Kannada NewsKarnataka NewsLatest

ಕೋರೆ ಸೇರಿ ಕೆಎಲ್‌ಇ ಸಂಸ್ಥೆಯ ಪದಾಧಿಕಾರಿಗಳ ಅವಿರೋಧ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನೂತನ ಅಧ್ಯಕ್ಷರಾಗಿ ಮಹಾಂತೇಶ ಶಿವಾನಂದ ಕೌಜಲಗಿಯವರು ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ರಾಜೇಂದ್ರ ವಿರುಪಾಕ್ಷಪ್ಪ ಹಂಜಿ ಹಾಗೂ ಬಸವರಾಜ ಶಿವಲಿಂಗಪ್ಪ ತಟವಟಿ ಅವರು ಆಯ್ಕೆಗೊಂಡಿದ್ದಾರೆ.

ಆಡಳಿತ ಮಂಡಳಿಯ ಸದಸ್ಯರಾಗಿ ಪ್ರಭಾಕರ ಬಸಪ್ರಭು ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಅಮಿತ ಪ್ರಭಾಕರ ಕೋರೆ, ಶ್ರೀಶೈಲಪ್ಪ ಚನ್ನಪ್ಪ ಮೆಟಗುಡ್, ಜಯಾನಂದ ಊರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಶಂಕರಣ್ಣ ಈಶ್ವರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ, ಅನೀಲ ವಿಜಯಬಸಪ್ಪ ಪಟ್ಟೇದ, ವಿರುಪಾಕ್ಷಿ ಶಿವಲಿಂಗಪ್ಪ ಸಾಧುನವರ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನಂತರ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯು ೧೦೪ ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಸತ್ಯ, ಪ್ರೇಮ, ಸೇವೆ, ಸ್ವಾರ್ಥತ್ಯಾಗ ಧ್ಯೇಯಗಳೊಂದಿಗೆ ಸಪ್ತರ್ಷಿಗಳಿಂದ ಸ್ಥಾಪನೆಗೊಂಡ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯು ಅವಿರೋಧವಾಗಿ ಆಯ್ಕೆಗೊಂಡಿರುವುದು ಹೆಮ್ಮೆಯೆನಿಸುತ್ತಿದೆ ಎಂದರು.

ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪುಗೊಂಡಿರುವ ಕೆಎಲ್‌ಇ ಸಂಸ್ಥೆ ಸದಸ್ಯರ ಆದೇಶಕ್ಕೆ ತಲೆ ಬಾಗಿದೆ. ಸದಸ್ಯರು ನಮ್ಮ ಮೇಲೆ ಇಟ್ಟ ವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ತಾರದ ಹಾಗೆ ಶೈಕ್ಷಣಿಕ, ಆರೋಗ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಂಸ್ಥೆ ಅದ್ವಿತೀಯವಾದುದನ್ನು ಸಾಧಿಸಿ ತೋರಿಸಿದೆ.
ಅದರ ಫಲವಾಗಿಯೇ ೨೭೦ಕ್ಕೂ ಹೆಚ್ಚು ಅಂಗಸಂಸ್ಥೆಗಳು ದೇಶಾದ್ಯಂತ ವಿಸ್ತರಿಸಿವೆ. ೧.೨೫ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ೧೬೦೦೦ ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೆಲ್ಲಕ್ಕೂ ಕೆಎಲ್‌ಇ ಸಂಸ್ಥೆ ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಭಾಷಾತೀತವಾಗಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಗ್ರಾಮೀಣ ಭಾಗಗಳ ರೈತರ ಮಕ್ಕಳ ಕಲ್ಯಾಣಕ್ಕೆ ಶ್ರಮಿಸಿದೆ. ಅವರಿಗೆ ಉತ್ತಮವಾದ ಆರೋಗ್ಯ ಸೇವೆಗಳನ್ನು ನೀಡಿದೆ. ಅಂತೆಯೇ ಕೆಎಲ್‌ಇ ಸಂಸ್ಥೆಯು ಜನತೆಯ ವಿಶ್ವಾಸಕ್ಕೆ ಪಾತ್ರವಾಗಿದೆ, ಅವರ ನಂಬಿಕೆಯನ್ನು ಉಳಿಸಿಕೊಂಡು ಮುನ್ನಡೆದಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಭವಿಷ್ಯದ ಯೋಜನೆಗಳನ್ನು ಕುರಿತು ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ನಿರ್ಮಾಣಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ ೬೦೦ ಹಾಸಿಗೆಗಳ ಆಸ್ಟರ್ ಕೆಎಲ್‌ಇ ಆಸ್ಪತ್ರೆ, ನವಿಮುಂಬೈಯಲ್ಲಿ ಕೆಎಲ್‌ಇ ಸಿಬಿಎಸ್‌ಸಿ ಸ್ಕೂಲ, ಪುಣೆಯಲ್ಲಿ ೨೫೦ ಹಾಸಿಗೆಗಳ ಆಸ್ಪತ್ರೆ, ಬೆಳಗಾವಿಯಲ್ಲಿ ೨೫೦ ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ, ಬೆಳಗಾವಿಯಲ್ಲಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಾನಂದ ಕೌಜಲಗಿಯವರು ಮಾತನಾಡಿ, ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿದರು. ಮಹಾಂತೇಶ ಕವಟಗಿಮಠ ಸ್ವಾಗತಿಸಿದರು. ಪತ್ರಿಕಾ ಗೋಷ್ಠಿಯಲ್ಲಿ   ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button