ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಬಿಜೆಪಿ ಸರ್ಕಾರದಲ್ಲಿಯೇ ಸಕ್ರಿಯನಾಗಿ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಯಾರ ಮುಲಾಜಿಗೂ ಒಳಗಾಗಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು..
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸೋಮಣ್ಣ, ನಾನು ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಜೊತೆ ಪ್ರಯಾಣಿಸುತ್ತಿದ್ದ ಫೋಟೋ ಇದು ಯಾವುದೋ ಹಳೆಯ ಫೋಟೋ. ಯಾವುದೋ ಕಾಲದ ಫೋಟೋ ತಗೊಂಡು ನೀವು ಹಾಕಿಕೊಂಡರೆ ನಾವೇನು ಮಾಡಲು ಸಾಧ್ಯ. , ಕೆಲವೊಬ್ಬರು ನನ್ನ ಬಗ್ಗೆ ತೇಜೋವಧೆ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕ ವ್ಯಕ್ತಿ. ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾಭಿಮಾನ ಮಾರಾಟಮಾಡಿ ನಾನು ಜೀವನ ನಡೆಸುವವನಲ್ಲ. ನಾನು ಬೆಂಗಳೂರಿಗೆ ಹೊಟ್ಟೆ ಪಾಡಿಗಾಗಿ ಬಂದೆ. 6X8 ಅಡಿ ಜಾಗದಲ್ಲಿ ವಾಸ ಮಾಡಿದವನು ನಾನು. ಸುಳ್ಳು ಹೇಳಲು ನನಗೆ ಬರಲ್ಲ.ಪಿಗ್ಮಿ ಕಲೆಕ್ಟ್ ಮಾಡಿ ಜೀವನ ಸಾಗಿಸಿದ್ದೇನೆ ಎಂದು ಕಷ್ಟದ ದಿನಗಳನ್ನು ನೆನೆದು ಕಣ್ಣೀರಾದರು.
ನಾನು ಬಿಜೆಪಿ ಶಾಸಕ. ಬಿಜೆಪಿ ಸರ್ಕಾರದ ಮಂತ್ರಿ. ನನಗೆ ನನ್ನ ಇತಿ ಮಿತಿ ಗೊತ್ತಿದೆ ಎಷ್ಟು ಗೌರವಯುತವಾಗಿರಬೇಕು ಎಂಬುದೂ ಗೊತ್ತಿದೆ. ಈಗ ಹಬ್ಬುತ್ತಿರುವ ವದಂತಿಗಳು ಕೇವಲ ಊಹಾಪೋಹ. ಮಾಧ್ಯಮಗಳು ಮಾಡಿಕೊಂಡಿರುವ ಸೃಷ್ಟಿ ಎಂದು ಗರಂ ಆದರು. ನಾನು ಚಿಲ್ಲರೆ ರಾಜಕಾರಣ ಮಾಡುವವನೂ ಅಲ್ಲ, ಇನ್ನೊಬ್ಬರ ತರಹ ಆಟ ಆಡಿಸೋದು ಗೊತ್ತಿಲ್ಲ. ಕೆಲ ಸಂಗತಿಗಳನ್ನು ಹೇಳುವಾಗ ನಿಷ್ಠುರನಾಗಿ ಮಾತನಾಡುತ್ತೇನೆ. ಕಹಿ ಘಟನೆಗಳು ಆಗಬಾರದು ಎಂಬ ಕಾರಣಕ್ಕೆ. ಇನ್ನು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ನಮ್ಮ ತಾಲೂಕಿನವರು. ಡಿ.ಕೆ.ಶಿವಕುಮಾರ್ ನನ್ನನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಸೇರುವ ವಿಚಾರವೂ ಇಲ್ಲ. ಚರ್ಚೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್-ಸಚಿವ ಸೋಮಣ್ಣ ಫೋಟೋ ವೈರಲ್; ಕುತೂಹಲ ಮೂಡಿಸಿದ ಸುದ್ದಿಗೋಷ್ಠಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ