Cancer Hospital 2
Bottom Add. 3

*ಟನಲ್ ರಸ್ತೆ ವಿಚಾರವಾಗಿ 45 ದಿನಗಳಲ್ಲಿ ಸಾರ್ವಜನಿಕ ಟೆಂಡರ್ ಕರೆಯಲು ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ 190 ಕಿ.ಮೀ ನಷ್ಟು ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಿದ್ದು, 8 ಕಂಪನಿಗಳು ಇದಕ್ಕೆ ಅರ್ಹತೆ ಪಡೆದುಕೊಂಡಿವೆ. ಈ ಕಂಪನಿಗಳು ಕಾರ್ಯಸಾಧ್ಯತಾ ವರದಿ ಸಲ್ಲಿಸಲಿದ್ದು, 45 ದಿನಗಳ ಒಳಗಾಗಿ ಸಾರ್ವಜನಿಕ ಟೆಂಡರ್ ಕರೆಯಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಕಾರಿಡಾರ್ ಅಭಿವೃದ್ಧಿಪಡಿಸಲು ಟೆಂಡರ್ ಕರೆದಿದ್ದೆವು. ಈ ವಿಚಾರವಾಗಿ ಅನೇಕರು ತಮ್ಮ ಪ್ರಸ್ತಾವನೆ ಸಲ್ಲಿಸಿದ್ದರು. ರಸ್ತೆ ಮೂಲಸೌಕರ್ಯ, ದಟ್ಟಣೆ ನಿವಾರಣೆ, ಟನಲ್ ರಸ್ತೆ, ರಸ್ತೆ ಅಗಲೀಕರಣ ವಿಚಾರವಾಗಿ ಸಲಹೆ ಪಡೆದಿದ್ದೆವು. ಟನಲ್ ರಸ್ತೆ ವಿಚಾರದಲ್ಲಿ ಬಂಡವಾಳವನ್ನು ತರಬೇಕು ಎಂದು ನಾವು ಸೂಚಿಸಿದ್ದೆವು. ಅಂತಾರಾಷ್ಟ್ರೀಯ ಬಿಡ್ಡಿಂಗ್ ಮಾಡಿದ ಪರಿಣಾಮ 9 ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, ಕೊನೆ ದಿನಾಂಕ ಮುಕ್ತಾಯವಾಗಿದೆ.

ಟನಲ್ ರಸ್ತೆ 4 ಪಥದಲ್ಲಿ ಮಾಡಬೇಕೇ, 6 ಪಥದಲ್ಲಿ ಮಾಡಬೇಕೇ? ಎಲ್ಲಿ ಆರಂಭವಾಗಿ ಎಲ್ಲಿ ಅಂತ್ಯವಾಗಬೇಕು, ಎಲ್ಲೆಲ್ಲಿ ತೆರೆದುಕೊಳ್ಳಬೇಕು? ಬೆಂಗಳೂರಿನಾದ್ಯಂತ ವಿಸ್ತರಣೆ ಮಾಡಬೇಕಾ ಎಂಬ ವಿಚಾರವಾಗಿ ನಾವು ತೀರ್ಮಾನ ಮಾಡಬೇಕು. ಇದೆಲ್ಲವೂ ಒಂದೆರಡು ದಿನಗಳಲ್ಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಕಂಪನಿಗಳು ಅಧ್ಯಯನ ಮಾಡಿ ವರದಿ ನೀಡಲಿವೆ ಎಂದರು.

ಈ ಯೋಜನೆ ಬಹಳ ದೊಡ್ಡ ಪ್ರಮಾಣದಲ್ಲಿದ್ದು, ಭಾರಿ ಪ್ರಮಾಣದ ಹಣಕಾಸಿನ ಅಗತ್ಯವಿದೆ. ಹೀಗಾಗಿ ಇದನ್ನು ವಿವಿಧ ಹಂತಗಳಲ್ಲಿ ಮಾಡಬೇಕಾಗುತ್ತದೆ. ನಾವು ಸದ್ಯಕ್ಕೆ 190 ಕಿ.ಮೀ ನಷ್ಟು ಪ್ರಸ್ತಾವನೆ ನೀಡಿದ್ದೇವೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ ಟಿ ಮಾಲ್ ಜಕ್ಷನ್ ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ ಶಿರಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆ ಯಶವಂತಪುರ ಜಕ್ಷನ್, ಹೊರ ವರ್ತುಲ ರಸ್ತೆಯಲ್ಲಿ ಗುರಗುಂಟೆ ಪಾಳ್ಯ, ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಗುರುತಿಸಿದ್ದು, ಆದ್ಯತೆ ಮೇರೆಗೆ ಈ ಪ್ರದೇಶಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲಿ ಯಾವ ರೀತಿ ಈ ಟನಲ್ ರಸ್ತೆ ಮಾಡಬಹುದು ಎಂದು ಕಂಪನಿಗಳು ಅಧ್ಯಯನ ನಡೆಸಲಿವೆ.

ನಮ್ಮಲ್ಲಿ ಟನಲ್ ಕೊರೆಯುವ ಯಂತ್ರ ಚಿಕ್ಕದಿದೆ. ಮುಂಬೈ ಹಾಗೂ ಉತ್ತರ ಭಾರತದಲ್ಲಿ ಈಗ ಟನಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕನಿಷ್ಠ ನಾಲ್ಕು ಪಥದ ಟನಲ್ ರಸ್ತೆ ಬೇಕು. ಈ ರಸ್ತೆಗಳು ತೆರೆದುಕೊಳ್ಳು ಹೆಚ್ಚಿನ ಜಾಗಗಳು ಬೇಕು. ಗಾಲ್ಫ್ ಕೋರ್ಸ್, ಟರ್ಫ್ ಕ್ಲಬ್, ಅರಮನೆ ಮೈದಾನ ಜಾಗಗಳನ್ನು ಬೊಮ್ಮಾಯಿ ಅವರ ಕಾಲದಲ್ಲಿ ಗುತ್ತಿಗೆ ವಿಸ್ತರಣೆ ಮಾಡಿದ್ದು, ಅವರ ಜತೆ ನ್ಯಾಯ ಪಂಚಾಯ್ತಿ ಮಾಡಬೇಕಿದೆ ಎಂದರು.

ಇನ್ನು ಮುಂಗಾರು ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಇಂಜಿನಿಯರ್ ಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಮಳೆ ನೀರು ಹರಿದುಹೋಗಲು ಚರಂಡಿ ಕಾಮಗಾರಿಗಳು ಸೇರಿದಂತೆ ಪ್ರಮುಖ ಆದ್ಯತೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜವಾಬ್ದಾರಿ ನೀಡಲಾಗಿದೆ.

ಕಳೆದವಾರದಲ್ಲಿ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರ ಜೊತೆ ಚರ್ಚೆ ಮಾಡಿದ್ದೇನೆ. ನಮ್ಮ ಯೋಜನಾ ಆಯೋಗದ ಮುಖ್ಯಸ್ಥರು ಕೂಡ ಈ ವಿಚಾರವಾಗಿ ಒತ್ತು ನೀಡುತ್ತಿದ್ದಾರೆ. ಇದೇ ತಿಂಗಳು 7ರಂದು ಹೋರವರ್ತುಲ ರಸ್ತೆಗೆ ಭೇಟಿ ನೀಡುವುದಾಗಿ ಹೇಳಿದ್ದೇನೆ.

ರಸ್ತೆಗುಂಡಿ ವಿಚಾರದಲ್ಲಿ ಪಾಲಿಕೆ ಇಂಜಿನಿಯರ್ ಗಳು ಸಂಚಾರಿ ಪೊಲೀಸರ ಸಹಾಯದಲ್ಲಿ ಕೆಲಸ ಮಾಡಬೇಕು. ಸಂಚಾರಿ ಪೊಲೀಸರು ಸೂಚಿಸುವ ಕಡೆಗಳಲ್ಲಿ ಪಾಲಿಕೆಯಿಂದ ತ್ವರಿತವಾಗಿ ರಸ್ತೆಗುಂಡಿ ಸರಿಪಡಿಸುವ ಕೆಲಸ ನಡೆಯಲಿದೆ. ರಸ್ತೆಗುಂಡಿಗಳಿಂದ ಯಾವುದೇ ಅನಾಹುತ ಆಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಗುಂಡಿಯನ್ನು ಸಾರ್ವಜನಿಕರೂ ಕೂಡ ರಸ್ತೆ ಗುಂಡಿಗಳ ವಿಚಾರವಾಗಿ ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಬಹುದು. ಮಳೆ ಬಂದಾಗ ರಸ್ತೆಗುಂಡಿ ಬೀಳುವುದು ಸಹಜ. ನಗರದ ಪ್ರಮುಖ ಪ್ರದೇಶಗಳಲ್ಲಿ ಇಂತಹ ರಸ್ತೆಗುಂಡಿಗಳನ್ನು ತಕ್ಷಣವೇ ಸರಿಪಡಿಸಲಾಗುವುದು ಎಂದು ಹೇಳಿದರು.

ಸರ್ಕಾರ 350 ಕಿ.ಮೀ ಟೆಂಡರ್ ಶ್ಯೂರ್ ರಸ್ತೆ ಮಾಡಿದ್ದು, ಈ ರಸ್ತೆಯಲ್ಲಿ ಅಂಡರ್ ಗ್ರೌಂಡ್ ನಲ್ಲಿ ಕೇಬಲ್ ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿದ್ದರೂ ಅವುಗಳನ್ನು ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಎಲ್ಲರೂ ಇದನ್ನು ಉಪಯೋಗಿಸಿಕೊಳ್ಳಬೇಕು. ಪ್ರತಿ ಕಿ.ಮೀ 10 ಕೋಟಿ ರೂಪಾಯಿ ಸರಾಸರಿಯಲ್ಲಿ ಖರ್ಚಾಗಿದೆ. ಆದರೂ ಕೇಬಲ್ ಗಳನ್ನು ಮೇಲೆಯೇ ಹಾರಾಡುತ್ತಿವೆ. ಇವುಗಳನ್ನು ಕಾನೂನುಬದ್ಧವಾಗಿ ಬಳಸದಿದ್ದರೆ ನಮ್ಮ ಅಧಿಕಾರಿಗಳು ಆ ಕೇಬಲ್ ಗಳನ್ನು ಕಟ್ ಮಾಡಲಿದ್ದಾರೆ.

ವಿಪತ್ತು ನಿರ್ವಹಣೆಗಾಗಿ ಅರ್ಬನ್ ಫ್ಲಡ್ ಮಿಟಿಗೇಷನ್ ಪ್ರಪೋಸಲ್ ಗಾಗಿ ವಿಶ್ವ ಬ್ಯಾಂಕ್ ನಿಂದ 3 ಸಾವಿರ ಕೋಟಿಗೆ ಪ್ರಸ್ತಾವನೆ ನೀಡಲಾಗಿದ್ದು, ಇಂದು ಅದು ಅನುಮತಿಪಡೆಯಲಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಬರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಲು ಮುಂದಾಗಿದ್ದೇವೆ. ರಾಷ್ಟ್ರೀಯ ವಿಪತ್ತು ನಿರ್ವಹಣೆಯಿಂದ 250 ಕೋಟಿಯಷ್ಟು ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Bottom Add3
Bottom Ad 2

You cannot copy content of this page