
ಪ್ರಗತಿವಾಹಿನಿ ಸುದ್ದಿ; ಚಂಡಿಘಡ: ಮಾಂಗಲ್ಯ ದೋಷ ನಿವಾರಣೆಗಾಗಿ ಟ್ಯೂಷನ್ ಟೀಚರ್ ಒಬ್ಬರು ತನ್ನ ಬಳಿ ಪಾಠಕ್ಕಾಗಿ ಬಂದ 13 ವರ್ಷದ ವಿದ್ಯಾರ್ಥಿಯನ್ನೇ ವಿವಾಹವಾಗಿರುವ ವಿಚಿತ್ರ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
ಕುಟುಂಬದ ಜೋತಿಷಿಯೊಬ್ಬರು ಜಾತಕದಲ್ಲಿ ಮಾಂಗಲ್ಯ ದೋಷವಿದೆ ಹಾಗಾಗಿ ಮಗಳಿಗೆ ಮದುವೆಯಾಗುತ್ತಿಲ್ಲ ಎಂದು ಟೀಚರ್ ಪೋಷಕರಿಗೆ ತಿಳಿಸಿದ್ದಾರೆ. ಪರಿಹಾರವಾಗಿ ಅಪ್ರಾಪ್ತ ಬಾಲಕನ ಜೊತೆ ಸಾಂಕೇತಿಕವಾಗಿ ವಿವಾಹ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಟ್ಯೂಷನ್ ಟೀಚರ್ ಬಾಲಕನ ಪೋಷಕರಿಗೆ ಒಂದು ವಾರ ಕಾಲ ಟ್ಯೂಷನ್ ಗಾಗಿ ನಿಮ್ಮ ಮಗನನ್ನು ನಮ್ಮ ಮನೆಯಲ್ಲಿಯೇ ಬಿಡುವಂತೆ ಹೇಳಿದ್ದಾಳೆ. ಅದಕ್ಕೆ ಬಾಲಕನ ಪೋಷಕರು ಒಪ್ಪಿದ್ದಾರೆ.
ಟೀಚರ್ ಮನೆಯಲ್ಲಿ ಉಳಿದ ಬಾಲಕನಿಗೆ ಟ್ಯೂಷನ್ ಪಾಠ ಹೇಳುವ ಬದಲು ಮದುವೆ ಪಾಠ ಹೇಳಲಾಗಿದೆ. ಟೀಚರ್ ಬಾಲಕನನ್ನು ನಂಬಿಸಿ ಮದುವೆಯಾಗಿದ್ದಾಳೆ. ವಾರದ ಬಳಿಕ ಮನೆಗೆ ವಾಪಸ್ ಆದ ಬಾಲಕ ತಂದೆ-ತಾಯಿಗೆ ನಡೆದ ವಿಷಯ ತಿಳಿಸಿದ್ದಾನೆ. ಟೀಚರ್ ಮನೆಯವರು ಮೆಹಂದಿ ಕಾರ್ಯಕ್ರಮ, ಮದುವೆ, ಮದುವೆಯ ರಾತ್ರಿ ಹಲವು ವಿಧಿವಿಧಾನಗಳನ್ನು ಬಲವಂತದಿಂದ ಮಾಡಿದ್ದಾರೆ. ಕೊನೆಯದಾಗಿ ಟೀಚರ್ ಕೈ ಬಳೆಗಳನ್ನು ಒಡೆದು ವಿಧವೆಯೆಂದು ಘೋಷಿಸಿ ಸಂತಾಪ ಸಭೆ ನಡೆಸಿದ್ದಾಗಿ ವಿವರಿಸಿದ್ದಾನೆ.
ಇದೀಗ ಬಾಲಕನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ