ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಗರಣದ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ನಲ್ಲಿದ್ದ 45 ಕೋಟಿ ರೂ. ಹಣ ಜಪ್ತಿ ಮಾಡಿದೆ.
ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಬಂಧಿತ ಆರೋಪಿ ಸತ್ಯನಾರಾಯಣ್ ಒಡೆತನದ ಸಹಕಾರಿ ಬ್ಯಾಂಕ್ ಇದಾಗಿದ್ದು, ಇದೇ ಬ್ಯಾಂಕ್ ನ18 ನಕಲಿ ಖಾತೆಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಪೈಕಿ ಬಹುಪಾಲು ಹಣ ಡ್ರಾ ಆಗಿತ್ತು. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಪದ್ಮನಾಭ, ಸತ್ಯನಾರಾಯಣ ಎಂಬ ಐವರನ್ನು ಬಂಧಿಸಿ, ಎಸ್ಐಟಿ ವಿಚಾರಣೆ ನಡೆಸುತ್ತಿದೆ.
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಸಚಿವ ನಾಗೇಂದ್ರ ಅವರಿಗೂ ಕಂಟಕ ತಂದಿಟ್ಟಿದೆ. ಮೂಲಗಳ ಪ್ರಕಾರ ಸಚಿವ ನಾಗೇಂದ್ರ ಅವರಿಗೆ ರಾಜೀನಾಮೆ ನೀಡಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಹಾಗಾಗಿ ಸಚಿವ ನಾಗೇಂದ್ರ ಇಂದು ಅಥವಾ ನಾಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ