Latest

ಮೇಘಸ್ಫೋಟ; ಉತ್ತರ ಕನ್ನಡ ಜಿಲ್ಲೆಯಲ್ಲಿನ ಅನಾಹುತ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ; ಸ್ವರ್ಣವಲ್ಲಿ ಶ್ರೀ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಕಳಚೆಯ ಭೀಕರ ಭೂಕುಸಿತ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ನೈಸರ್ಗಿಕ ರಾಷ್ಟ್ರೀಯ ವಿಪತ್ತು ಎಂದು ಸರ್ಕಾರ ಘೋಷಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ‌ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಶನಿವಾರ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಆಡಳಿತ ಮಂಡಳಿ ತುರ್ತು ಸಭೆಯ ಸಾನ್ನಿಧ್ಯ ವಹಿಸಿದ ಶ್ರೀಗಳು ಈ ಹಕ್ಕೊತ್ತಾಯ‌ ಮಾಡಿದರು. ನಿರ್ಣಯ ರೂಪದಲ್ಲಿ ಮಾರ್ಗದರ್ಶನ ನೀಡಿದ ಸ್ವರ್ಣವಲ್ಲಿ ಶ್ರೀಗಳು, ಪ್ರಕೃತಿ ಅವಘಡದಿಂದ ಜಿಲ್ಲೆಯಲ್ಲಿ ನಾಶವಾದ ಮನೆಗಳನ್ನು ಬೇರೆ ಸ್ಥಳಗಳಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು. ಅತಿಯಾದ ಮಳೆಯಿಂದ ಸಂಪೂರ್ಣ ಕೃಷಿ ಭೂಮಿ ನಾಶವಾದ ರೈತರ ಸಾಲ ಮನ್ನಾವನ್ನು ಸರಕಾರ ಮಾಡಬೇಕು.
ತೋಟ-ಗದ್ದೆ ಸಂಪೂರ್ಣ ನಾಶವಾದ ರೈತರಿಗೆ ಬೇರೆ ಸ್ಥಳದಲ್ಲಿ ಕೃಷಿ ಜಮೀನು ನೀಡಬೇಕು. ರಸ್ತೆ ಪುನರ್‌ನಿರ್ಮಾಣ ಆಗಬೇಕು, ಮತ್ತಿಘಟ್ಟಾ-ಹಳವಳ್ಳಿ ರಸ್ತೆಯನ್ನು ಅವಶ್ಯಕವಾಗಿ ನಿರ್ಮಿಸಬೇಕು, ಪ್ರವಾಹ, ಭೂಕುಸಿತ ಸಂತ್ರಸ್ತರಿಗೆ ಸಮಾಜ ಅಪಾರ ನೆರವಿನ ಹಸ್ತ ಚಾಚಬೇಕು ಎಂದು
ಮನವಿ ಮಾಡಿದರು.

ಶ್ರೀ ಸ್ವರ್ಣವಲ್ಲೀ ಸಂಸ್ಥಾನ ಇನ್ನಷ್ಟು ಸೇವೆ ನೀಡಲು ನಿರ್ಧರಿಸಿದೆ ಎಂದು ಪ್ರಕಟಿಸಿದರು. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಸ್ಥೆಗಳು, ಟಿ.ಎಸ್.ಎಸ್, ಟಿ.ಎಂ.ಎಸ್, ಕೆ.ಡಿ.ಸಿ.ಸಿ ಬ್ಯಾಂಕ್, ಉದ್ದಿಮೆಗಳು ಶ್ರೀ ಮಹಾಸಂಸ್ಥಾನದ ಜೊತೆ ಸೇವಾಕಾರ್ಯಕ್ಕೆ ನೆರವು ನೀಡಲು ಕರೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸರ್ಕಾರಕ್ಕೆ ಭೂಕುಸಿತ ಅಧ್ಯಯನ ಸಮಿತಿ ಏಪ್ರಿಲ್‌ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ತಾಲೂಕುಗಳ ಸೇರ್ಪಡೆಯಾಗಿದೆ. ಕೃಷಿಭೂಮಿ ಸಂಪೂರ್ಣ ನಾಶವಾಗಿದ್ದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರ್ಕಾರ ನೆರವು ಘೋಷಿಸಿದೆ. ಇನ್ನಷ್ಟು ಹಾನಿ ವಿವರ ಸೇರ್ಪಡೆಯಾಗಬೇಕು. ಪುನರ್ವಸತಿ ಬಗ್ಗೆ ಇನ್ನಷ್ಟು ಒತ್ತಡ ತರಬೇಕು. ರಾಷ್ಟ್ರದ ಗಮನ ಸೆಳೆಯಬೇಕು ಎಂದರು. ವೆಂಕಟರಮಣ ಬೆಳ್ಳಿ, ಗಂಗಾಧರ ಕಡಕಿನಬೈಲು, ಸೀತಾರಾಮ ನೀರ್ನಳ್ಳಿ, ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ, ಡಿ ಶಂಕರ ಭಟ್ಟ, ಸದಾನಂದ ಹಳವಳ್ಳಿ ಇನ್ನಿತರರು ಮಾತನಾಡಿದರು.

ಸೀಮೆಗಳಿಂದ ಹಾನಿ ವಿವರ:

ಶ್ರೀಮಠದ ವಿವಿಧ ಸೀಮಾ ಮುಖ್ಯಸ್ಥರು, ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಉಪಸಮಿತಿಗಳ ಕಾರ್ಯಕರ್ತರು ತಮ್ಮ ಸೀಮೆಯಲ್ಲಿ ಆಗಿರುವ ಭೂಕುಸಿತ, ಪ್ರವಾಹ ಹಾನಿ ವಿವರ ಮಂಡಿಸಿದರು. ಈಗಾಗಲೇ ಸ್ವರ್ಣವಲ್ಲೀ ಮಠದಿಂದ ನೀಡಿರುವ ನೆರವಿನ ಮಾಹಿತಿ ನೀಡಿದರು. ಶ್ರೀಮಠದ ಮುಖ್ಯ ವ್ಯವಸ್ಥಾಪಕ ಎಸ್ ಎನ್. ಗಾಂವ್ಕಾರ ಹಾನಿಯ ಸಂಗ್ರಹ ವರದಿ ಸಭೆಯ ಮುಂದೆ ಮಂಡಿಸಿದರು. ಕಳಚೆ ಪ್ರದೇಶದಲ್ಲಿ ಮನೆ ನೆಲಸಮವಾದ 20 ಕುಟುಂಬಗಳು ಮನೆ ತೊರೆದಿದ್ದಾರೆ. ಇನ್ನೂ 30 ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಇಲ್ಲಿನ ಅರವತ್ತು ಮನೆಗಳಿಗೆ ಯಾವುದೇ ನಾಗರಿಕ ಸೌಲಭ್ಯ ಇಲ್ಲವಾಗಿದೆ. ರಸ್ತೆ, ವಿದ್ಯುತ್, ನೀರು, ದೂರವಾಣಿ ಸಂಪರ್ಕ ಕಡಿದಿದೆ. ಹಳವಳ್ಳಿ, ಸುಂಕಸಾಳ, ಆಚವೆ, ಹಿಲ್ಲೂರು ಹಳ್ಳಿಗಳ ಕೃಷಿಕಾರ್ಮಿಕರ 300 ಮನೆಗಳು ಹಾನಿಗೆ ಒಳಗಾಗಿವೆ. ಬಾಳೂರು,ಕರೂರು,ಮತ್ತೀಘಟ್ಟ ಪ್ರದೇಶದಲ್ಲಿ ಹತ್ತು ಮನೆಗಳು ನಾಶವಾಗಿವೆ. ಸುಮಾರು 25 ಎಕರೆ ತೋಟ ನೆಲಸಮವಾಗಿದೆ. ಕಳಚೆ ಸೇರಿದಂತೆ ಯಲ್ಲಾಪುರ, ಸಿದ್ದಾಪುರ, ಶಿರಸಿ ಪ್ರದೇಶಗಳ ಐದುನೂರು ಎಕರೆಗಿಂತಲೂ ಹೆಚ್ಚು ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿದೆ ಎಂdu ವಿವರ ನೀಡಿದರು.

ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಸ್ವಾಗತಿಸಿದರು. ಜಿ.ವಿ ಹೆಗಡೆ ವಂದಿಸಿದರು. ಇದೇ ವೇಳೆ ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಪ್ರವಾಹ ಭೂಕುಸಿತ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕೋರಲಾಗಿದೆ. ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಕರ್ನಾಟಕ ಬ್ಯಾಂಕ್ ಶಿರಸಿ ಶಾಖೆ ಉಳಿತಾಯ ಖಾತೆ ಸಂಖ್ಯೆ- 7072500100707001 ಐಎಫ್‌ಎಸ್ಸಿ ಸಂಖ್ಯೆ- KARB0000707 ಜಮಾ ಮಾಡಬಹುದು. ದೇಣಿಗೆ ನೀಡುವವರು ತಮ್ಮ ಹೆಸರು ವಿಳಾಸ ಫೋನ್ ನಂಬರ್ ಮುಂತಾದ ವಿವರಗಳನ್ನು ನೀಡಬೇಕು.

ಹೆಚ್ಚಿನ ಮಾಹಿತಿಗೆ 08384-296555,279311, 9483481359ನ್ನು ಸಂಪರ್ಕಿಸಲು ಕೋರಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button