*ವಂಟಮೂರಿ ಸಂತ್ರಸ್ತೆ ಭೇಟಿಗೆ ಹೈಕೋರ್ಟ್ ನಿರ್ಬಂಧ; ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಸೂಕ್ಷ್ಮತೆ ಮೆರೆದ ಬಿಜೆಪಿ ನಾಯಕರು; ಸಿಎಂ ಆಕ್ರೋಶ*
ಅಮಾನುಷ ಘಟನೆಯನ್ನು ರಾಜಕೀಯಕ್ಕೆ ಬಳಸುವ ದುರ್ಬುದ್ಧಿ; ಸತ್ಯಶೋಧನೆ ಹೆಸರಲ್ಲಿ ಕೋರ್ಟ್ ಆದೇಶ ಗಾಳಿಗೆ ತೂರಿದ ಬಿಜೆಪಿ ನಾಯಕರು
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಂಟಮೂರಿ ಪ್ರಕರಣದ ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ ನಿರ್ಬಂಧ ಹೇರಿದೆ. ರಾಜಕೀಯ ಉದ್ದೇಶದಿಂದ ಕೆಲ ನಾಯಕರು ಭೇಟಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಹೈಕೋರ್ಟ್, ಸಂತ್ರಸ್ತೆಯ ಭೇಟಿಗೆ ನಿರ್ಬಂಧ ವಿಧಿಸಿದೆ. ಆದರೂ ಬಿಜೆಪಿ ನಾಯಕರು ಸಂತ್ರಸ್ತೆ ಭೇಟಿಯಾಗಿರುವುದನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹೈಕೋರ್ಟ್ ನ ನಿರ್ಬಂಧದ ಹೊರತಾಗಿಯೂ ದುರುಳರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬೆಳಗಾವಿಯ ಸಂತ್ರಸ್ತ ಮಹಿಳೆಯನ್ನು ಭೇಟಿಮಾಡುವ ಮೂಲಕ ಬಿಜೆಪಿ ನಾಯಕರು ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸಿ ಅಗೌರವಿಸಿರುವುದು ಮಾತ್ರ ಅಲ್ಲ ತಮ್ಮ ಅಸೂಕ್ಷ್ಮತೆಯನ್ನು ಮೆರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂತ್ರಸ್ತ ಮಹಿಳೆಯು ಮಾನಸಿಕವಾಗಿ ತೀವ್ರವಾಗಿ ಜರ್ಝರಿತರಾಗಿರುವ ಹಿನ್ನೆಲೆಯಲ್ಲಿ ಹಾಗೂ ಮಾನಸಿಕ ಆಘಾತದಲ್ಲಿರುವ ಈ ಸಂದರ್ಭದಲ್ಲಿ ಆಕೆಯ ಭೇಟಿಗೆ ಅಗಮಿಸುವವರನ್ನು ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಮುಖ್ಯನ್ಯಾಯಾಧೀಶರು ಸ್ವಯಂಪ್ರೇರಿತರಾಗಿ ಇಂದು ಬೆಳಿಗ್ಗೆ ಸೂಚಿಸಿದ್ದರು. ರಾಜಕೀಯ ನಾಯಕರು ಸಂತ್ರಸ್ತ ಮಹಿಳೆಯನ್ನು ಭೇಟಿಯಾಗುವ ಸುದ್ದಿಯ ಹಿನ್ನೆಲೆಯಲ್ಲಿಯೇ ಮುಖ್ಯನ್ಯಾಯಾಧೀಶರು ಈ ಸೂಚನೆ ನೀಡಿರುವುದು ಗಮನಾರ್ಹ.
ಮಹಿಳೆಯು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಂದರ್ಶಕರ ಭೇಟಿಯು ಆಕೆಯ ಆರೋಗ್ಯ ಹಾಗೂ ಚಿಕಿತ್ಸೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಮಹಿಳೆಯ ಹಿತದೃಷ್ಟಿಯಿಂದ ಸಂದರ್ಶಕರ ಭೇಟಿಯನ್ನು ನಿರ್ಬಂಧಿಸುವುದು ಅಗತ್ಯ ಎಂದು ತಾನು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ.
ಯಾವುದೇ ವ್ಯಕ್ತಿ, ಸಮೂಹ, ಗುಂಪು, ಸಂಘಟನೆ, ರಾಜಕೀಯ ಪಕ್ಷಗಳು ಹಾಗೂ ಇನ್ನಿತರರು ಮಹಿಳೆಯ ಚಿಕಿತ್ಸೆಯ ಹೊಣೆ ಹೊತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಪೂರ್ವ ಲಿಖಿತ ಅನುಮತಿ ಇಲ್ಲದೇ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು.
ಹೀಗಿದ್ದರೂ ಒಂದು ಅಮಾನುಷ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸುವ ದುರ್ಬುದ್ಧಿ ತೋರಿರುವ ಬಿಜೆಪಿ ನಾಯಕರು ಸತ್ಯಶೋಧನೆಯ ಹೆಸರಿನಲ್ಲಿ ನ್ಯಾಯಾಲಯದ ಆದೇಶ, ನಿರ್ದೇಶನಗಳನ್ನು ಗಾಳಿಗೆ ತೂರಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾರೆ. ಸಂತ್ರಸ್ತೆಯ ಸೂಕ್ಷ್ಮ ಮಾನಸಿಕ ಸ್ಥಿತಿಯ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ಸಂವೇದನಾಶೂನ್ಯ ಬಿಜೆಪಿ ನಾಯಕರು ಹಾಗೂ ಅವರ ಬೆನ್ನಿಗೆ ನಿಂತು ಚಿತಾವಣೆ ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನಡೆ-ನುಡಿಯನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಗುಡುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ