ಅಕ್ಷರಶಃ ಕಾರ್ಯಾಚರಣೆಗಿಳಿದ ಇಬ್ಬರು ಶಾಸಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇಲ್ಲಿಯ ಇಬ್ಬರು ಶಾಸಕರು ಸೋಮವಾರ ಮತ್ತು ಮಂಗಳವಾರ ಅಕ್ಷರಶಃ ರಸ್ತೆಯಲ್ಲೇ ಇದ್ದರು. ಮಳೆಯ ನೀರಿನಿಂದ ಆವೃತವಾಗಿರುವ ನಗರದ ವಿವಿಧ ಬಡಾವಣೆಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದ ಶಾಸಕರು ಮೊಣಕಾಲಿನವರೆಗಿನ ನೀರಿನಲ್ಲೇ ಓಡಾಡಿ, ಜನರ ಸೇವೆ ಮಾಡಿದರು.
ಕೈಯಲ್ಲಿ ಆಯುಧಗಳನ್ನು ಹಿಡಿದು ಸ್ವತಃ ಗಟಾರಗಳನ್ನು ಸ್ವಚ್ಛ ಮಾಡುತ್ತ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುತ್ತಿದ್ದರು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಓಡಾಡಿ ಎಲ್ಲೆಲ್ಲಿ ತೊಂದರೆಯಾಗಿದೆಯೋ ಅಲ್ಲೆಲ್ಲ ತಾವು ಮತ್ತು ತಮ್ಮ ಸಹವರ್ತಿಗಳೊಂದಿಗೆ ಕಾರ್ಯಚರಣೆ ನಡೆಸುತ್ತಿದ್ದರು. ಮಳೆ, ನೀರು, ಗಲೀಜು ಯಾವುದನ್ನೂ ಲೆಕ್ಕಿಸದೆ ಜನರ ಸೇವೆಯಲ್ಲಿ ತೊಡಗಿದ್ದರು.
ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರದ ಕಪಿಲೇಶ್ವರ ಕಾಲನಿ, ವಡಗಾವಿ, ಖಾಸಬಾಗ, ಮರಾಠಾ ಕಾಲನಿ ಸೇರಿದಂತೆ ನಗರದೆಲ್ಲೆಡೆ ಸಂಚರಿಸಿ ಸಂತ್ರಸ್ತರ ನೆರವಿಗಿಳಿದರು. ಇಡೀ ದಿನ ಶಾಸಕರು ಪ್ರವಾಹ ಕಾರ್ಯಾಚರಣೆಯಲ್ಲೇ ನಿರತರಾಗಿದ್ದರು.
ಶಾಸಕ ಅನಿಲ ಬೆನಕೆ ಬೆಳಗಾವಿಯ ಶಿವಾಜಿನಗರ, ಪಂಜಿ ಬಾಬಾ, ಆಜಾದನಗರ ವೀರಭದ್ರನಗರಗಳಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿರುವ ಸುದ್ದಿ ತಿಳಿದ ಶಾಸಕ ಅನಿಲ ಬೆನಕೆ ಸ್ಥಳಕ್ಕೆ ಧಾವಿಸಿ ಜಲಾವೃತ ಪ್ರದೇಶಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಂಡು ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ಥರಿಗೆ ನೆರವು ನೀಡಿದರು.
ಜಲಾವೃತಗೊಂಡ ಪ್ರದೇಶಗಳ ನೀರನ್ನು ಹೊರಹಾಕಲು ಪೈಪಲೈನ್ ಅಳವಡಿಸುವ ಮುಖಾಂತರ ನಾಲಾ ಪ್ರದೇಶಕ್ಕೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಂಡರು. ಮಳೆ ಮುಂದುವರೆದರೆ ಅಲ್ಲಿರುವ ರಹವಾಸಿಗಳನ್ನು ಬೇರೆ ಕಡೆ ಸ್ಥಳಾಂತರಿಸುವ ಬಗ್ಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕೋರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ನಿಶ್ಚಯಿಸಿದ್ದು ಅಧಿಕ ಮಳೆಯಾದಲ್ಲಿ ಎಲ್ಲ ರಹವಾಸಿಗಳನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದರು. ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ಥರ ನೆರವಿಗೆ ದಾವಿಸಿ ಬಂದ ಶಾಸಕರಿಗೆ ಅಲ್ಲಿರುವ ಸಾರ್ವಜನಿಕರು ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಾಗೇಶ ಮುಂಡೊಳಕರ, ಯಲ್ಲಪ್ಪಾ ಕಾಂಡೇಕರ, ವಿಜಯ ಪವಾರ, ರಾಹುಲ ಮುಚ್ಚಂಡಿ, ನಾಗೇಶ ಲಂಗರಖಂಡೆ, ವಿಪುಲ ಜಾಧವ, ವಿನೋದ ಪೂಜಾರಿ, ಶಂಕರ ಪಾಟೀಲ, ಮಹಾಲಿಂಗ ತಂಗಡಗಿ, ಸಾಗರ ಜಾಧವ, ವಿಕ್ರಮ ಕಿಲ್ಲೆಕರ, ನಿಖಿಲ ಮುರ್ಕುಟೆ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂತ್ರಸ್ಥರು ಉಪಸ್ಥಿತರಿದ್ದರು.
ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತಗೊಂಡಿದ್ದು ಡೆಂಗ್ಯೂ, ಮಲೆರಿಯಾದಂತಹ ರೋಗಗಳು ಹರಡುತ್ತಿವೆ, ಆದ್ದರಿಂದ ಜನರು ಮುಂಜಾಗೃತಾ ಕ್ರಮಗಳನ್ನು ಕೈಕೊಳ್ಳಬೇಕು ಹಾಗೂ ಕೆಲ ಮನೆಗಳು ಕುಸಿಯುತ್ತಿರುವುದರಿಂದ ಜನರಿಗೆ ನಿರಾಶ್ರಿತ ಶಿಬಿರಗಳ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ತರಹದ ಆಪತ್ಕಾಲೀನ ಪರಿಸ್ಥಿತಿ ಬಂದು ಒದಗಿದಲ್ಲಿ ತಮ್ಮ ಕಚೇರಿಗೆ ಸಂಪರ್ಕಿಸಬಹುದು ಎಂದು ಬೆನಕೆ ತಿಳಿಸಿದರು. ಬೆನಕೆ ಕಚೇರಿ ಸಂಖ್ಯೆ. : ೦೮೩೧೨೪೩೩೭೩೩.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ