

ಡಾ. ದೀಪ್ತಿ ರವಿರಾಜ ಕುಲಕರ್ಣಿ
ಹಿಂದೂ ಪುರಾಣಗಳ ಪ್ರಕಾರ, ಯುಗಾದಿಯಂದು ಬ್ರಹ್ಮ ದೇವನು ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ ಎನ್ನುವ ಉಲ್ಲೇಖವಿದೆ. ಬ್ರಹ್ಮದೇವನಿಂದ ಮಾನವಕುಲ ಆರಂಭವಾಯಿತು ಎನ್ನಲಾಗಿದೆ. ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಆರಂಭ. ಇದು ಹಿಂದೂ ತಿಂಗಳ ಚೈತ್ರದ ಮೊದಲ ದಿನ ಮತ್ತು ಚೈತ್ರ ನವರಾತ್ರಿಯು ಈ ದಿನದಂದು ಪ್ರಾರoಭವಾಗುತ್ತದೆ. ಈ ಹಬ್ಬವು ವಸಂತ ಕಾಲದ ಆಗಮನ ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುವ ಬಣ್ಣ, ಸಸ್ಯ ವರ್ಗದಿಂದ ಸಮೃದ್ಧವಾಗುವ ಕಾಲವಿದು. ಯುಗಾದಿ ಹಬ್ಬಕ್ಕೆ ವಿವಿಧ ಪ್ರಾದೇಶಿಕ ಹೆಸರುಗಳಿವೆ. ಕರ್ನಾಟಕದಲ್ಲಿ ಯುಗಾದಿ ಎಂದು ಮಹಾರಾಷ್ಟ್ರದಲ್ಲಿ ಗುಡಿಪಾಡ್ವ ಎಂದು ಕರೆಯಲಾಗುತ್ತದೆ.
೧೨ನೇ ಶತಮಾನದಲ್ಲಿ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರು ಯುಗಾದಿಯನ್ನು ಹೊಸ ವರ್ಷದ ದಿನ, ತಿಂಗಳಿನ ಆರಂಭ ಎಂದು ಕರೆದರು. ಇದು ವಸಂತ ಕಾಲದ ಆರಂಭವೂ ಹೌದು.
ಬದಲಾವಣೆಯೊಂದೆ ಶಾಶ್ವತ ಎನ್ನುವ ಮಾತು ಉಂಟು. ಕೇವಲ ಯುಗ ಪ್ರಂಭವಾಗುವುದಷ್ಟೆ ಅಲ್ಲ ಪ್ರಕೃತಿಯಲ್ಲಿ ನಡೆಯುವ ಎಲ್ಲ ಬದಲಾವಣೆಯನ್ನು ನಾವು ಕಾಣಬಹುದು. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯಲು ಆರಂಭದ ಕ್ಷಣವಿದು. ಮರದಲ್ಲಿನ ಎಲೆ ಉದುರುವಿಕೆ, ಅರಳುವಿಕೆ, ಅಗಲುವಿಕೆ ಮತ್ತು ಚಿಗುರುವಿಕೆ ಎಲ್ಲ ಕಾರ್ಯಚಕ್ರದ ಬೇರೆ ಬೇರೆ ಬದಲಾವಣೆಯನ್ನು ನಾವು ಈ ಪ್ರಕೃತಿಯಲ್ಲಿ ನೋಡುತ್ತೇವೆ.
ಈ ಹಬ್ಬವನ್ನು ನಾನಾ ಕಡೆಗಳಲ್ಲಿ ನಾನಾ ರೀತಿಗಳಲ್ಲಿ ಆಚರಿಸುತ್ತದೆ. ದಕ್ಷಿಣ ಭಾರತದಲ್ಲಿ ಎಷ್ಟೋ ಕಡೆಗಳಲ್ಲಿ ಇದೊಂದು ಪರ್ವ ಕಾಲವೆಂದು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ತೊಟ್ಟು ದೇವರಿಗೆ ಮತ್ತು ಹೊಸ ಪಂಚಾಗವನ್ನು ಪೂಜೆ ಮಾಡುತ್ತಾರೆ. ಅಂದಿನಿಂದ ಹೊಸ ಪಂಚಾಂಗದ ಪಠಣ ಮಾಡಲಾಗುತ್ತದೆ. ಎಲ್ಲರ ಮನೆಗಳನ್ನು ಸ್ವಚ್ಛಗೊಳಿಸಿ ಬಾಗಿಲಿಗೆ ಮಾವಿನ ಎಲೆಯ ಹಸಿರು ತೋರಣ ಕಟ್ಟಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ರುಚಿಕರವಾದ ಸಿಹಿ ತಿಂಡಿಗಳಾದ ಒಬ್ಬಟ್ಟು, ಹೋಳಿಗೆ, ಪಾಯಸ, ಕಡಬು, ಕಜ್ಜಾಯ ಇತ್ಯಾದಿಗಳನ್ನು ದೇವರಿಗೆ ಅರ್ಪಿಸಿ ತಾವು ತಿಂದು ಸಂಭ್ರಮಿಸುತ್ತಾರೆ. ಅಂದು ದೇವಾಲಯಗಳಿಗೆ ಭೇಟಿ ಕೊಡುತ್ತಾರೆ. ಯುಗಾದಿ ದಿನವನ್ನು ವ್ಯಾಪಾರ, ಮನೆ ಅಥವಾ ವಾಹನ ಖರಿದಿಯಂತಹ ಯುವುದೇ ಹೊಸ ವಿಷಯಗಳನ್ನು ಪ್ರಾರಂಭಿಸಲು ಅದೃಷ್ಟದ ದಿನವೆಂದು ಪರಿಗಣಿಸಲಾಗುತ್ತದೆ. ಯುಗಾದಿಯ ಹಬ್ಬವು ವಿವಿಧ ಆಚರಣೆಗಳು ಮತ್ತು ಪದ್ಧತಿಗಳನ್ನು ಒಳಗೊಂಡಿದೆ.
ಆ ದಿನ ವಿಶೇಷವಾಗಿ ಬೇವು ಬೆಲ್ಲದ ಮಿಶ್ರಣವನ್ನು ನೈವಿದ್ಯ ಮಾಡಿ ಎಲ್ಲರಿಗೂ ಹಂಚುತ್ತಾರೆ. ಬೇವು ಬೆಲ್ಲ ಸಿಹಿ ಕಹಿ ಎರಡರ ಮಿಶ್ರಣ ಜೀವನದಲ್ಲಿ ನಾವು ಎರಡನ್ನು ಅಂದರೆ ಸುಖ ಮತ್ತು ದುಃಖ ಸರಿಸಮಾನವಾಗಿ ಕಾಣಬೇಕು ಎಂಬುದು ಇದರ ಪ್ರತೀಕ. ಸುಖ ಬಂದಾಗ ಹಿಗ್ಗ ಬೇಡ ದುಃಖ ವಾದಾಗ ಕುಗ್ಗ ಬೇಡ ಎಂದು ಹಿರಿಯರು ಹೇಳಿದಂತೆ ಎಲ್ಲವನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು. ವೈಜ್ಞಾನಿಕವಾಗಿ ಹೇಳುವುದಾದರೆ ಬೇವು ನಮ್ಮ ದೇಹದಲ್ಲಿನ ಕಲ್ಮಷವನ್ನು ತೊಡೆದು ಹಾಕುವ ಕೆಲಸ ಮಾಡುತ್ತದೆ. ಇದರಲ್ಲಿರುವ ಔಷಧೀಯ ಗುಣವಿರುವುದರಿಂದ ಎಲ್ಲಾ ಕಲ್ಮಷ ದೂರವಾಗುತ್ತದೆ. ನವ ವರ್ಷದ ಮಹತ್ವವನ್ನು ತಿಳಿದು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ.