Kannada NewsKarnataka NewsLatest

ಟೈಪೋ ಎರರ್: ವಿಟಿಯು ಹೈರಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಸ್ ವರ್ಕರ್ ಒಬ್ಬ ಮಾಡಿದ ಟೈಪಿಂಗ್ ಮಿಸ್ಟೇಕ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಹೈರಾಣಾಗಿಸಿದೆ.

ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ವ್ಯಕ್ತಿಯೊಬ್ಬರು ಕೇಳಿದ ಮಾಹಿತಿ ನೀಡುವಾಗ ಕೇಸ್ ವರ್ಕರ್ ಮಾಡಿದ ತಪ್ಪು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ವಿಟಿಯು ಸ್ಪಷ್ಟನೆ ನೀಡಲು ಹೆಣಗಾಡುವಂತೆ ಮಾಡಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆರ್ ಟಿ ಐ ಅರ್ಜಿ ದಿ ೧೫/೦೯/೨೦೨೦ ಕ್ಕೆ  ಒದಗಿಸಿದ ಮಾಹಿತಿಯಂತೆ ೨೦೧೯ – ೨೦ ರಲ್ಲಿ ವಿ ತಾ ವಿ ನೀಡಿದ ಲೀಗಲ್ ಹಾಗೂ ಪ್ರೊಫೆಷನಲ್ ಫೀ ರೂ. 41,07,58,746 / – ಎಂದು ವರದಿಯಾಗಿದೆ. ಈ ರೀತಿ ವರದಿಯಾದ ಅಂಕಿ ಅಂಶಗಳು ತಪ್ಪಾಗಿದ್ದು,. ಇದು ವಿಶ್ವವಿದ್ಯಾಲಯದ ಕೇಸ್ ವರ್ಕರ್ ಮಾಡಿದ ಬೋನಾಫೈಡ್ ಹಾಗೂ ಮುದ್ರಣದ ದೋಷವಾಗಿದೆ ಎಂದು ವಿ ತಾ ವಿ ಈ ಮೂಲಕ ಸ್ಪಷ್ಟೀಕರಣ ನೀಡಿದೆ.

೨೦೧೯ -೨೦ ರಲ್ಲಿ ವಿ ತಾ ವಿ ತನ್ನ ಕಾನೂನಾತ್ಮಕ ಕಾರ್ಯಗಳಿಗೆ ಭರಸಿದ ವೆಚ್ಚ ರೂ. ೬೮,೦೨,೧೯೮. ಇದು ಹಿಂದಿನ ವರ್ಷಗಳಲ್ಲಿ ಭರಸಿದ ಸರಾಸರಿ ವೆಚ್ಚಕ್ಕೆ ಅನುಗುಣವಾಗಿದ್ದು   ದೊಡ್ಡ ಮೊತ್ತದ ಹಣ ಸಂದಾಯವಾಗಿಲ್ಲ  ಹಾಗೂ ಪ್ರಕಟವಾದ ಅಂಕಿಅಂಶಗಳು ಸತ್ಯಕ್ಕೆ ದೂರವಾಗಿದೆ ಎಂದು ವಿತಾವಿ ತಿಳಿಸಿದೆ.

ಆರ್ ಟಿ ಐ ಗೆ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ಕೊಡುವಲ್ಲಿ ವಿತಾವಿಯಿಂದ ಈ ರೀತಿಯ ಬೋನಾಫೈಡ್ ಹಾಗೂ ಮುದ್ರಣದ ದೋಷವಾಗಿದೆ ಎಂದು ತಿಳಿದ ಕ್ಷಣವೇ ಅರ್ಜಿದಾರರಿಗೆ ಸರಿಯಾದ ಅಂಕಿ ಅಂಶವುಳ್ಳ ವರದಿಯನ್ನು ದಿನಾಂಕ ೦೭/೧೧/೨೦೨೦ ರಂದು ಕಳುಹಿಸಿಕೊಡಲಾಗಿದೆ. ಆದರೂ ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ತಪ್ಪು ಅಂಕಿ ಅಂಶಗಳನ್ನು ಹೊಂದಿದ ಮಾಹಿತಿಯನ್ನು ದುರಪಯೋಗಪಡಿಸಿಕೊಂಡು ಮಾಧ್ಯಮ ವಲಯಕ್ಕೆ ನೀಡಿ ವಿ ತಾ ವಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಟಿಯು ಹೇಳಿದೆ.

ಅಷ್ಟೇ ಅಲ್ಲದೆ ಈ ರೀತಿಯ ಖರ್ಚು ವೆಚ್ಚಗಳಲ್ಲಿ ವಿ ತಾ ವಿ ತುಂಬಾ ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದ್ದು ಈ ಅಂಕಿ ಅಂಶಗಳನ್ನೆಲ್ಲ ವಿ ತಾ ವಿ ಪ್ರತಿ ವರ್ಷ  ವಾರ್ಷಿಕ ವರದಿಯಲ್ಲಿ ಪ್ರಕಟಮಾಡುತ್ತದೆ ಹಾಗೂ ಸರ್ಕಾರಕ್ಕೂ ಸಹ ಸಲ್ಲಿಸುತ್ತದೆ.  ಆರ್ ಟಿ ಐ ಗೆ ಮಾಹಿತಿ ಒದಗಿಸುವಲ್ಲಿ ವಿ ತಾ ವಿಯ  ಕೇಸ್ ವರ್ಕರ್ ಮಾಡಿದ ಬೋನಾಫೈಡ್ ಹಾಗೂ ಮುದ್ರಣದ ದೋಷದ ಬಗ್ಗೆ ವಿಶ್ವವಿದ್ಯಾಲಯ ವಿಷಾದ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button