ಪ್ರಗತಿವಾಹಿನಿ ಸುದ್ದಿ; ಲಖನೌ: ಹುಚ್ಚುನಾಯಿ ಕಡಿತಕ್ಕೊಳಗಾಗಿದ್ದ ಮಗುವೊಂದು 50 ಜನರಿಗೆ ಕಚ್ಚಿ ಬಳಿಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ.
2 ವರ್ಷದ ಕಾವ್ಯಾ ಕುಶ್ವಾಹ್ ಎಂಬ ಮಗುವಿಗೆ ಒಂದು ತಿಂಗಳ ಹಿಂದೆ ಹುಚ್ಚುನಾಯಿ ಕಡಿದಿತ್ತು. ಮಂಗಲ್ ಕುಶ್ವಾಹ್ ಎಂಬುವರ ಮಗಳು ಕಾವ್ಯಾ ತನ್ನ ಅಮ್ಮನ ಜೊತೆ ಅಜ್ಜಿಯ ಮನೆ ಹಿಡೊಗರ್ಖೆಗೆ ಹೋಗಿದ್ದಳು. ಅಲ್ಲಿ ಆಟವಾಡುತ್ತಿದ್ದಾಗ ಬೀದಿನಾಯಿ ಕಚ್ಚಿತ್ತು. ಬಳಿಕ ಮಗು ತಾಯಿಯೊಂದಿಗೆ ಊರಿಗೆ ವಾಪಸ್ ಆಗಿದ್ದಳು.
ಘಟನೆ ನಡೆದ ಎರಡನೇ ದಿನದಿಂದ ಮಗು ಕಾವ್ಯಾ ನಾಯಿಯಂತೆಯೇ ವರ್ತಿಸುವುದು, ಆಟವಾಡುವಾಗ ಜನರಿಗೆಲ್ಲ ಕಚ್ಚುವುದನ್ನು ಶುರುಮಾಡಿದ್ದಳು. ಹೀಗೆ 50 ಜನರನ್ನು ಕಾವ್ಯಾ ಕಚ್ಚಿದ್ದಾಳೆ. ಅಲ್ಲದೇ ಮಗು ದಿನದಿಂದ ದಿನಕ್ಕೆ ಅಸ್ವಸ್ಥಳಾಗತೊಡಗಿದ್ದಳು. ಗಂಭೀರವಾಗಿ ಅನಾರೊಗ್ಯಕ್ಕೀಡಾದ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಝಾನ್ಸಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲು ಸೂಚಿಸಿದ್ದರು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಮಗುವಿನಿಂದ ಕಚ್ಚಿಸಿಕೊಂಡಿರುವ 50 ಜನರು ಕಂಗಾಲಾಗಿದ್ದು, ಆಂಟಿ ರೇಬಿಸ್ ಇಂಜಕ್ಷನ್ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ