Kannada NewsKarnataka NewsLatest

ಕಂದಾಯ ವಸೂಲಾತಿ ಪ್ರಮಾಣ ಹೆಚ್ಚಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಗರದಲ್ಲಿ ೫೮ ವಾರ್ಡ್ ಗಳಲ್ಲಿ ಮನೆ ಮನೆಯಿಂದ ಸಂಗ್ರಹಿಸಿದ ಘನತ್ಯಾಜ್ಯವನ್ನು ಬೇರ್ಪಡಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಮಾಡುತ್ತದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವರಾದ ಯು.ಟಿ ಖಾದರ್ ಅವರು ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣ ದಲ್ಲಿ ಶುಕ್ರವಾರ(ಜು.೫) ರಂದು ಸಾರ್ವಜನಿಕ ಅಹವಾಲನ್ನು ಸ್ವೀಕಾರ ಮತ್ತು ಸಾರ್ವಜನಿಕ ಸಂಪರ್ಕ ಸಭೆ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆಯಿಂದ ಕಸ ಸಂಗ್ರಹಣೆಗಾಗಿ ಸ್ತ್ರೀ ಶಕ್ತಿ ಗುಂಪುಗಳು, ಆರ್.ಡಬ್ಲು.ಎ ಹಾಗೂ ಪೌರ ಕಾರ್ಮಿಕರಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮನೆ ಮನೆಗೆ ಕರಪತ್ರಗಳನ್ನು ಹಂಚುವ ಮೂಲಕ ಕಸ ವಿಂಗಡನೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಘನತ್ಯಾಜ್ಯ ನಿರ್ವಹಣೆ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸುವ ಬಗ್ಗೆ ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ೨೦೧೫ ರಿಂದ ೨೦೧೮ ಕ್ಕೆ ಸುಮಾರು ೬೫ ಸಾವಿರ ಜನಸಂಖ್ಯೆ ಹೆಚ್ಚಾಗಿದೆ ಎಂದರು.
ಕಳೆದ ಮೂರನಾಲ್ಕು ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನೀರು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ಮಳಿಗೆಗಳಿಂದ ಬರುವ ಕಂದಾಯ ಶೇಕಡಾ ೩೦ ರಷ್ಟು ಮಾತ್ರವಿದ್ದು, ಉಳಿದ ಶೇಕಡಾ ೭೦ ರಷ್ಟು ವಸೂಲಾತಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಿಂಗಳು ಪ್ಯಾಕೇಜ್ ೧ ರಿಂದ ೮ ರ ವರೆಗಿನ ನಿರ್ವಹಣಾ ವೆಚ್ಚವನ್ನು ಟೆಂಡರ್ ಷರತ್ತುಗಳನ್ವಯ ಮಹಾನಗರ ಪಾಲಿಕೆ ನಿಧಿಯಿಂದಲೇ ಭರಿಸಲಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿರುವ ೬ ಇಂದಿರಾ ಕ್ಯಾಂಟಿನ್ ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಚಿವ ಖಾದರ್ ಅವರು ಸಂತಸ ವ್ಯಕ್ತ ಪಡಿಸಿದರು.
ಬೂಡಾ ನುವೇಶನ ಹಂಚಿಕೆಗೆ ಸೂಚನೆ:
ಬೂಡಾದಲ್ಲಿರುವ ೧೦೨೨ ಸೈಟ್ ಗಳು ಆದಷ್ಟು ಬೇಗನೆ ಪಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಬುಡಾ ಆಯುಕ್ತರಿಗೆ ಸಚಿವರು ಹೇಳಿದರು.
೩೯ ಪೌರ ಕಾರ್ಮಿಕರಿಗೆ ಜಿ+೩ ಮಾದರಿ ಹಾಗೂ ೧೩ ಸ್ವಂತ ನಿವೇಶನ ಹೊಂದಿರುವ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿಯಲ್ಲಿ ವಸತಿ ನಿರ್ಮಿಸಿಕೊಡಲು ಈಗಾಗಲೇ ಅನುಮೋದನೆ ಪಡೆಯಲಾಗಿದೆ ಎಂದು ಹೇಳಿದರು.
 ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ,  ಶಾಸಕರಾದ ಅಭಯ ಪಾಟೀಲ,  ಅನಿಲ ಬೆನಕೆ, ಜಿಲ್ಲಾಧಿಕಾರಿ  ಡಾ.ಎಸ್.ಬಿ ಬೊಮ್ಮನಹಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಬುಡಾ ಆಯುಕ್ತ  ಪ್ರಿತಮ್ ನಸ್ಲಾಪುರೆ, ಮಹಾನಗರ ಪಾಲಿಕೆ ಉಪ ಆಯುಕ್ತ ರಮೇಶ ಕೊಲ್ಹಾರ, ಸೇರಿದಂತೆ ಎಲ್ಲ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಂಡಿದ್ದರು.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button