Kannada NewsKarnataka NewsLatestPolitics

*ದೂರದೃಷ್ಟಿಯುಳ್ಳ ಬಜೆಟ್: ಕೇಂದ್ರ ಬಜೆಟ್ ಗೆ ವಿಪಕ್ಷ ನಾಯಕ ಆರ್.ಆಶೋಕ್ ಮೆಚ್ಚುಗೆ*

ಸಿದ್ದರಾಮಯ್ಯ ಬಜೆಟ್ ಬಗ್ಗೆ ಈಗಲೇ ವ್ಯಂಗ್ಯವಾಡಿದ ವಿಪಕ್ಷ ನಾಯಕ

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಬಡವರು, ಯುವಕರು, ಮಹಿಳೆಯರು ಹಾಗೂ ರೈತರು ಈ ನಾಲ್ಕು ವರ್ಗಗಳು ದೇಶದ ಆಧಾರ ಸ್ಥಂಭಗಳು ಎಂಬ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ. ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಈ ಬಜೆಟ್ ವೇದಿಕೆ ಕಲ್ಪಿಸಲಿದೆ.

ಮಧ್ಯಂತರ ಬಜೆಟ್ ಮಂಡನೆ ನಂತರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಉತ್ತಮವಾಗಿದೆ. ಭಾರತದ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಇದು ಸಹಕಾರಿಯಾಗಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಹಾಗೂ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಪೂರಕ ಬಜೆಟ್ ಮಂಡನೆಯಾಗಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಬಜೆಟ್ ಜನಪ್ರಿಯ ಯೋಜನೆಗಳು, ಕೊಡುಗೆಗಳಿಂದ ಕೂಡಿರುತ್ತದೆ ಎಂಬ ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ ಈ ಬಜೆಟ್ ಅಂತಹ ಯಾವುದೇ ಘೋಷಣೆಗಳನ್ನು ಮಾಡಿಲ್ಲ.

“ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬಜೆಟ್ ಅನ್ನು ಮಂಡಿಸಿಲ್ಲ. ಸರ್ವರ ಏಳ್ಗೆಗೆ, ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್ ಇದಾಗಿದೆ. ಏಳು ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. ಒಂದು ಕೋಟಿ ಮನೆಗಳಲ್ಲಿ ಸೌರ ಶಕ್ತಿ ಬಳಕೆಗೆ ಒತ್ತು ನೀಡಲಾಗಿದ್ದು, ಆ ಕುಟುಂಬಗಳಿಗೆ ಶಾಶ್ವತವಾಗಿ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ದೊರೆಯಲಿದೆ. ಇದು ಮೋದಿ ಅವರ ಗ್ಯಾರೆಂಟಿ ಗೆ ಒಳ್ಳೆ ಉದಾಹರಣೆ. ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸಲಾಗಿದೆ. ಹೆಣ್ಣು ಮಕ್ಕಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 9-15 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ವಸತಿ ನೀಡಲು ಮುಂದಾಗಲಾಗಿದೆ, ” ಆರ್.ಅಶೋಕ್ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿದರು.

ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು ನಾಲ್ಕು ವಿಶೇಷ ರೈಲ್ವೆ ಕಾರಿಡಾರ್, ಏರ್ಪೋರ್ಟ್ ಆಧುನೀಕರಣ, ಸಣ್ಣ ನಗರಗಳಿಗೆ ಮೆಟ್ರೋ ಸೇವೆ, 40,000 ರೈಲು ಬೋಗಿಗಳ ಆಧುನೀಕರಣ, ಹೊಸ ವಂದೇ ಭಾರತ್, ನಮೋ ಭಾರತ್ ರೈಲುಗಳು ಸೇರಿದಂತೆ ಅನೇಕ ದೂರದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಪಂಚದ ಗಮನ ಸೆಳೆಯಲು ಒತ್ತು ನೀಡಲಾಗಿದೆ. ಚುನಾವಣೆಗಾಗಿ ಗಿಮಿಕ್ ಪಾಲಿಟಿಕ್ಸ್ ಮಾಡದೆ, ಮುಂದಿನ ಪೀಳಿಗೆಗೆ ಉಪಯುಕ್ತ ಆಗುವಂತ ಬಜೆಟ್ ಮಂಡನೆಯಾಗಿದೆ ಎಂದು ಹೇಳಿದರು.

ಮುಂದೆ ಸಿಎಂ ಸಿದ್ದರಾಮಯ್ಯ ಬಜೆಟ್ ಬರುತ್ತದೆ. ಗಂಡನದ್ದು ಕಿತ್ತು, ಹೆಂಡತಿಗೆ ಕೊಡ್ತಾರೆ. ಬಿಯರ್ ಬೆಲೆ 15 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಗಂಡನಿಗೆ ಟ್ಯಾಕ್ಸ್ ಹಾಕಿದ್ದಾರೆ. ಅದನ್ನು ಕಿತ್ತು ಹೆಂಡತಿಗೆ ಕೊಡುತ್ತಿದ್ದಾರೆ. ಇದೇ ಇವರ ಗ್ಯಾರಂಟಿ ಬಜೆಟ್ ಆಗಿರಲಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

Related Articles

Back to top button