Kannada NewsKarnataka NewsLatestPolitics

*ನುಡಿದಂತೆ ನಡೆದಿದ್ದೇವೆ, 3 ತಿಂಗಳಲ್ಲಿ ಮೂರನೇ ಗ್ಯಾರಂಟಿ ಜಾರಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*

ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವೆ


ಪ್ರಗತಿವಾಹಿನಿ ಸುದ್ದಿ; ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು. ಇದರೊಂದಿಗೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಯೋಜನೆಗಳಲ್ಲಿ ಮೂರು ಯೋಜನೆಗಳು ಜಾರಿಯಾದಂತಾಗಿದೆ.

ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮೂರು ತಿಂಗಳಲ್ಲಿ ಮೂರನೇ ಗ್ಯಾರಂಟಿ ಜಾರಿಗೆ ತಂದಿದ್ದೇವೆ..ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ ಎಂದರು. ಎಲ್ಲಾ ಭಾಷೆ, ಜಾತಿ ಧರ್ಮದವರಿಗೆ ಈ ಯೋಜನೆ ದಕ್ಕಬೇಕು. ಅಂಬೇಡ್ಕರ್, ಗಾಂಧಿ, ಶಿವಾಜಿ, ಅಕ್ಕಮಹಾದೇವಿ ಅವರಂಥ ಮಹಾಪುರುಷರ ಹಾದಿಯಲ್ಲಿ ಸಾಗಬೇಕು ಎಂದರು. ಸರಕಾರ ಬಂದು ಕೇವಲ 3 ತಿಂಗಳೋಳಗೆ ಈ ಗ್ಯಾರಂಟಿ ಗಳು ಜಾರಿಯಾಗುತ್ತಿವೆ.


ಕಾಂಗ್ರೆಸ್ ಪಕ್ಷ ಮೊದಲಿಂದಲೂ ನುಡಿದಂತೆ ನಡೆಯುವ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತೋ ಆಗೆಲ್ಲ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುತ್ತ ಬಂದಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ ಶಕ್ತಿ, ಅನ್ನಭಾಗ್ಯ ಜಾರಿಯಾಗಿದೆ.


ಈಗ ಗೃಹ ಜ್ಯೋತಿ ಆರಂಭವಾಗಿದೆ. ಆಗಸ್ಟ್ 18 ಅಥವಾ 20 ರಂದು ಗೃಹ ಲಕ್ಷ್ಮೀ ಜಾರಿಯಾಗಲಿದೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಜನರಿಗೆ ಭರವಸೆ ತುಂಬುವುದಕ್ಕಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿತು.ಎಷ್ಟೇ ಕಷ್ಟವಾದರೂ, ವಿರೋಧಿಗಳು ಏನೇ ಹೇಳಿದರೂ ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ, ನುಡಿದಂತೆ ನಡೆದೇ ನಡೆಯುತ್ತೇವೆ ಎಂದು ಸಚಿವರು ಹೇಳಿದರು. ಉಡುಪಿ ಜಿಲ್ಲೆಯಲ್ಲಿ 3,15, 692 ಗ್ರಾಹಕರಿದ್ದು, ಈ ಪೈಕಿ 2,69,949 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button