*ಸತೀಶ ಜಾರಕಿಹೊಳಿ ವಿರುದ್ಧದ ಇಡಿ ದಾಳಿ ಖಂಡಿಸಿ ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ*

ಇಡಿ ದಾಳಿ ಖಂಡಿಸಿ ಪ್ರತಿಭಟನೆ: ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ’ ಎಂದು ಘೋಷಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿ ಖಂಡಿಸಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಕ್ರಮವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, “ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ” ಎಂದು ಜೈಘೋಷಣೆ ಕೂಗಿದರು.
ಕಾಂಗ್ರೆಸ್ ಮುಖಂಡರಾದ ರಮೇಶ ಸೋಂಟಕ್ಕಿ ಮಾತನಾಡಿ, “ಪ್ರಭಾವಿ ನಾಯಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಸಚಿವರನ್ನು ಇಡಿ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಜನರಿಗೆ ಉದ್ಯೋಗ ಕಲ್ಪಿಸಿ, ಜನಪರ ಕಾರ್ಯಗಳಲ್ಲಿ ತೊಡಗಿರುವ ನಾಯಕರ ವಿರುದ್ಧ ರಾಜಕೀಯ ಉದ್ದೇಶದಿಂದ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸಚಿವ ಸತೀಶ ಜಾರಕಿಹೊಳಿ ಅವರ ವಿರುದ್ಧ ನಡೆದಿರುವ ಇಡಿ ದಾಳಿಯನ್ನು ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದರು.
ಜನಪರ ಕೆಲಸ ಮಾಡಿರುವ ನಾಯಕರ ವಿರುದ್ಧ ಬಿಜೆಪಿ ಕುತಂತ್ರ ರೂಪಿಸಿ ಇಡಿ ದಾಳಿ ನಡೆಸಿದೆ ಎಂದು ಆರೋಪಿಸಿದರು. ರಾಜಕೀಯ ದ್ವೇಷದಿಂದ ನಡೆಯುತ್ತಿರುವ ಇಂತಹ ಕ್ರಮಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಎದುರಿಸಲಿದ್ದಾರೆ ಎಂದರು.
ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಗರ ದಿವಟಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು. ಜನಪರ ನಾಯಕರಿಗೆ ಕಿರುಕುಳ ನೀಡುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಆಯಿಶಾ ಸನದಿ, ಅರ್ಚನಾ ಮೇಸ್ತ್ರಿ, ಆರತಿ ಗವಿ, ಸಲೀಂ ಅಹ್ಮದ್, ದಸರಾ ಶಿಗ್ಗಾವಿ, ಜಗ್ಗು ದರನಾಯಕ, ಸಿನಾ ಪಿರಜಾದೆ, ರೋಹಿಣಿ ಬಾಬ ಶೇಟ, ರೇಣುಕಾ ಹೊಸೂರ, ವಕೀಲ ಜಗದೀಶ್ ಸಾವಂತ, ಪರಶುರಾಮ ವಗ್ಗನವರ ಹಾಗೂ ಜಾಹೀದ್ ವಂಟಮೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



