Latest

ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದ ಬಿಜೆಪಿ ನಾಯಕಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊಟ್ಯಂತರ ಭಾರತೀಯರು ನಿರೀಕ್ಷಿಸುತ್ತಿದ್ದ ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆ.5ರಂದು ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಈಗಾಗಲೇ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಶಿಲನ್ಯಾಸ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಈ ನಡುವೆ ಬಿಜೆಪಿ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ತಾನು ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಉಮಾಭಾರತಿ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಕೂಡ ಅವರು ದೂರ ಉಳಿಯುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದವರಲ್ಲಿ ಉಮಾಭಾರತಿ ಕೂಡ ಪ್ರಮುಖರು.

ಈ ಬಗ್ಗೆ ಸ್ವತ: ಉಮಾ ಭಾರತಿ ಪ್ರತಿಕ್ರಿಯಿಸಿದ್ದು,ನಾನು ಇಂದು ಭೋಪಾಲ್‌ನಿಂದ ರೈಲಿನಲ್ಲಿ ಹೊರಟು ಅಯೋಧ್ಯೆಗೆ ಬರಬೇಕಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾದರೆ ನನಗೂ ಕೊರೊನಾ ಸೋಂಕು ಹರಡುವ ಭೀತಿಯಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು. ಹೀಗಾಗಿ ನಾನು ದೂರ ಉಳಿಯುತ್ತೇನೆ ಎಂದಿದ್ದಾರೆ.

ಅಲ್ಲದೇ ಪ್ರಧಾನಿ ಮೋದಿಯವರು ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಗೆ ಹೊರಟ ಬಳಿಕ ನಾನು ಅಯೋಧ್ಯೆಗೆ ತೆರಳುತ್ತೇನೆ. ಭೂಮಿ ಪೂಜೆ ವೇಳೆ ಸರಯೂ ನದಿ ತಟದಲ್ಲಿ ವಿಹರಿಸುತ್ತೇನೆ. ನಂತರ ರಾಮ್‌ಲಲ್ಲಾನ ದರ್ಶನ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button