ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ವಿದೇಶಿ ಸೇಬುಗಳ ಆಮದಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ದೇಶೀಯವಾಗಿ ಸೇಬು ಬೆಳೆಯುವ ಬೆಳೆಗಾರರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ.
ಸೇಬುಗಳ ಆಮದು ನೀತಿಯಲ್ಲಿ ತಿದ್ದುಪಡಿ ತರುವ ಮೂಲಕ ಅಧಿಸೂಚನೆ ಹೊರಡಿಸಿರುವ ವಿದೇಶಿ ವ್ಯಾಪಾರ ನಿರ್ದೇಶನಾಲಯ ಉತ್ಪಾದನಾ ವೆಚ್ಚ, ಬೆಳೆ ವಿಮೆ, ಸರಕು ಸಾಗಣೆ ವೆಚ್ಚ ಸೇರಿ ಒಂದು ಕಿಲೋ ಸೇಬಿನ ಬೆಲೆ ಕೆಜಿಗೆ 50 ರೂ.ಗಿಂತ ಕಡಿಮೆ ಇದ್ದರೆ ಅದನ್ನು ಆಮದು ಮಾಡಿಕೊಳ್ಳುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಇದರಿಂದ ದೇಶೀಯ ಮಾರುಕಟ್ಟೆಗೆ ಆಗುತ್ತಿರುವ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಆಮದು ಸೇಬುಗಳಿಂದ ತೀವ್ರ ತೆರನಾದ ನಷ್ಟ ಅನುಭವಿಸುತ್ತಿದ್ದು ವಿದೇಶಿ ಸೇಬು ಆಮದನ್ನು ನಿಷೇಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ರೈತರು ಸರಕಾರವನ್ನು ಒತ್ತಾಯಿಸಿದ್ದರು.
ಉತ್ತರ ಮತ್ತು ಈಶಾನ್ಯ ಭಾರತವು ಸೇಬು ತೋಟಗಳನ್ನು ಬೆಳೆಯಲು ಸೂಕ್ತವಾದ ಹವಾಮಾನವನ್ನು ಹೊಂದಿದೆ. ಅಲ್ಲಿ ವ್ಯಾಪಕವಾಗಿ ಸೇಬು ಬೆಳೆಯಲಾಗುತ್ತಿದ್ದರೂ ಅನೇಕ ಬಾರಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಉತ್ಪಾದನೆಯ ಮೇಲೆ ಪರಿಣಾಮ ಬೀರುವುದರಿಂದ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ರಾಜ್ಯಗಳಲ್ಲಿದೆ. ಪ್ರತಿ ವರ್ಷ ಸರಾಸರಿ ಒಂದು ಸಾವಿರ ಮೆಟ್ರಿಕ್ ಟನ್ ಸೇಬುಗಳನ್ನು ಬೆಳೆಯಲಾಗುತ್ತದೆ.
ಇದರಿಂದಾಗಿ ದಕ್ಷಿಣ ಆಫ್ರಿಕಾ, ಪೋಲೆಂಡ್, ಇರಾನ್, ಬ್ರೆಜಿಲ್, ಅಮೇರಿಕಾ, ಚಿಲಿ, ಇಟಲಿ, ಟರ್ಕಿ, ಯುಎಇ, ಅಫ್ಘಾನಿಸ್ತಾನ, ಫ್ರಾನ್ಸ್, ಬೆಲ್ಜಿಯಂ ಮತ್ತು ನ್ಯೂಜಿಲೆಂಡ್‌ನಿಂದ ಪ್ರತಿವರ್ಷ ಭಾರೀ ಪ್ರಮಾಣದಲ್ಲಿ ಸೇಬುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತವು ಈವರೆಗೆ 296 ಮಿಲಿಯನ್ ಡಾಲರ್ ಮೌಲ್ಯದ ಸೇಬುಗಳನ್ನು ಆಮದು ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ಮತ್ತು ಪೋಲೆಂಡ್‌ನಿಂದ ಆಮದಿನಲ್ಲಿ ಅಧಿಕ ಬೆಳವಣಿಗೆ ಕಂಡುಬಂದಿದೆ.
ಏತನ್ಮಧ್ಯೆ ನೆರೆಯ ರಾಷ್ಟ್ರ ಭೂತಾನ್ ಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಭೂತಾನ್ ಸೇಬುಗಳ ಆಮದಿನ ಮೇಲೆ ಯಾವುದೇ ನಿಷೇಧವನ್ನು ಅನ್ವಯಿಸುವುದಿಲ್ಲ. ಅದರ ಸಿಎಫ್ಐ ಬೆಲೆ ಪ್ರತಿ ಕೆಜಿಗೆ 50ರೂ. ಗಿಂತ ಕಡಿಮೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ