EducationKannada NewsKarnataka NewsLatest

*ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ: ವಾರಣಾಸಿಯ ಉಜ್ವಲ್ ಪರಾಶರ್ ಚಾಂಪಿಯನ್*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಅಂಬರ್ ವ್ಯಾಲಿ ಶಾಲೆ ಆಯೋಜಿಸಿದ್ದ ವಿ.ಜಿ. ಸಿದ್ಧಾರ್ಥ ಸ್ಮರಣಾರ್ಥ ರಸಪ್ರಶ್ನೆ ಸ್ಪರ್ಧೆ 2023ರಲ್ಲಿ ವಾರಣಾಸಿಯ ಸನ್ ಬೀಮ್ ಇಂಗ್ಲೀಷ್ ಶಾಲೆಯ ಉಜ್ವಲ್ ಪರಾಶರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಎರಡನೇ ಆವೃತ್ತಿಯ ಈ ಸ್ಪರ್ಧೆಯ ಅಂತಿಮ ಸುತ್ತು ನವೆಂಬರ್ 30ರಂದು ನಡೆದಿದ್ದು, ಐಶ್ವರ್ಯ ಡಿ.ಕೆ.ಎಸ್ ಹೆಗ್ಗಡೆ ಅವರ ನೇತೃತ್ವದಲ್ಲಿ ಅಂಬರ್ ವ್ಯಾಲಿ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ವಿನೂತನ ಚಟುವಟಿಕೆಗಳ ಪೈಕಿ ಈ ರಸಪ್ರಶ್ನೆ ಸ್ಪರ್ಧೆ ಕೂಡ ಒಂದಾಗಿದೆ.

“ಉತ್ತಮ ಭಾರತ್ಕಾಗಿ ಮಗು ನಾನು” ಎಂಬ ಪರಿಕಲ್ಪನೆಯ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೇಂದ್ರದ ಮಾಜಿ ಸಚಿವ, ತಿರುವನಂತಪುರದ ಸಂಸದರಾದ ಡಾ. ಶಶಿ ತರೂರ್ ಅವರು ಅಂತಿಮ ಸುತ್ತಿನ ಸ್ಪರ್ಧಿಗಳಿಗೆ ಸ್ಫೂರ್ತಿ ನೀಡಿದರು. “ಕುತೂಹಲಕಾರಿ ಹಾಗೂ ವಾಣಿಜ್ಯೋದ್ಯಮದ ಮನೋಭಾವದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಆಮೂಲಕ ಭವ್ಯ ಭಾರತವನ್ನು ನಿರ್ಮಾಣ ಮಾಡಬೇಕು” ಎಂದು ತರೂರ್ ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಖ್ಯಾತ ಕ್ವಿಜ್ ಮಾಸ್ಟರ್ ಗಿರಿ ಪಿಕ್ ಬ್ರೈನ್ ಅವರು ನಡೆಸಿಕೊಟ್ಟ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ವಾರಣಾಸಿ, ಸೋನೇಪಟ್, ಗ್ವಾಲಿಯರ್, ಮುಂಬೈ, ಕೊಚ್ಚಿ, ಚೆನ್ನೈ, ಮತ್ತು ಬೆಂಗಳೂರಿನ ಶಾಲಾ ಮಕ್ಕಳು ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಉಜ್ವಲ್ ಪರಾಶರ್, 1 ಲಕ್ಷದ ವರೆಗಿನ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ಬೆಂಗಳೂರಿನ ಸಂತ ಪಾಲ್ಸ್ ಇಂಗ್ಲೀಷ್ ಶಾಲೆಯ ಆದಿತ್ಯ ಗಿರಿ ಹಾಗೂ ಕೊಚ್ಚಿಯ ಭಾವನ್ಸ್ ವಿದ್ಯಾ ಮಂದಿರ ಶಾಲೆಯ ಅಮನ್ ಮನೋಜ್ ಅವರು ಜಂಟಿ ರನ್ನರ ಅಪ್ ಆಗಿದ್ದಾರೆ.

ಈ ಸ್ಪರ್ಧೆಯು ಜಮ್ಮುವಿನಿಂದ ತಿರುವನಂತಪುರ ಹಾಗೂ ಮೌಂಟ್ ಅಬುವಿನಿಂದ ಶಿಲ್ಲಾಂಗ್ ವರೆಗೂ ದೇಶದ 74 ನಗರಗಳಲ್ಲಿ ಡಿಜಿಟಲ್ ವೇದಿಕೆ ಮೂಲಕ ನಡೆದು ಅಂತಿಮ ಸುತ್ತಿಗೆ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.

ದೇಶದ ಖ್ಯಾತ ಶಿಕ್ಷಣತಜ್ಞ ಜಿ. ಬಾಲಸುಬ್ರಮಣಿಯನ್, ನವೋದ್ಯಮದ ಮಾರ್ಗದರ್ಶಕರು ಹಾಗೂ ಬಂಡವಾಳ ಹೂಡಿಕೆದಾರರಾದ ರಾಮಚಂದ್ರನ್ ಜಿ ಅವರು ಈ ಸ್ಪರ್ಧೆಯ ವೇಳೆ ಉಪಸ್ಥಿತರಿದ್ದರು. ಇವರು ಮಕ್ಕಳ ಜೊತೆ ಸಂಭಾಷಣೆ ನಡೆಸಿದರು.

ಈ ಸ್ಪರ್ಧೆಯ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಐಶ್ವರ್ಯ ಡಿಕೆಎಸ್ ಹೆಗ್ಗಡೆ ಅವರು, “ನಮ್ಮ ಮಕ್ಕಳು ಯಶಸ್ಸು ಸಾಧಿಸುವುದಷ್ಟೆ ಅಲ್ಲ, ಅವರು ಉತ್ತಮ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಉತ್ತೇಜನ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು ಎಂಬ ನಮ್ಮ ಶಾಲೆಯ ಧ್ಯೇಯ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರತಿಧ್ವನಿಸಿತ್ತು. ಪ್ರತಿ ಯುವಕರ ಮೆದುಳು ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿರುತ್ತದೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button