ಜಯಶ್ರೀ ಜೆ. ಅಬ್ಬಿಗೇರಿ
ಬದುಕಿನ ಪ್ರತಿಯೊಂದು ಘಟನೆಯೂ ನಮ್ಮ ಹಣೆಬರಹದಂತೆ ನಡೆಯುತ್ತದೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ವಿಧಿ ಲಿಖಿತ. ಜೀವನ ಅದೃಷ್ಟದ ಮೇಲೆ ನಿರ್ಧರಿತವಾಗುತ್ತದೆಂದು ವಿಧಿಯ ಕೈಯಲ್ಲಿ ಬದುಕನ್ನು ಕೊಟ್ಟು ಕುಳಿತರೆ ಆಗುವುದಾದರೂ ಏನು? ಬದುಕು ನಮ್ಮ ಜೊತೆಗೆ ಪೈಪೋಟಿಗಿಳಿಯುತ್ತದೆ. ಶುದ್ಧ ವೈರಿಯಂತೆ ವರ್ತಿಸುತ್ತದೆ. ಪ್ರತಿ ಸಲವೂ ಅದೃಷ್ಟದ ರೇಖೆಯನ್ನು ಮುಂದಕ್ಕೆ ತಳ್ಳುತ್ತ ಹೋಗುತ್ತದೆ. ನಮ್ಮೊಳಗಿನ ಎಲ್ಲ ಶಕ್ತಿಯನ್ನು ಮರೆತು ಕುಳಿತರೆ ಕಷ್ಟಗಳ ಮೈಲಿಗಲ್ಲುಗಳು ನಾವಿದ್ದಲ್ಲಿಗೆ ಬರುತ್ತವೆ. ಎದೆ ಸೆಟೆಸಿ ನಿಂತು ನಮ್ಮ ಬದುಕಿನ ಕದ ತಟ್ಟುತ್ತವೆ. ಅಂಥ ಸಂಕಷ್ಟಗಳ ಸರಮಾಲೆ ಅನಿರೀಕ್ಷಿತವಾಗಿ ಎದುರಾದಾಗ ಎದೆಗುಂದುವುದೊಂದೇ ಬಾಕಿ. ನಮಗಿರುವ ಅದಮ್ಯ ಶಕ್ತಿಯನ್ನು ನಾವೇ ಒಪ್ಪಿಕೊಳ್ಳದಿದ್ದರೆ, ಏನು ಅಂದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಅಡಗಿದ ಶಕ್ತಿಯನ್ನು ಗುರುತಿಸಿಕೊಳ್ಳದ ಸಮಸ್ಯೆ ಇತರರದಲ್ಲ. ಅದು ನಮ್ಮದೇ ಸಮಸ್ಯೆ. ಅಂದ ಹಾಗೆ ಸಮಸ್ಯೆ ಅಂದರೆ ದೊಡ್ಡ ಬೆಟ್ಟ ಗುಡ್ಡವೇನಲ್ಲ. ಅದು ಪ್ರತಿ ನಿತ್ಯ ನಡೆಯುವ ಸನ್ನಿವೇಶಗಳಿಗೆ ನಮ್ಮ ಪ್ರತಿಕ್ರಿಯೆ ಅಷ್ಟೇ.ಸುಲಭವಾಗಿ ಮಾಡುವಂಥವುಗಳನ್ನು ಮಾಡಲೇ ಬೇಕಾದ ಸಮಯದಲ್ಲಿ ಸುಲಭವಾಗಿ ಮಾಡದಿದ್ದರೆ ಅವೇ ಮುಂದೆ ಸಮಸ್ಯೆಗಳಾಗಿ ಜಟಿಲ ರೂಪ ತಳೆಯುತ್ತವೆ. ಜೀವ ತಿನ್ನುತ್ತವೆ. ಅದೃಷ್ಟದ ಹೆಸರಿನಲ್ಲಿ ದೌರ್ಬಲ್ಯಗಳ ಮೇಲೆ ಭಾರ ಹಾಕಿದಷ್ಟೂ ಕ್ಷೀಣರಾಗುತ್ತ ಹೋಗುತ್ತೇವೆ. ತಲೆಗೂದಲು ಬೆಳ್ಳಿ ಬಣ್ಣವನ್ನು ಪಡೆದರೂ ಹಣೆ ಸುಕ್ಕುಗಟ್ಟಿದರೂ ಅತಿ ಸರಳವಾಗಿರುವ ಕೆಲಸಗಳನ್ನೂ ಸ್ವತಃ ಮಾಡಲು ಅಸಮರ್ಥರಾಗುತ್ತೇವೆ. ಇದಕ್ಕೆ ಮೂಲ ಕಾರಣ ನಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳದೇ ಇರುವುದೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಯಾರೂ ಬರಲ್ಲ ಏನೂ ಮಾಡಲ್ಲ
ಅಕಸ್ಮಾತ್ತಾಗಿ ಯಾರೋ ಬಂದು ನಮ್ಮ ಬದುಕನ್ನು ಅಮುಲಾಗ್ರವಾಗಿ ಬದಲಿಸಿ ಬಿಡ್ರಾರೆ. ಕತ್ತಲಾದ ಬದುಕಿಗೆ ಬೆಳಕು ಚೆಲ್ಲುತ್ತಾರೆ. ಎಂದು ನಂಬಿ ಕಾಲ ಕಳೆಯುವವರನ್ನು ನೋಡಿದಾಗಲೆಲ್ಲ ನನಗೆ,
ಕತ್ತಿಯನು ಬಡಿಯುವೆಡೆ ಶಕ್ತಿ ತುಂಬಿರಬೇಕು
ಶತ್ರು ತಾ ಸುತ್ತ ಮುತ್ತ ಬರಿ ಕತ್ತಿಯಿಂ
ನೆತ್ತಿ ಹೊಯ್ಯೆಂದ ಸರ್ವಜ್ಞ
ಎನ್ನುವ ಸರ್ವಜ್ಞನ ವಚನವೊಂದು ನೆನಪಿಗೆ ಬರುವುದು. (ಕತ್ತಿಯನ್ನು ಹಿಡಿದು ರಣರಂಗದಲ್ಲಿ ಯುದ್ಧವನ್ನು ಮಾಡಬೇಕಾದರೆ ಮೈಯಲ್ಲಿರುವ ಶಕ್ತಿಯನ್ನು ಉಪಯೋಗಿಸಬೇಕು.) ’ತಮಗೆ ತಾವೇ ಸಹಾಯ ಮಾಡಿಕೊಳ್ಳದವರಿಗೆ ದೇವರೂ ಸಹಾಯ ಮಾಡುವುದಿಲ್ಲ’ ಎಂಬುದು ಅಪ್ಪಟ ಸತ್ಯದ ಮಾತು. ಯಾರೂ ಬರಲ್ಲ ಏನೂ ಮಾಡಲ್ಲ. ಇಲ್ಲಿ ನಮಗೆ ನಾವೇ ಎಲ್ಲ.ಹೆತ್ತವರು ಹಿರಿಯರು ಗುರುಗಳೆಲ್ಲ ಜೀವನದ ಮಾರ್ಗದರ್ಶಿಗಳು ಮಾತ್ರ.ಅವರು ನಮ್ಮ ಶಕ್ತಿಯನ್ನು ಉನ್ನತ ಮಟ್ಟದಲ್ಲಿ ಬಳಸಿಕೊಳ್ಳಲು ದಾರಿಯನ್ನು ತೋರುವರು. ತೋರಿದ ದಾರಿಯಲ್ಲಿ ನಡಯಬೇಕಿರುವುದು ನಾವೇ.ತೋರುವ ದಾರಿಯಲ್ಲಿ ಅವರೆಂದೂ ನಮ್ಮೊಂದಿಗೆ ಬರಲಾರರು.
ಇರಲಿ ಗುರುತರ ಗುರಿ
ಪ್ರತಿಯೊಬ್ಬರೂ ತನ್ನಿಷ್ಟದಂತೆ ನಡೆದುಕೊಳ್ಳಬೇಕೆಂಬುದು ಮನುಷ್ಯ ಸ್ವಭಾವದ ಸಂಗತಿ. ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕು ನಡೆಯದಿದ್ದರೆ ಅದೃಷ್ಟ ಕೈ ಕೊಡುತ್ತಿದೆ ಎಂದೇ ಅರ್ಥ.ಗಾಳಿ ಬೀಸಿದ ದಿಕ್ಕಿನೆಡೆ ಚಲಿಸುವ ಎಲೆಯಂತೆ ಬದುಕನ್ನು ಬದುಕುವುದು ಕೈಲಾಗದವರ ಕೈಯಲ್ಲಿದೆ. ಶ್ರೇಷ್ಠ ಬದುಕನ್ನು ಬದುಕಲು ಅಂತಃಶಕ್ತಿಯನ್ನು ತಿಳಿದುಕೊಳ್ಳಬೇಕು. ಉನ್ನತ ಉದ್ದೇಶಗಳನ್ನು ಹೊಂದಬೇಕು. ಗುರುತರ ಗುರಿಗೆ ಗುರಿ ಇಟ್ಟು ನಮ್ಮ ಪ್ರಕಾರ ಬದುಕಬೇಕೇ ವಿನಃ ಹಣೆ ಬರಹದ ಪ್ರಕಾರವಲ್ಲ. ಸವಾಲುಗಳನ್ನು ಸಲೀಸಾಗಿ ಸರಿದೂಗಿಸದಿದ್ದರೆ ಹಣೆ ಬರಹದ ಹೆಸರಿನಲ್ಲಿ ನಮ್ಮನ್ನು ನಾವೇ ನಮ್ಮ ಕೈಯಾರೆ ಕೊಂದು ಕೊಂಡಂತೆಯೇ ಸರಿ. ನಿಮ್ಮಲ್ಲಿರುವ ಹಣ ರೂಪ ವಿದ್ಯೆ ಅಧಿಕಾರ ಬಲ ಎಲ್ಲ ಅಂದರೆ ಎಲ್ಲವುಗಳಿಗಿಂತ ಮುಖ್ಯವಾದುದು ನಿನ್ನೊಳಗಿನ ಶಕ್ತಿ.ಸಕ್ತಿಯಿಂದ ಬದುಕು ಬಯಲಿಗೆ ಬರುತ್ತದೆ. ಇತರರ ಬದುಕಿಗೂ ಬೆಳಕಾಗುತ್ತದೆ. ಹಿರಿದಾಗಿ ಬೆಳೆದು ನಿಂತ ಮರದಂತೆ ನೆರಳು ನೀಡುತ್ತದೆ. ಆಸರೆಯಾಗಿ ನಿಲ್ಲುತ್ತದೆ.
ಬದಲಾಗಲಿ ಬದುಕು
ಗುಣ ಸ್ವಭಾವ ದೃಷಿಕೋನ ಮನೋಭಾವ ಬದಲಿಸಿಕೊಳ್ಳದ ಹೊರತು ಬದಲಾಗದು ಬದುಕು. ’ನಿಮ್ಮ ತಂದೆ ಹೊಡೆದ ತಂಬೂದಲ್ಲಿಯೇ ಮಂಪರು ತಂದುಕೊಂಡು ನೀವು ಮಲಗಿಕೊಂಡು ಇರಬೇಡಿರಿ. ಜಗತ್ತು ಮುಂದುವರೆದುಕೊಂಡು ಹೋಗುತ್ತಿದೆ. ನೀವು ಮುಂದುವರೆದುಕೊಂಡು ಹೋಗಿರಿ.’ಇದು ಇಟಲಿ ಏಕೀಕರಣಕ್ಕಾಗಿ ದುಡಿದ ರಾಜಕಾರಣಿ ಪತ್ರಕರ್ತ ಜೋಸೆಫ್ ಮ್ಯಾಝಿನಿ ಹೇಳಿದ ಮಾತು. ವೈಫಲ್ಯ ಅಪರಾಧವಲ್ಲ; ಅಲ್ಪ ಧ್ಯೇಯ ಅಪರಾಧ. ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಬಗ್ಗೆ ನಿಮ್ಮ ಶಕ್ತಿಯನ್ನುಕಡಿಮೆ ಲೆಕ್ಕ ಹಾಕದಿರಿ. ಇತರರನ್ನು ಬದಲಾಯಿಸುವ ನಿಮ್ಮ ಶಕ್ತಿಯ ಬಗ್ಗೆ ಅತಿಯಾಗಿ ಲೆಕ್ಕ ಮಾಡಬೇಡಿ ಎನ್ನುವ ಅನುಭವಿಕರ ಮಾತಿನ ದಾರಿಯಲ್ಲಿ ಹೆಜ್ಜೆ ಹಾಕಬೇಕು. ಅಂತರಾಷ್ಟ್ರೀಯ ಆಧ್ಯಾತ್ಮಿಕ ನಾಯಕ ರ‍್ಯುಹೊ ಒಕಾವಾ ಕಂಡುಕೊಂಡ ಮತ್ತು ಆಳವಾದ ತಿಳುವಳಿಕೆಯಾಗಿ ಅಭಿವೃದ್ಧಿ ಪಡಿಸಿದ ಸತ್ಯವೆಂದರೆ ಸಮಯದಷ್ಟು ಅಮೂಲ್ಯವಾದುದು ಯಾವುದೂ ಇಲ್ಲ.ಬೆಂಜಮಿನ್ ಫ್ರಾಂಕ್ಲಿನ್ ತನ್ನ ’ಬಡ ರಿಚರ್ಡ್‌ನ ಪಂಚಾಂಗ’ ಎಂಬ ಕೃತಿಯಲ್ಲಿ ’ಸಮಯವೇ ಹಣ’ಎಂಬ ಉಕ್ತಿ ಪ್ರಸಿದ್ಧವಾದುದು. ಸಮಯದ ಅತಿ ದೊಡ್ಡ ರಾಶಿಯೇ ಬದುಕು. ಸಮಯಕ್ಕೆ ಅವಿಧೆಯತೆ ತೋರಿದರೆ ತೆರಬೇಕಾದ ಬೆಲೆ ಅಂತಿಂಥದಲ್ಲ. ಹೀಗಾಗಿ ಈ ದಿನವೇ ಸುದಿನ
ಸತ್ತ ನಿನ್ನೆಯ ಅನುಭವ
ಹುಟ್ಟದಿಹ ನಾಳೆಯ ಭರವಸೆಯ ವಿಜಯ
ಇಂದಿನ ದಿನದ ಸಮಯವೇ ಆನಂದಮಯ.
ಬಂಗಾರದ ಭವಿಷ್ಯ
ಈ ದಿನದ ಭಾರಕ್ಕೆ ಕುಸಿದ ವ್ಯಕ್ತಿ ಯಾರೂ ಇಲ್ಲ. ಇಂದಿನ ದಿನದ ಭಾರಕ್ಕೆ ನಾಳೆಯ ಭಾರವನ್ನು ಸೇರಿಸಿಕೊಂಡಾಗ ಒಬ್ಬ ವ್ಯಕ್ತಿಯು ಭರಿಸಲಾಗದಷ್ಟು ಭಾರವಾಗುತ್ತದೆ ಬದುಕು ವರ್ತಮಾನದ ಹೊಟ್ಟೆಯೊಳಗೆ ಭವಿಷ್ಯ ಅಡಗಿದೆ.ಈ ದಿನದ ಕೆಲಸ ಕಾರ್ಯಯೋಜನೆಗಳೆಲ್ಲ ಬಂಗಾರದ ಭವಿಷ್ಯಕ್ಕಲ್ಲದೇ ಮತ್ತೇನು? ಸಮಯದ ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಬಳಸಿಕೊಳ್ಳಿ. ಸಮಯ ಇಲ್ಲಿ ಎಲ್ಲರಿಗೂ ಒಂದೇ. ದಿನಕ್ಕೆ ೨೪ ಗಂಟೆಗಳು ನಮ್ಮೆಲ್ಲರ ಖಾತೆಗೆ ಜಮೆಯಾಗುತ್ತವೆ. ಬಳಸಿಕೊಳ್ಳುವ ಬಗೆಯ ಮೇಲೆ ಬದುಕು ನಿಂತಿದೆ. ನನ್ನ ಕೈಯಲ್ಲೇನೂ ಇಲ್ಲ ಎಂಬ ಭ್ರಮೆ ತೆಗೆದೊಗೆದು ಶಕ್ತಿಯನ್ನೇ ನಂಬಬೇಕು. ಪ್ರೀತಿ ಸ್ನೇಹ ಬಂಧು ಬಳಗ ಆತ್ಮೀಯರ ಸಂಗದಲ್ಲಿ ಸುಖ ಜೀವನದ ಮಂತ್ರ ಅಡಗಿದೆ. ಬದುಕು ಒಂದು ಹೋರಾಟ. ಈ ಹೋರಾಟದಲ್ಲಿ ನಾವು ಮಾಡಬೇಕಾಗಿರುವುದನ್ನು ಪ್ರಾಮಾಣಿಕವಾಗಿ ಮಾಡಿ ಬಿಡೋಣ.ದೇಹದಲ್ಲಿ ಶಕ್ತಿ ಇರುವಾಗಲೇ ಸತ್ಕಾರ್ಯಗಳನ್ನು ಮಾಡಿಬಿಡೋಣ. ಕಷ್ಟ ಪಟ್ಟು ಬೆಟ್ಟ ಹತ್ತಿದರೆ ಮಾತ್ರ ಸುಂದರವಾದ ದೃಶ್ಯಗಳನ್ನು ನೋಡಬಹುದು. ಬದುಕೂ ಹಾಗೆ ಕಷ್ಟ ಪಟ್ಟರೆ ಮಾತ್ರ ಅಂದವನ್ನು ನೋಡೋಕಾಗುತ್ತೆ. ಆನಂದವನ್ನು ಅನುಭವಿಸಲಾಗುತ್ತೆ. ಹಾಗಾದರೆ ತಡವೇಕೆ? ಇಂದೇ ಬದುಕು ಬದಲಿಸುವತ್ತ ಚಿತ್ತ ಹರಿಸೋಣವಲ್ಲವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ