Karnataka NewsLatestPolitics

*ಒಂದೇ ವಾರದಲ್ಲಿ ಟಿ.ಬಿ ಡ್ಯಾಂ ಗೇಟ್ ಅಳವಡಿಸಿ ನೀರು ಉಳಿಸಿದ ತಜ್ಞರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸಿದ ಸಿಎಂ*

ಎರಡನೇ ಬೆಳೆಗೂ ನೀರು ಸಿಗತ್ತೆ: ರೈತರಿಗೆ ಸಿಎಂ ಭರವಸೆ

ಪ್ರಗತಿವಾಹಿನಿ ಸುದ್ದಿ: ಒಂದೇ ವಾರದಲ್ಲಿ ತುಂಗಭದ್ರ ಜಲಾಶಯಕ್ಕೆ ಗೇಟ್ ಅಳವಡಿಸಿ 20 ಟಿಎಂಸಿ ನೀರು ಉಳಿಸಿದ ತಜ್ಞರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,
ಎರಡನೇ ಬೆಳೆಗೂ ನೀರು ಸಿಗತ್ತದೆ ಎಂದು ರೈತ ಕುಲಕ್ಕೆ ಭರವಸೆ ನೀಡಿದರು.

ಮೈತುಂಬಿಕೊಂಡಿರುವ ತುಂಗಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿ, ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಅತ್ಯಂತ ತುರ್ತಾಗಿ ಅಳವಡಿಸಿದ ಎಂಜಿನಿಯರ್ ಮತ್ತು ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿ ಮಾತನಾಡಿದರು.

ಗೇಟ್ ಮುರಿದಾಗ ನಮ್ಮ ರೈತರು ಆತಂಕದಲ್ಲಿದ್ದರು. ಜಲ ಸಂಪನ್ಮೂಲ ಸಚಿವರು ಮತ್ತು ನಾನು ಚರ್ಚಿಸಿ ತುರ್ತಿನ ಕ್ರಮಕ್ಕೆ ಮುಂದಾದೆವು. ನಮ್ಮ ಸೂಚನೆಯಂತೆ ಒಂದೇ ವಾರದಲ್ಲಿ ಗೇಟ್ ಅಳವಡಿಸಿ 20 ಟಿಎಂಸಿ ನೀರನ್ನು ಉಳಿಸಿದ ತಜ್ಞ ಕನ್ನಯ್ಯ ನಾಯ್ಡು ಮತ್ತು ಎಂಜಿನಿಯರ್ ಸಿಬ್ಬಂದಿಗೆ ಸರ್ಕಾರ ಮತ್ತು ರೈತರ ಪರವಾಗಿ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು.

ಕರ್ನಾಟಕಕ್ಕೆ ಎಡ ಮತ್ತು ಬಲ ದಂಡೆ ಸೇರಿ 9,26,438 ಎಕರೆಗೆ, ಆಂದ್ರಪ್ರದೇಶದ 625097 ಎಕರೆ, ತೆಲಂಗಾಣದ 87,000 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ತುಂಗಭದ್ರಾ ಅಣೆಕಟ್ಟು ಎರಡನೇ ಬಾರಿ ತುಂಬಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಿಎಂ ಎರಡನೇ ಬೆಳೆಗೂ ರೈತರಿಗೆ ನೀರು ಸಿಗಲಿದೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.‌

ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡಬೇಡಿ. ಮೊದಲು ದಿನಕ್ಕೊಂದು ಸುಳ್ಳು ಹೇಳುತ್ತಿದ್ದ BJP ಈಗ ಗಳಿಗೆಗೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. BJP ನಿಮ್ಮನ್ನು ಯಾಮಾರಿಸಿ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ನಂಬಿಕೆ. ಏಕೆಂದರೆ ಕೊಪ್ಪಳ, ಬಳ್ಳಾರಿ, ವಿಜಯನಗರದ ಜನತೆ ಏನು ಅಂತ ನನ್ನ ಹೃದಯಕ್ಕೆ ಚನ್ನಾಗಿ ಗೊತ್ತು. ಬಿಜೆಪಿ ಮಾತನ್ನು ನಂಬಬೇಡಿ. ಎರಡೂ ಬೆಳೆಗೂ ನೀರು ಕೊಡುತ್ತೇವೆ ಎಂದು ಪುನರುಚ್ಚರಿಸಿದರು.

ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ 46 ವಿಷಯಗಳನ್ನು, ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕದ ಅಭಿವಧ್ಧಿಗಾಗಿ ಘೋಷಿಸಿದ್ದೇವೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ 371J ಜಾರಿ ಮಾಡಲು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪರಿಣಾಮದಿಂದ 371 ಜೆ ಜಾರಿಯಾಯಿತು ಎಂದರು.

ಪ್ರಾದೇಶಿಕ ಅಸಮಾಮತೆ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡುತ್ತಿದ್ದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ 5000 ಕೋಟಿ ಘೋಷಿಸಿ ಆಗಿದೆ. ಕೇಂದ್ರ ಸರ್ಕಾರ ಕೂಡ 5000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಕೇಂದ್ರ ಕೊಡುತ್ತೋ ಇಲ್ವೋ ನೀವೇ ನೋಡಿ ಎಂದರು.

ಲೆಕ್ಕದಲ್ಲಿ ಮತ್ತೆ ಗೆದ್ದ ಸಿಎಂ ಸಿದ್ದರಾಮಯ್ಯ

ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಲೆಕ್ಕದಲ್ಲಿ ಪರ್ಫೆಕ್ಟ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದರು.

ತುಂಗಭದ್ರ ಅಣೆಕಟ್ಟೆಯಿಂದ ಯಾವ ರಾಜ್ಯದ ಎಷ್ಟು ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ ಎನ್ನುವ ಬಗ್ಗೆ ಅಂಕಿ ಅಂಶ ಸಮೇತ ವಿವರಿಸಿದರು. ಎಡ ಮತ್ತು ಬಲ ದಂಡೆಯಲ್ಲಿ ಎಷ್ಟೆಷ್ಟು ಎಕರೆಗೆ ನೀರುಣಿಸಲಾಗುತ್ತಿದೆ ಎನ್ನುವ ಅಂಕಿ ಅಂಶ ಕೂಡ ಹೇಳಿದರು.

ಈ ವೇಳೆ ವೇದಿಕೆಯಲ್ಲಿದ್ದ ಕೆಲವರು ಬೇರೆ ಅಂಕಿ ಅಂಶ ಹೇಳಿ ಅವರನ್ನು ತಿದ್ದಲು ಯತ್ನಿಸಿದರು. ಆದರೆ, ಎಲ್ಲರು ಕೊಟ್ಟ ಅಂಕಿ ಅಂಶಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಬಳಿಕ ಇಲಾಖೆ ಮುಖ್ಯಸ್ಥರನ್ನು ಕರೆದು ದಾಖಲೆ ತರಿಸಿಕೊಂಡರು.

ದಾಖಲೆಗಳ ಪ್ರಕಾರ ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದ ಅಂಕಿ ಅಂಶಗಳು, ಕೊಟ್ಟ ಲೆಕ್ಕವೇ ಸರಿಯಾಗಿತ್ತು.

ಬಳಿಕ ಮುಖ್ಯಮಂತ್ರಿಗಳು ಸಭಿಕರ ಕಡೆಗೆ ಥಂಬ್ಸ್ ಅಪ್ ತೋರಿಸಿ ನನ್ನ ಲೆಕ್ಕವೇ perfect ಎಂದರು. ಜನರು ಶಿಳ್ಳೆ ಹಾಕಿ ಸಂಭ್ರಮಿಸಿದರು.

ಕೊಟ್ಟ ಭರವಸೆ ಈಡೇರಿದ ಸಂಭ್ರಮ

ಅಣೆಕಟ್ಟೆಯ 19ನೇ ಕ್ರೆಸ್ಟ್ ಗೇಟ್ ಕೊಚ್ವಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದನ್ನು ಪರಿಶೀಲಿಸಲು ಆಗಸ್ಟ್ 13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಣೆಕಟ್ಟೆಗೆ ಆಗಮಿಸಿದ್ದರು. ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ‌ ಅರ್ಪಿಸುತ್ತೇನೆ ಎಂದು ಆಗಸ್ಟ್ 13 ರಂದು ಹೇಳಿದ್ದರು. ಮುಖ್ಯಮಂತ್ರಿಗಳ ಮಾತು ಮತ್ತು ಆಶಯ ಈಡೇರಿದ ಸಂಭ್ರಮದ ಕ್ಷಣಕ್ಕೆ ಇಡೀ ರಾಜ್ಯ ಇಂದು ಸಾಕ್ಷಿಯಾಯಿತು.

ಜಲ ಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿರಾಜ್ ತಂಗಡಗಿ, ಸಚಿವರುಗಳಾದ ಬೋಸ್ ರಾಜ್, ಶರಣಪ್ರಕಾಶ್ ಪಾಟೀಲ್, ಕೊಪ್ಪಳ ಸಂಸದರಾದ ರಾಜಶೇಖರ್ ಹಿಟ್ನಾಳ್, ಬಳ್ಳಾರಿ ಸಂಸದರಾದ ಈ.ತುಕಾರಾಮ್ ಹಾಗೂ ಎರಡೂ ಜಿಲ್ಲೆಗಳ ಶಾಸಕರುಗಳು, ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button