ಇಬ್ಬರಿಗೆ ಸಚಿವ ಸ್ಥಾನ: ತಣ್ಣಗಾಗುತ್ತಾ ಅಸಮಾಧಾನದ ಹೊಗೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟ ಮತ್ತೊಮ್ಮೆ ವಿಸ್ತರಣೆಯಾಗುವ ಲಕ್ಷಣಗಳಿವೆ.
ಮಂಗಳವಾರ ಇಬ್ಬರು ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಸಮಯ ಕೇಳಿದ್ದಾರೆ ಎಂದು ಗೊತ್ತಾಗಿದೆ. ತನ್ಮೂಲಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಅಷ್ಟರಮಟ್ಟಿಗೆ ತಣ್ಣಗೆ ಮಾಡುವ ಪ್ರಯತ್ನ ನಡೆಯುತ್ತಿದೆ.
17 ಜನರನ್ನು ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಿಸಲಾಗಿದೆ. ಇದರ ಬೆನ್ನಿಗೇ ಅಸಮಾಧಾನದ ಹೊಗೆ ಎದ್ದಿತ್ತು. ಮುಖ್ಯವಾಗಿ 8ನೇ ಬಾರಿ ಶಾಸಕರಾಗಿರುವ ಉಮೇಶ ಕತ್ತಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಯಡಿಯೂರಪ್ಪಗೆ 2 ದಿನದ ಗಡುವನ್ನೂ ನೀಡಿದ್ದರು. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗುತ್ತೇನೆ ಎನ್ನುವ ಬೆದರಿಕೆಯನ್ನೂ ಅವರು ಹಾಕಿದ್ದರು.
ಇನ್ನೂ ಹಲವಾರು ಶಾಸಕರು ಅಸಮಾಧಾನಗೊಂಡಿದ್ದರೂ ಪಕ್ಷ ಬಿಟ್ಟು ಹೋಗುವ ಮಟ್ಟಕ್ಕೆ, ಸರಕಾರ ಕೆಡಗುವ ಮಟ್ಟಕ್ಕೆ ಹೋಗುವ ಸಾಧ್ಯತೆ ಇಲ್ಲ. ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ತೀವ್ರ ಅಸಮಾಧಾನಗೊಂಡಿದ್ದು, ಅವರು ಈಗಾಗಲೆ ಹೈಕಮಾಂಡ್ ಭೇಟಿಯಾಗಿ ಬಂದಿದ್ದಾರೆ.
ಯಾರಿಬ್ಬರು ಸೇಪುಟಕ್ಕೆ ?
ಈಗಿನ ಮಾಹಿತಿ ಪ್ರಕಾರ 2 ಅಥವಾ 3 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಉಮೇಶ ಕತ್ತಿ ಮತ್ತು ಅರವಿಂದ ಲಿಂಬಾವಳಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಇವರ ಜೊತೆಗೆ ಇನ್ನೂ ಒಬ್ಬರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದ್ದು, ಯಾರು ಎನ್ನುವುದು ಖಚಿತವಾಗಿಲ್ಲ.
ಈ ಮಧ್ಯೆ, ಖಾತೆ ಹಂಚಿಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಉಪಮುಖ್ಯಮಂತ್ರಿ ಸ್ಥಾನ ಮತ್ತು ಪ್ರಭಾವಿ ಖಾತೆಗಳ ಹಂಚಿಕೆ ಮತ್ತೆ ಅಸಮಾಧಾನಕ್ಕೆ ಕಾರಣವಾಗಬಹುದೆನ್ನುವ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ. ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದರೂ ಈವರೆಗೂ ರಾಜ್ಯಪಾಲರಿಗೆ ರವಾನಿಸಿಲ್ಲ ಎನ್ನಲಾಗುತ್ತಿದೆ.
ಗೃಹ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಕೆಲವು ಖಾತೆಗಳ ಕುರಿತು ನಿರಧಾರ ತೆಗೆದುಕೊಳ್ಳಲಾಗುತ್ತಿಲ್ಲ. ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ನಿಲುವು ಒಂದಿದ್ದರೆ, ಆರ್ ಎಸ್ಎಸ್ ನಿಲುವು ಮತ್ತೊಂದು ಇರುವುದರಿಂದ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಗಳವಾರ ಖಾತೆ ಹಂಚಿಕೆ ಮತ್ತು ಸಂಪುಟ ವಿಸ್ತರಣೆ ಎರಡನ್ನೂ ಪೂರ್ಣಗೊಳಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ