*ಬೆಳಗಾವಿಗೆ ವಂದೇ ಭಾರತ್ ಅನ್ಯಾಯ:* *ಹುಬ್ಬಳ್ಳಿಗೆ ಡಬಲ್ ಧಮಾಕಾ* *ಕರ್ಮ ಭೂಮಿ ಎನ್ನುವ ಜಗದೀಶ್ ಶೆಟ್ಟರ್ ಬಾಯಿ ತೆರೆಯಲಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಗೆ ಈಗ ಮತ್ತೊಂದು ಅನ್ಯಾಯವಾಗಿದೆ. ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಲೇ ಸಂಸದರಾದರೂ ಜಗದೀಶ್ ಶೆಟ್ಟರ್ ಬಾಯಿ ತೆರೆಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಬೆಳಗಾವಿಗೆ ಮಾತ್ರ ಇಲ್ಲದ ನೆಪ ಹೇಳಿ ಅನ್ಯಾಯದ ಮೇಲೆ ಅನ್ಯಾಯ ಮಾಡಲಾಗುತ್ತಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ವಂದೇ ಭಾರತ ರೈಲು ಬೆಳಗಾವಿವರೆಗೂ ಬರಲಿ ಎನ್ನುವ ಕೂಗನ್ನು ತಾಂತ್ರಿಕ ಕಾರಣವೊಡ್ಡಿ ತಡೆದಿದ್ದ ಬೆಳಗಾವಿ ವಿರೋಧಿ ರಾಜಕಾರಣಿಗಳು ಈಗ ಪುಣಾದಿಂದ ಬೆಳಗಾವಿ ಮೂಲಕ ಅದೇ ಹಳಿಯಲ್ಲಿ ಹುಬ್ಬಳ್ಳಿವರೆಗೂ ಓಡಿಸಲು ಮುಂದಾಗಿದ್ದಾರೆ. ರಾಜ್ಯದ ರಾಜಧಾನಿಗೆ ಸಂಪರ್ಕ ಕಲ್ಪಿಸುವಂತೆ ಕೇಳಿದ್ದ ಬೆಳಗಾವಿ ಜನರಿಗೆ ಮಹಾರಾಷ್ಟ್ರದ ಪುಣಾಕ್ಕೆ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ.
ಈ ಹಿಂದೆ ಉಡಾನ್ ಯೋಜನೆ ಘೋಷಣೆಯಾದಾಗ ಬೆಳಗಾವಿ ಬಿಟ್ಟು ಹುಬ್ಬಳ್ಳಿಗೆ ಮಾಡಿ ಇಲ್ಲಿಂದ ವಿಮಾನಗಳೆಲ್ಲ ಅಲ್ಲಿಗೆ ಶಿಫ್ಟ್ ಆಗುವಂತೆ ಮಾಡಿದ್ದರು. ನಂತರ ಬೆಳಗಾವಿ ಜನರ ಸಂಘಟಿತ ಹೋರಾಟದ ಪರಿಣಾಮವಾಗಿ ಎರಡನೇ ಹಂತದಲ್ಲಿ ಬೆಳಗಾವಿ ವಿಮಾನ ನಿಲ್ದಾಣವನ್ನೂ ಉಡಾನ್ ಯೋಜನೆಯಲ್ಲಿ ಸೇರಿಸಲಾಯಿತು. ಅವಕಾಶ ಸಿಕ್ಕಿದಾಗಲೆಲ್ಲ ಬೆಳಗಾವಿಗೆ ಅನ್ಯಾಯ ಮಾಡುತ್ತಿರುವ ಕೆಲವು ರಾಜಕಾರಣಿಗಳು ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ.
ಬೆಳಗಾವಿಯಿಂದ ಹುಬ್ಬಳ್ಳಿವರೆಗೆ ಬಂದು ನಿಲ್ಲುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ಓಡಿಸಿ ಎನ್ನುವ ಕೂಗನ್ನು ಇಲ್ಲದ ಕಾರಣ ಹೇಳಿ ತಣ್ಣಗಾಗಿಸಿರುವವರು ಈಗ ಪುಣೆಯಿಂದ ಹುಬ್ಬಳ್ಳಿವರೆಗೆ ಸಂಚರಿಸುತ್ತಿರುವುದನ್ನು ತಿಳಿದೂ ಮೌನವಹಿಸಿದ್ದಾರೆ. ಬೆಳಗಾವಿ ನನ್ನ ಕರ್ಮಭೂಮಿ ಎಂದು ಸಂಸದರಾಗಿರುವ ಅತ್ಯಂತ ಪ್ರಭಾವಿ ರಾಜಕಾರಣಿ ಜಗದೀಶ ಶೆಟ್ಟರ್ ಈಗ ತಮ್ಮ ಶಕ್ತಿಯನ್ನೆಲ್ಲ ಬಳಸಿ, ಬೆಂಗಳೂರಿನಿಂದ ಬರುವ ವಂದೇ ಭಾರತ್ ರೈಲನ್ನೂ ಬೆಳಗಾವಿವರೆಗೆ ಓಡಿಸಲು ಮುಂದಾಗಲಿ.
ಹುಬ್ಬಳ್ಳಿಗೆ ಬೆಂಗಳೂರಿನಿಂದ ಮತ್ತು ಪುಣಾದಿಂದಲೂ ವಂದೇ ಭಾರತ ತರುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಡಬಲ್ ಕೊಡುಗೆ ನೀಡಿದ್ದಾರೆ. ಹಾಗೆಯೇ ಜಗದೀಶ್ ಶೆಟ್ಟರ್ ಪುಣೆಯ ರೈತಿನ ಜೊತೆಗೆ ಬೆಂಗಳೂರು ರೈಲನ್ನೂ ಬೆಳಗಾವಿವರೆಗೆ ಓಡಿಸಲು ಕೂಡಲೆ ಕ್ರಮ ಕೈಗೊಳ್ಳುವ ಮೂಲಕ ಬೆಳಗಾವಿ ತಮ್ಮ ಕರ್ಮ ಭೂಮಿ ಎನ್ನುವುದನ್ನು ಸಾಬೀತುಪಡಿಸಬೇಕಿದೆ. ಸ್ಥಳೀಯ ಬಿಜೆಪಿ ಸಂಸದರು, ಶಾಸಕರು ಸಹ ಇದಕ್ಕೆ ಅಗತ್ಯ ಒತ್ತಡ, ಸಹಕಾರ ನೀಡಲಿ ಎನ್ನುವುದು ಬೆಳಗಾವಿಯ ಮಲತಾಯಿ ಮಕ್ಕಳ ಅಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ