Kannada NewsKarnataka NewsLatest

*ರೀಲ್ಸ್ ಮಾಡಲು ಹೋಗಿ ಜಲಪಾತದಲ್ಲಿ ಜಾರಿ ಬಿದ್ದ ಯುವಕ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ; ಉಡುಪಿ: ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಈ ನಡುವೆ ರೀಲ್ಸ್ ಮಾಡಲು ಹೋಗಿದ್ದ ಯುವಕನೊಬ್ಬ ನೋಡ ನೋಡುತ್ತಿದ್ದಂತೆ ಕಾಲು ಜಾರಿ ಜಲಪಾತದಲ್ಲಿ ಬಿದ್ದಿರುವ ಘಟನೆ ಉಡುಪಿ ಜಿಲ್ಲೆಯ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ.

ಭದ್ರಾವತಿ ಮೂಲದ ಶರತ್ ಕುಮಾರ್ (23) ಜಲಪಾತದಲ್ಲಿ ಬಿದ್ದು ಕಣ್ಮರೆಯಾಗಿದ್ದಾನೆ. ವರುಣಾರ್ಭಟಕ್ಕೆ ನದಿ, ಜಲಪಾತಗಳು ಬೋರ್ಗರೆದು ಹರಿಯುತ್ತಿದ್ದು ಸಾರ್ವಜನಿಕರು ಜಲಪಾತದ ಬಳಿ ಹೋಗದಂತೆ ಜಿಲ್ಲಾಡಳಿತ, ಪೊಲೀಸರು ಕಟ್ಟೆಚ್ಚರಕ್ಕೆ ಸೂಚಿಸುತ್ತಿದ್ದಾರೆ. ಆದರೂ ಪ್ರವಾಸಿಗರು ಹುಚ್ಚಾಟವಾಡುತ್ತಾ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಅರಿಶಿನಗುಂಡಿ ಜಲಪಾತಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ ಪೊಲೀಸರ ಕಣ್ತಪ್ಪಿಸಿ ಯುವಕರು ಜಾಲಪಾತದ ಬಳಿ ಹೋಗಿದ್ದಾರೆ. ಯುವಕ ಶರತ್ ಕುಮಾರ್ ಜಲಪಾದ ಎದುರಿನ ಕಲ್ಲಿನ ಮೇಲೆ ನಿಂತು ಜಲಪಾತದತ್ತ ನೋಡುತ್ತಿದ್ದಾನೆ. ಇದೇ ವೇಳೆ ಅಕಸ್ಮಾತ್ ಆಗಿ ಕಾಲು ಜಾರಿದ್ದು ಯುವಕ ಜಲಪಾತಕ್ಕೆ ಬಿದ್ದು ಕಣ್ಮರೆಯಾಗಿದ್ದಾನೆ. ಈ ಭಯಂಕರ ದೃಶ್ಯ ಯುವಕನ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ. ರೀಲ್ಸ್ ಮಾಡಲು ಹೋಗಿ ಯುವಕ ಜಲಪಾತದಲ್ಲಿ ನಾಪತ್ತೆಯಾಗಿದ್ದಾನೆ.

ಸ್ಥಳಕ್ಕೆ ಪಿಎಸ್ ಐ ಜಯಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿಗಳಿಂದ ಯುವಕನಿಗಾಗಿ ಜಲಪಾತದ ಬಳಿ ಶೋಧಕಾರ್ಯ ಮುಂದುವರೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button