Kannada News

ಎಂಇಎಸ್ ಗೇ ಉರುಳಾದ ಶಾ ಸಂಧಾನ; ಮಹಾಮೇಳಾವ ಮೇಲೆ ಅನಿಶ್ಚಿತತೆಯ ತೂಗು ಕತ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ವಿಧಾನ ಮಂಡಳಗಳ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜಕೀಯ ಮುಖಂಡರನ್ನು ಬಳಸಿಕೊಂಡು ಅಶಾಂತಿ ಸೃಷ್ಟಿಸಿ ವಿಘ್ನ ಸಂತೋಷ ಅನುಭವಿಸಲು ಮುಂದಾಗಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗಿನ ಸಭೆಯ ನಂತರ ಇಕ್ಕಳದಲ್ಲಿ ಕೈ ಹಾಕಿಕೊಂಡು ಒತ್ತಿಕೊಂಡ ಅನುಭವವಾಗಿದೆ.

ಅಧಿವೇಶನ ಆರಂಭಗೊಳ್ಳುವ ದಿನವಾದ ಡಿ.19ರಂದೇ ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಎಂಇಎಸ್ ನಿರ್ಧರಿಸಿತ್ತು. ಇದಕ್ಕಾಗಿ ಈಗಾಗಲೇ ಹಳ್ಳಿಹಳ್ಳಿಗಳಿಗೆ ತೆರಳಿ ಮರಾಠಿ ಭಾಷಿಕರನ್ನು ಸಂಘಟಿಸುವ ಕಾರ್ಯದಲ್ಲಿ ಎಂಇಎಸ್ ಮುಖಂಡರು ನಿರತರಾಗಿದ್ದಾರೆ. ಆದರೆ ಶಾ ಸೂತ್ರಗಳು ಎಂಇಎಸ್ ಮುಖಂಡರ ಆಟ ಕೆಡಿಸಿವೆ. ಎಂಇಎಸ್ ನ ಪ್ಲ್ಯಾನ್ ಗಳೆಲ್ಲ ಗೋಡೆಗೆ ಹೊಡೆದ ಚೆಂಡಿನಂತೆ ಉಲ್ಟಾ ಹೊಡೆದಿವೆ. ಹೀಗಾಗಿ ಡಿ.19ರಂದು ಮಹಾಮೇಳಾವಾ ನಡೆಯುವುದೇ ಪ್ರಶ್ನಾರ್ಹವಾಗಿದೆ.

ಎಡವಟ್ಟಾಗಿದ್ದು ಎಲ್ಲಿ?:

ದಿನದಿಂದ ದಿನಕ್ಕೆ ಸೊರಗುತ್ತಲೇ ಸಾಗಿದ ಎಂಇಎಸ್ ಪ್ರಸ್ತುತ ಹೇಳಹೆಸರಿಲ್ಲದ ನಾಯಕರಿಂದ ನಡೆಯುತ್ತಿದೆ. ಈ ದುಸ್ಥಿತಿ ನಿಭಾಯಿಸಿಕೊಳ್ಳಲು ಈ ಬಾರಿ ಅಧಿವೇಶನದ ವೇಳೆ ಹೈಡ್ರಾಮಾ ಮೂಲಕ ಗಮನ ಸೆಳೆಯುವ ಉದ್ದೇಶ ಎಂಇಎಸ್ ಮುಖಂಡರದಾಗಿತ್ತು. ಇದಕ್ಕಾಗಿಯೇ ಎರಡು ತಿಂಗಳುಗಳಿಂದ ತಾಲೀಮು ಆರಂಭಿಸಿದ್ದ ಎಂಇಎಸ್, ಸ್ಥಳೀಯ ಮರಾಠಿ ಭಾಷಿಕರ ಕ್ಷೀಣ ಬೆಂಬಲದ ನಿಮಿತ್ತ ಮಾಮೂಲಿಯಂತೆ ಮಹಾರಾಷ್ಟ್ರದ ರಾಜಕಾರಣಿಗಳನ್ನು ತನ್ನ ಶಕ್ತಿಯಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಇದಕ್ಕಾಗಿ ಬೆಳಗಾವಿಯ ಎಂಇಎಸ್ ಮುಖಂಡರೊಬ್ಬರು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆಯವರಿಗೆ ಪತ್ರ ಬರೆದು ಬೆಂಬಲ ಕೋರಿದ್ದರು. ಎಡವಟ್ಟು ಪ್ರಾರಂಭವಾದದ್ದೇ ಇಲ್ಲಿಂದ.

ಗಡಿ ತಂಟೆಯಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಈ ಕ್ಷುಲ್ಲಕ ವಿಚಾರಕ್ಕೆ ಅಗತ್ಯಕ್ಕಿಂತ ಹೆಚ್ಚು ಆದ್ಯತೆ ನೀಡಿದ್ದು ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಆರಂಭದಲ್ಲಿ ಇದು ಎಂಇಎಸ್ ಗೆ ಅದರ ಉದ್ದೇಶ ಈಡೇರುತ್ತಿದೆ ಎಂಬ ಭ್ರಮೆ ಹುಟ್ಟಿಸಿತು. ಆದರೆ ಗಡಿ ವಿಷಯವನ್ನು ಎಂಇಎಸ್ ಗಿಂತಲೂ ಹೆಚ್ಚು ಗಂಭೀರವಾಗಿ ತೆಗೆದುಕೊಂಡ ಮಹಾರಾಷ್ಟ್ರ ಸರಕಾರ ಹಿಂದು ಮುಂದಾಲೋಚನೆಗಳಿಲ್ಲದೆ ಏನೇನೋ ಭ್ರಮಿಸಿಕೊಳ್ಳುತ್ತ ಅಮಿತ್ ಶಾ ಅಂಗಳಕ್ಕೆ ಜಿಗಿದಿದ್ದು ಎರಡನೇ ಎಡವಟ್ಟು.

ಬುಧವಾರದ ಸಭೆಯಲ್ಲಿ ಅಮಿತ್ ಶಾ ಶಾಂತಿ ಸಂಧಾನದ ಉದ್ದೇಶದಿಂದ ನೀಡಿದ ಸಲಹೆ ಸೂಚನೆಗಳು ತಮಗೆ ಉರುಳಾಗಿರುವುದು ಈಗ ಮಹಾರಾಷ್ಟ್ರದ ರಾಜಕೀಯ ಮುಖಂಡರಿಗೂ, ಎಂಇಎಸ್ ನಾಯಕರಿಗೂ ಮನವರಿಕೆಯಾಗಿದೆ. ಅವರ ಎಲ್ಲ ಉದ್ದೇಶಗಳೂ ಇದೀಗ ತಲೆಕೆಳಗಾಗಿದ್ದು ವಿಧಾನ ಮಂಡಳಗಳ ಅಧಿವೇಶನದ ಹಾದಿ ಇನ್ನಷ್ಟು ಸುಗಮವಾಗಿದೆ.

ಅತ್ತ ದರಿ, ಇತ್ತ ಪುಲಿ:

ಕೆಲದಿನಗಳಿಂದ ಬಾಲ ಬಿಚ್ಚಿದ್ದ ಎಂಇಎಸ್ ಮುಖಂಡರ ಫಜೀತಿ ಪ್ರಸ್ತುತ ಹೇಳತೀರದಾಗಿದೆ. ಅತ್ತ ಮಹಾಮೇಳಾವ ನಡೆಸುವಂತೆಯೂ ಇಲ್ಲ. ಕೈ ಬಿಡುವಂತೆಯೂ ಇಲ್ಲ. ಒಂದು ವೇಳೆ ನಡೆಸಿದರೆ ಶಾ ಮಧ್ಯಸ್ಥಿಕೆ ಕೋರಿ ತಾನೇ ಮುಂದಾಗಿ ಹೋಗಿ ಅವರ ಸಲಹೆಗಳನ್ನು ತಾನೇ ಮುರಿದಂತಾಗುತ್ತದೆ. ಜೊತೆಗೆ ಕರ್ನಾಟಕ ಸರಕಾರದ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ನಡೆಸದಿದ್ದರೆ ನಗೆಪಾಟಲಿಗೆ ಈಡಾಗುತ್ತದೆ.

ಶಾ ಸಲಹೆಗಳು ಮಹಾರಾಷ್ಟ್ರದ ಪಾಲಿಗೆ ಹೇಗಾಗಿವೆ ಎಂದರೆ ಕಳುವು ಮಾಡಲು ಹೋದವನಿಗೆ ಕೀಲಿ ಕೊಟ್ಟು ಕಾಯಲು ಹೇಳಿದಂತಾಗಿವೆ. ಗಡಿಯಲ್ಲಿ ಗಲಾಟೆಗೆ ಪ್ರಚೋದಿಸುತ್ತಿದ್ದ ಮಹಾ ಸರಕಾರ ಈಗ ತಮ್ಮದೇ ಪಕ್ಷದ ವರಿಷ್ಠರಿಂದ ಶಾಂತಿ ಕಾಪಾಡುವ ಹೊಣೆ ಹೊತ್ತು ಬಂದಿದೆ. ಇದರಿಂದ ಎಂಇಎಸ್ ಗೆ ಈಗ ಮಹಾರಾಷ್ಟ್ರ ಬಹಿರಂಗವಾಗಿ ಬೆಂಬಲಕ್ಕೆ ನಿಲ್ಲುವ ಖಾತರಿ ಇಲ್ಲ. ಹಾಗಾಗಿ ಎಂಇಎಸ್ ನಾಯಕರು ಅಕ್ಷರಶಃ ಚಿಂತೆಗೀಡಾಗಿದ್ದಾರೆ. ಏನೋ ಮಾಡಲು ಹೋಗಿ ಏನೋ ಮಾಡಿದ ಕೆಟ್ಟ ಅನುಭವದಿಂದ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕನ್ನಡ ಸಂಘಟನೆಗಳಿಂದ ಸಲಹೆ:

ಏತನ್ಮಧ್ಯೆ ಕರ್ನಾಟಕ ಸರಕಾರ ಶಾ ಸಭೆಯ ಸಲಹೆ ಸೂಚನೆಗಳನ್ನು ದಿಟ್ಟತನದಿಂದ ಪಾಲಿಸಿ ರಾಜ್ಯದ್ರೋಹಿತನಕ್ಕೆ ಕಡಿವಾಣ ಹಾಕಬೇಕೆಂಬ ಸಲಹೆಗಳು ಕನ್ನಡ ಪರ ಸಂಘಟನೆಗಳು, ಮುಖಂಡರಿಂದ ಬರತೊಡಗಿವೆ.

ಸರ್ವೋನ್ನತ ನ್ಯಾಯಾಲಯದ ಮುಂದಿರುವ ಗಡಿವಿವಾದ ಪ್ರಕರಣದ ತೀರ್ಪು ಪ್ರಕಟವಾಗುವವರೆಗೂ ಉಭಯ ರಾಜ್ಯಗಳು ಪರಸ್ಪರರ ಪ್ರದೇಶಗಳ ಸಂಬಂಧ ಬೇಡಿಕೆ ಇಡಬಾರದು ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಈ ನಿರ್ಣಯದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ  ಬೆಳಗಾವಿಯಲ್ಲಿ ನಡೆಸುವ ಯಾವುದೇ ಕರ್ನಾಟಕ ವಿರೋಧಿ ಚಟುವಟಿಕೆಗಳನ್ನು ಮಹಾರಾಷ್ಟ್ರ ಸರಕಾರ ಅಥವಾ ಅಲ್ಲಿಯ ನಾಯಕರು ಬೆಂಬಲಿಸಬಾರದು. ಅಲ್ಲದೆ ಸಮಿತಿ ನಡೆಸುವ ಮಹಾ ಮೇಳಾವಾದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಂದಿರುವ ಮಹಾರಾಷ್ಟ್ರದ ದಾವೆಯಲ್ಲಿ ಕೇಂದ್ರ ಸರಕಾರ ತಟಸ್ಥ
ನಿಲುವನ್ನು ತಳೆಯಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರು ಕೇಂದ್ರವನ್ನು ನಿನ್ನೆಯ ಸಭೆಯಲ್ಲಿ ಒತ್ತಾಯಿಸಿದ್ದು ಇದಕ್ಕೆ ಆಮಿತ್ ಶಹಾ ಅವರು ಒಪ್ಪಿದ್ದಾರೆ ಎಂದು ಶಿಂಧೆ ಹಾಗೂ ಫಡ್ನವೀಸ್ ನಿನ್ನೆ ಶಹಾ ಸಭೆಯ ನಂತರ ಮಾಧ್ಯಮಕ್ಕೆ ವಿವರಿಸಿದ್ದಾರೆ. ಇದು ಕರ್ನಾಟಕದ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ. ಮಹಾರಾಷ್ಟ್ರ 2004 ರಲ್ಲಿ
ದಾಖಲಿಸಿದ ಮೂಲ ದಾವೆಯಲ್ಲಿ ಕೇಂದ್ರವು ಮೊದಲ ಪ್ರತಿವಾದಿಯಾಗಿದ್ದು
ಕರ್ನಾಟಕ ಎರಡನೇ ಪ್ರತಿವಾದಿಯಾಗಿದೆ. ಸಂವಿಧಾನದ ಮೂರನೇ ವಿಧಿಯ
ಪ್ರಕಾರ ರಾಜ್ಯದ ಗಡಿಗಳನ್ನು ನಿರ್ಧರಿಸುವ, ಗಡಿಗಳನ್ನು ವಿಸ್ತರಿಸುವ ಅಥವಾ ಒಂದು ರಾಜ್ಯದ ಪ್ರದೇಶಗಳನ್ನು ಮತ್ತೊಂದು ರಾಜ್ಯಗಳಿಗೆ ವರ್ಗಾಯಿಸುವ
ಪರಮಾಧಿಕಾರ ಸಂಸತ್ತಿಗೆ ಮಾತ್ರ ಇದೆ. 1956 ರ ರಾಜ್ಯ ಪುನರ್ ವಿಂಗಡನೆ
ಕಾಯ್ದೆ ರಚಿಸಿದ್ದೂ ಕೇಂದ್ರವೇ. 1966 ರಲ್ಲಿ ಮೆಹರ್ ಚಂದ ಮಹಾಜನ ಆಯೋಗವನ್ನು
ನೇಮಿಸಿದ್ದೂ ಕೇಂದ್ರವೇ. ಈ ವಾಸ್ತವವನ್ನು ಕೇಂದ್ರ ಸರಕಾರ ಸುಪ್ರೀಂ ಮುಂದೆ ಮೊದಲ
ಪ್ರತಿವಾದಿಯಾಗಿ ಸ್ಪಷ್ಟ ನಿಲುವನ್ನು ತಳೆಯಲೇಬೇಕಾಗುತ್ತದೆ. ಮಹಾರಾಷ್ಟ್ರದ
ಬೇಡಿಕೆಯಂತೆ ತಟಸ್ಥ ನಿಲುವು ತಳೆಯುವದು ಅಸಾಧ್ಯದ ಮಾತು.ಇದನ್ನು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರಕಾರಕ್ಕೆ ಸ್ಪಷ್ಟ
ಶಬ್ಧಗಳಲ್ಲಿ ತಿಳಿಸಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಉಭಯ ರಾಜ್ಯಗಳ ತಲಾ ಮೂವರು ಸಚಿವರುಗಳುಳ್ಳ ಆರು ಸಚಿವರ ಸಮಿತಿ ರಚಿಸಲು ನಿನ್ನೆಯ ಸಭೆಯಲ್ಲಿ ತೀರ್ಮಾನಿಸಿದ್ದು ಒಳ್ಳೆಯ ಹೆಜ್ಜೆ. ಕರ್ನಾಟಕದಲ್ಲಿ 2018 ರಿಂದಲೂ ಗಡಿ ಉಸ್ತುವಾರಿ ಸಚಿವರೇ ಇರಲಿಲ್ಲ. ಈ ಬಗ್ಗೆ ಅನೇಕ ಬಾರಿ ಆಗ್ರಹಿಸಿದರೂ
ಗಡಿ ಉಸ್ತುವಾರಿ ಸಚಿವರ ನೇಮಕ ಆಗಿರಲಿಲ್ಲ. ಈಗಲಾದರೂ ಬೊಮ್ಮಾಯಿ
ಸರಕಾರ ಆಮಿತ್ ಶಹಾ ಅವರ ಸೂಚನೆಯ ಮೇರೆಗೆ ಈ ದಿಸೆಯತ್ತ ನೇಮಕ ಮಾಡಲಿದೆ.

ಕಾನೂನು ಮತ್ತು ಸುವ್ಯವಸ್ಥೆ  ಕಾಪಾಡಲು ಹಿರಿಯ ಐಪಿಎಸ್ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವ ಬದಲಾಗಿ ಉಭಯ ರಾಜ್ಯಗಳ ತಲಾ ಒಬ್ಬರು ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಇಂಥ ಸಮಿತಿ ರಚನೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಳಗಾವಿಗೆ ಭೆಟ್ಟಿ ನೀಡಲಿದ್ದ ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರ ಪ್ರವೆಶವನ್ನು ನಿರ್ಬಂಧಿಸಿದ್ದನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳು ನಿನ್ನೆಯ ಸಭೆಯಲ್ಲಿ ಆಕ್ಷೇಪಿಸಿದ್ದಾರೆ. ಇದಕ್ಕೆ ಬೊಮ್ಮಾಯಿ ಅವರು ತಕ್ಕ ಉತ್ತರ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಸಚಿವರು ಬೆಳಗಾವಿಗೆ ಬರುವುದಕ್ಕೆ ತಡೆ ಒಡ್ಡುವದಿಲ್ಲವೆಂದೂ ಬೊಮ್ಮಾಯಿ
ಹೇಳಿದ್ದಾರೆ.

ಬೆಳಗಾವಿಯಲ್ಲಿ ತ್ವೇಷಮಯ ವಾತಾವರಣವಿದ್ದಾಗ ಮಾತ್ರ ಮಹಾರಾಷ್ಟ್ರ ಸಚಿವರಿಗೆ ನಿರ್ಬಂಧ ವಿಧಿಸಲಾಗಿದೆ.
ಇನ್ನು ಮುಂದೆ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಭಾಗದಲ್ಲಿ  ಎಂಇಎಸ್ ಅಥವಾ ಶಿವಸೇನಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕರ್ನಾಟಕದ ವಿರುದ್ಧ ಪ್ರಚೋದನಕಾರಿ
ಭಾಷಣ ಮಾಡುವದಾದರೆ ಕರ್ನಾಟಕ ಸರಕಾರ ಆಕ್ಷೇಪಿಸಬೇಕಲ್ಲದೇ ಕೇಂದ್ರ
ಗೃಹಸಚಿವರ ಗಮನಕ್ಕೆ ತರಬೇಕು.

ಗಡಿವಿವಾದವು ಸಂವಿಧಾನದ ನಿಯಮಗಳ ಪ್ರಕಾರವೇ ಬಗೆಹರಿಯಬೇಕೇ ಹೊರತು ಬೀದಿಗಳಲ್ಲಿ ಅಲ್ಲ ಎಂಬ ಆಮಿತ್ ಶಹಾ ಅವರ ಹೇಳಿಕೆ ಅತ್ಯಂತ ಸಮಂಜಸವಾಗಿದೆ. ಸರ್ವೋನ್ನತ ನ್ಯಾಯಾಲಯದಲ್ಲೂ ಇದೇ ನಿಲುವನ್ನುಕೇಂದ್ರವು ಸ್ಪಷ್ಟವಾಗಿ,ಲಿಖಿತ ರೂಪದಲ್ಲಿ ಹೇಳಬೇಕು.1956 ರ ರಾಜ್ಯ ಪುನರ್ ವಿಂಗಡನಾ ಕಾನೂನನ್ನು
50 ವರ್ಷಗಳ ನಂತರ ಮಹಾರಾಷ್ಟ್ರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಕಾಲಬಾಹ್ಯ ಹಾಗೂ ಅಸಂಬದ್ಧವಾಗಿದೆ ಎಂದೂ ವಾದಿಸಬೇಕು ಎಂದು ಅಶೋಕ ಚಂದರಗಿ ಸಲಹೆ ನೀಡಿದ್ದಾರೆ.

*ಜನಾರ್ಧನ ರೆಡ್ಡಿ ಪರ ಮಾಜಿ ಸಿಎಂ ಯಡಿಯೂರಪ್ಪ ಬ್ಯಾಟಿಂಗ್*

https://pragati.taskdun.com/janardhana-reddyb-s-yedyurappareactionkoppala/

*ಕಾಲೇಜು ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ಎಂಜಿನಿಯರಿಂಗ್ ವಿದ್ಯಾರ್ಥಿ*

https://pragati.taskdun.com/engineer-studentsuicideamp-collagebangalore/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button