
ಪ್ರಗತಿವಾಹಿನಿ ಸುದ್ದಿ : ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡದ ಭಾಗವೊಂದು ಕುಸಿದು ಬಿದ್ದಿದ್ದು ಶಿಥಿಲಾವಶೇಷಗಳ ಅಡಿಯಲ್ಲಿ ಸಿಲುಕಿದ್ದ 15 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಗುಜರಾತ್‌ನ ಗಾಂಧಿನಗರದ ಕುಡಾಸನ್ ಪ್ರದೇಶದಲ್ಲಿ ಬುಧವಾರ ರಾತ್ರಿ ಸುಮಾರು 9:30 ರ ಸುಮಾರಿಗೆ ‘ಬಾಸ್ಕಿ ದಿ ಎಂಪೈರ್ ಹೆಸರಿನ ಈ ಕಟ್ಟಡ ಕಾಮಗಾರಿ ನಡೆಯುತ್ತಿದ್ದಾಗ ಮೆಟಲ್ ಸ್ಲಾಬ್ ಹಾಗೂ ಸೆಂಟ್ರಿಂಗ್ ಆಧಾರ ಸ್ತಂಭಗಳು ಹಠಾತ್ತನೆ ಕುಸಿದುಬಿದ್ದವು.
ಘಟನೆ ನಡೆದ ತಕ್ಷಣ ಸ್ಥಳೀಯ ಅಗ್ನಿಶಾಮಕ ದಳ, ಪೋಲಿಸ್ ಸಿಬ್ಬಂದಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ದೌಡಾಯಿಸಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಕ್ರೇನ್‌ಗಳು, ಪ್ಲಾಸ್ಮಾ ಹಾಗೂ ಗ್ಯಾಸ್ ಕಟರ್‌ಗಳನ್ನು ಬಳಸಿ ಮೆಟಲ್ ಸ್ಲಾಬ್‌ಗಳನ್ನು ತೆರವುಗೊಳಿಸಿ, ಅಡಿಯಲ್ಲಿದ್ದ ಕಾರ್ಮಿಕರನ್ನು ಹೊರತೆಗೆಯಲಾಯಿತು.
ಘಟನಾ ಸ್ಥಳಕ್ಕೆ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ, ಆರೋಗ್ಯ ಸಚಿವ ಪ್ರಫುಲ್ ಪನ್ನೇರಿಯಾ ಮತ್ತು ಗಾಂಧಿನಗರ ಶಾಸಕಿ ರೀಟಾಬೆನ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು, ಶಿಥಿಲಾವಶೇಷಗಳ ಅಡಿಯಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು ಯಾರಿಗೂ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಕ್ಷಿಸಲ್ಪಟ್ಟ ಒಟ್ಟು 15 ಕಾರ್ಮಿಕರಲ್ಲಿ 12 ಜನರನ್ನು ಚಿಕಿತ್ಸೆಗಾಗಿ ಗಾಂಧಿನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ಸ್ಥಳದಲ್ಲಿ ಶಿಥಿಲಾವಶೇಷ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು ಕಟ್ಟಡ ಕುಸಿತಕ್ಕೆ ನಿರ್ಮಾಣ ಹಂತದಲ್ಲಿ ವಹಿಸಬೇಕಾಗಿದ್ದ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಾರಣವೇ ಎಂಬ ಬಗ್ಗೆ ಮಹಾನಗರ ಪಾಲಿಕೆಯ ತಾಂತ್ರಿಕ ತಂಡ ಮತ್ತು ಪೋಲಿಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.



