Kannada NewsKarnataka NewsLatest

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಸ್ಥಿತ್ವಕ್ಕೆ

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಪ್ರಥಮ ಅಧ್ಯಕ್ಷರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಲಿಂಗಾಯತ ಮಠಾಧಿಪತಿಗಳುಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ  ಇದೇ ದಿನಾಂಕ ೨೨ ಮತ್ತು ೨೩ ರಂದು ಅನೇಕ ಪ್ರಸ್ತುತ ವಿಷಯಗಳನ್ನು ಕುರಿತು ಚಿಂತನ -ಮಂಥನ ನಡೆಸಿ, ’ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ ಎಂಬ ನೂತನ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದಾರೆ.

ಬಸವನಿಷ್ಠ ಲಿಂಗಾಯತ ಮಠಾಧಿಪತಿಗಳು ಸಮಾಜದ ಎಲ್ಲ ಸಮಸ್ಯೆಗಳಿಗೆ ಈವರೆಗೆ ಸ್ಪಂದಿಸುತ್ತ ಬಂದಿದ್ದಾರೆ. ಅವರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಸೇವಾಕಾರ್ಯಗಳಿಗೆ ಇನ್ನಷ್ಟು ಒತ್ತು ನೀಡುವ ದೃಷ್ಟಿಯಿಂದ ಪ್ರಸ್ತುತ ವಿಷಯಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಡಾ. ಎಸ್. ಎಂ. ಜಾಮದಾರ, ಡಾ. ವೀರಣ್ಣ ರಾಜೂರ, ಡಾ. ಜೆ. ಎಸ್. ಪಾಟೀಲ ಹಾಗು ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದವರು ಬಸವಾದಿ ಶರಣರ ತತ್ತ್ವಾದರ್ಶಗಳು ಹಾಗು ಅವುಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವ ಬಗೆಯನ್ನು ವಿವರಿಸುತ್ತ ಲಿಂಗಾಯತ ಮಠಾಧಿಪತಿಗಳು ಈ ದಿಸೆಯಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಲಿಂಗಾಯತ ಧರ್ಮದಲ್ಲಿ ನೂರಾರು ಒಳಪಂಗಡಗಳಿದ್ದು, ಅವುಗಳಲ್ಲಿ ಸಾಮರಸ್ಯವನ್ನು ಸಾಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಎಲ್ಲರೂ ಒಟ್ಟಾಗಿ ಹೋರಾಡುವ ಮೂಲಕ ತಂದುಕೊಂಡರೆ ಧರ್ಮದ ಅಸ್ಮಿತೆ ಹೆಚ್ಚುತ್ತದೆ. ಜಾಗತಿಕ ಮಟ್ಟದಲ್ಲಿ ಬಸವಣ್ಣನವರು ಸ್ಥಾಪಿಸಿದ ಈ ಧರ್ಮವನ್ನು ಗುರುತಿಸುವಂತಾಗುತ್ತದೆ. ಇದೂ ಅಲ್ಲದೆ ಅಲ್ಪಸಂಖ್ಯಾತ ಧರ್ಮವೆನಿಸಿಕೊಂಡರೆ ಲಿಂಗಾಯತರಿಗೆ ಶಿಕ್ಷಣ-ಉದ್ಯೋಗಗಳಲ್ಲಿ ಈಗಿರುವ ಮೀಸಲಾತಿಯ ಜೊತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳು ದೊರೆಯುತ್ತವೆ. ಇದರಿಂದ ಲಿಂಗಾಯತ ಧರ್ಮೀಯರ ಏಕತೆ ಹಾಗು ಸಮಗ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಅಭಿವೃದ್ಧಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರಧರ್ಮದ ಹೋರಾಟಕ್ಕೆ ಮತ್ತಷ್ಟು ಒತ್ತುಕೊಡುವ ದೃಷ್ಟಿಯಿಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದು ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸುವುದಲ್ಲದೆ ಒಕ್ಕೂಟದ ಕಾರ್ಯ ಮತ್ತು ಧ್ಯೇಯೋದ್ದೇಶಗಳನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.

ಈ ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಅವಿರೋಧವಾಗಿ ಆಯ್ಕೆಯಾಗಿರುವುದನ್ನೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರುಗಳು, ಆನಂದಪುರಂನ ಜಗದ್ಗುರು ಮಲ್ಲಿಕಾರ್ಜುನ ಸ್ವಾಮಿಗಳು, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಮುಂತಾದ ನೂರಕ್ಕೂ ಅಧಿಕ ಶ್ರೀಗಳು ಭಾಗವಹಿಸಿದ್ದರು. ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ನೇತೃತ್ವ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಶೇಗುಣಸಿಯ ಮಹಾಂತದೇವರು ಕೊನೆಯಲ್ಲಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button