರ್‌ಗೆ ತಿಳಿಸಿದ ಜಯಮ್ಮ, ತನ್ನ ಮಗ ನಂದೀಶ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು.

Home add -Advt

ಸಂಚಿನಂತೆ ನರಸಿಂಹಮೂರ್ತಿಯನ್ನು ಮನೆಗೆ ಕರೆದು ಚಿಕನ್ ಪಾರ್ಟಿ ಹೆಸರಿನಲ್ಲಿ ಮದ್ಯಪಾನ ಮಾಡಿಸಿದ್ದಾರೆ. ಬಳಿಕ ಅಮರ್ ಮತ್ತು ನಂದೀಶ್ ಆತನನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಗ್ರಾಮದ ಸಮೀಪ ರಸ್ತೆಯ ಬಳಿ ಸುಜಾತಾಳ ಫ್ಲೆಕ್​ಸ್ ಇದ್ದ ಜಾಗದಲ್ಲಿಯೇ ಮೃತದೇಹವನ್ನು ಬಿಸಾಡಿದ್ದಾರೆ. ಹೆಂಡತಿಯ ನೆನಪಿನಲ್ಲಿ ಕುಡಿದು ಬಿದ್ದಿದ್ದಾನೆಂಬಂತೆ ಬಿಂಬಿಸಿದ್ದಾರೆ.

ಕುಡಿದು ಬಿದ್ದಿದ್ದಾನೆ ಎಂದು ನರಸಿಂಹಮೂರ್ತಿಯನ್ನು ಆತನ ಅಕ್ಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ಅಲ್ಲದೇ ಮೃತದೇಹದ ಕತ್ತಿನ ಸುತ್ತ ಇರುವ ಕಪ್ಪು ಕಲೆ, ಎಡ ಕಿವಿಯಲ್ಲಿ ಸೋರುತ್ತಿದ್ದ ರಕ್ತ ಕಂಡು ಇದು ಸಹಜ ಸಾವಲ್ಲ ಕೊಲೆ ಎಂದು ದೃಢಪಡಿಸಿದ್ದಾರೆ. ಈ ವೇಳೆ ಮೃತನ ಅಕ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ.

Related Articles

Back to top button