
ಪ್ರಗತಿವಾಹಿನಿ ಸುದ್ದಿ: ಗುಂಪು ಕಟ್ಟಿಕೊಂಡು ಬಂದು ಯುವಕರ ಗ್ಯಾಂಗ್ ಇಬ್ಬರು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ದರ್ಶನ್ ಹಾಗೂ ಶಿವು ಎಂಬ ಯುವಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಲ್ಲದೇ ಮನೆಯನ್ನೂ ಧ್ವಂಸ ಮಾಡಿದ್ದಾರೆ. ಜ್ಯೋತಿ ಹಾಗೂ ಪೂರ್ಣಿಮಾ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಹಿಳೆಯರು.
ದರ್ಶನ್ ಎಂಬಾತ ಎರಡು ವರ್ಷಗಳ ಹಿಂದೆ ಜ್ಯೋತಿ ಎಂಬ ಮಹಿಳೆಗೆ ರಸ್ತೆಯಲ್ಲಿ ಹೋಗುವಾಗ ಚುಡಾಯಿಸುತ್ತಿದ್ದ. ಇದಕ್ಕೆ ಊರಿನಲ್ಲಿ ಪಂಚಾಯಿತಿ ಸೇರಿಸಿ ದರ್ಶನ್ ಹಾಗೂ ಗ್ಯಾಂಗ್ ಗೆ ಬುದ್ಧಿ ಹೇಳಲಾಗಿತ್ತು. ಅದೇ ಧ್ವೇಷಕ್ಕೆ ಈಗ ದರ್ಶನ್ ಹಾಗೂ ಶಿವು ಎಂಬುವವರು ಜ್ಯೋತಿಗೆ ಮತ್ತೆ ಚುಡಾಯಿಸುತ್ತಿದ್ದರು. ಇದಕ್ಕೆ ಆಕೆ ಬೈದಿದ್ದಕ್ಕೆ ಮನೆ ಬಳಿ ಬಂದು ಜ್ಯೋತಿ ಹಾಗೂ ಪೂರ್ಣಿಮಾ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಜ್ಯೋತಿ, ಪೂರ್ಣಿಮಾ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.