Kannada NewsKarnataka NewsLatest

ವಿವಿಧ ಪ್ರಮುಖ ಸುದ್ದಿಗಳು

ಯುವ ಜನಾಂಗಕ್ಕೆ ಕುಷ್ಠರೋಗದ ಬಗ್ಗೆ ಅರಿವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನವರಿ ೩೦ ರಿಂದ ಫೆಬ್ರುವರಿ ೧೩ ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಶಿಕಾಂತ ವಿ.ಮುನ್ಯಾಳ ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಜಿಲ್ಲಾ ಕುಷ್ಠರೋಗ ವಿಭಾಗ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಇವರ ಸಹಯೋಗದಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮ ಅಂಗವಾಗಿ ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ (ಜ.೩೦) ನಡೆದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಯುವ ಜನಾಂಗಕ್ಕೆ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿ ಪ್ರಾರಂಬಿಕ ಹಂತದಲ್ಲಿಯೆ ಪರಿಕ್ಷಿಸಿಕೊಂಡು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಹೇಳಿದರು.

ಅದರಂತೆ ಬೆಳಗಾವಿ ನಗರದ ಕೊಳಚೆ ಪ್ರದೇಶಗಳಲ್ಲಿ ವಿಶೇಷವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಿ ಕುಷ್ಠ ರೋಗದಿಂದ ಬಳಲುತ್ತಿರುವವರನ್ನು ಕಂಡುಹಿಡಿದು ಚಿಕಿತ್ಸೆಗೆ ಒಳಪಡಿಸುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೊಳ ಅವರು ಮಾತನಾಡಿ, ತಮ್ಮ ಮಾಡಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದಲ್ಲಿ ಜಿಲ್ಲೆಯ ಎಲ್ಲ ಆರೋಗ್ಯ ಕಾರ್ಯಕರ್ತೆಯರು, ಆಶಾ ಹಾಗೂ ಆರ್‌ಬಿಎಸ್‌ಕೆ ತಂಡದವರು ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಪರೀಕ್ಷಿಸಿ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುವಂತೆ ಕರೆ ನೀಡಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಚಾಂದಿನಿ ಜಿ. ದೇವಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕುಷ್ಠರೋಗ ನಿರ್ಮೂಲನೆಗಾಗಿ ಶ್ರಮಿಸಿದ ಮಹನಿಯರನ್ನು ಸ್ಮರಿಸಿ ಕುಷ್ಠರೋಗ ನಡೆದ ಬಂದ ದಾರಿ ಬಗ್ಗೆ ಸವಿಸ್ತಾರವಗಿ ಅಂಕಿ ಅಂಶಗಳೊಂದಿಗೆ ವಿವರಿಸಿ, ಕುಷ್ಠರೋಗದ ವಿರುದ್ಧ ಅಂತಿಮ ಯುದ್ಧ ಆರಂಭವಾಗಿದ್ದು ಈ ಒಂದು ಜಾಗೃತಿ ಅಭಿಯಾನದಲ್ಲಿ ಎಲ್ಲರು ಭಾಗವಹಿಸುವಂತೆ ತಿಳಿಸಿದರು.

ಶಾರದಾ ಬನಗಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಪಿ.ಯಲಿಗಾರ ಸ್ವಾಗತಿಸಿದರ ಸಿ.ಜಿ.ಅಗ್ನಿಹೋತ್ರಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಅನಿಲ ಕೊರಬು, ವಿವಿಧ ಸಂಘ ಸಂಸ್ಥೆಯವರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

 

ಸವದತ್ತಿ ಯಲ್ಲಮ್ಮ ದೇವಿ ಜಾತ್ರೆ: ಹೆಚ್ಚುವರಿ ಬಸ್ ಕಾರ್ಯಾಚರಣೆ

ಸವದತ್ತಿ ಯಲ್ಲಮ್ಮ ದೇವಿ ಜಾತ್ರೆ ನಿಮಿತ್ಯ ಫೆಬ್ರುವರಿ ೧ ರಿಂದ ೨೦ ರವರೆಗೆ ಜಾತ್ರೆ ಜರುಗಲಿದ್ದು, ಸದರಿ ಜಾತ್ರೆಗೆ ಚಿಕ್ಕೋಡಿ, ಗೋಕಾಕ್, ಘಟಪ್ರಭಾ ,ಅಥಣಿ ,ಕಾಗವಾಡ, ನಿಪ್ಪಾಣಿ, ರಾಯಬಾಗ ಹಾಗೂ ಮುಂತಾದ ಸ್ಥಳಗಳಿಂದ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನಗುಡ್ಡ ಹಾಗೂ ಜೋಗುಳಬಾಯಿವರೆಗೆ ಪ್ರಯಾಣಿಸುವ ಯಾತ್ರಿಕರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಸಲಾಗಿದೆ.

ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಹಾಗೂ ಶ್ರೀ ಯಲ್ಲಮ್ಮದೇವಿ ಜಾತ್ರಾ ಕೇಂದ್ರದಲ್ಲಿ ಪ್ರತ್ಯೇಕ ನಿಯಂತ್ರಣ ಬಿಂದುಗಳಲ್ಲಿ ನುರಿತ ಸಾರಿಗೆ ನಿಯಂತ್ರಣ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಸುವ್ಯವಸ್ಥಿತ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಯಾತ್ರಿಕರು ಇದರ ಸದುಪಯೋಗ ಪಡೆಯಬೇಕ್ಕೆಂದು ಚಿಕ್ಕೋಡಿ ವಿಭಾಗದ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

ಯುವ ಕೌಶಲ್ಯ ಯೋಜನೆಯಡಿ ಮೌಲ್ಯಮಾಪನ ಶಿಬಿರ

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ವತಿಯಿಂದ ಎಸ್.ಎಸ್.ಎಲ್.ಸಿ.ಯಿಂದ ಸ್ನಾತಕೋತ್ತರ ಪದವಿಯವರೆಗೆ (ಇಂಜಿನಿಯರಿಂಗ್ ಪದವಿಯನ್ನು ಹೊರತುಪಡಿಸಿ) ವಿದ್ಯಾರ್ಹತೆ ಹೊಂದಿರುವ ೧೮-೩೫ ವಯೊಮಿತಿಯಲ್ಲಿರುವ ಜಿಲ್ಲೆಯ ಯುವಕ-ಯುವತಿಯರಿಗೆ ವಿವಿಧ ತಾಲೂಕುಗಳಲ್ಲಿ ಯುವ ಕೌಶಲ್ಯ ಯೋಜನೆಯಡಿ ಮೌಲ್ಯಮಾಪನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಭ್ಯರ್ಥಿಗಳಲ್ಲಿರುವ ಉದ್ಯೋಗದ ಆಸಕ್ತಿ, ಸಾಮರ್ಥ್ಯ, ಗುಣಗಳು ಮತ್ತು ವ್ಯಕ್ತಿತ್ವವನ್ನು ಅಳೆಯುವುದು ಈ ಶಿಬಿರದ ಉದ್ದೇಶವಾಗಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನೋಂದಣಿ, ತರಬೇತಿ, ಮೌಲ್ಯಮಾಪನ, ನಡೆಸಲಾಗುತ್ತದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ನಕಲು ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ರೆಸ್ಯೂಮ್ ತೆಗೆದುಕೊಂಡು ಬರಬೇಕು.

ಶಿಬಿರ ನಡೆಯುವ ಸ್ಥಳ:

ಅಥಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೧ ರಂದು, ಬೆಳಗಾವಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫೆಬ್ರುವರಿ ೩ ರಂದು, ಚಿಕ್ಕೋಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೪ ರಂದು, ಗೋಕಾಕ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಫೆಬ್ರುವರಿ ೫ ರಂದು, ಖಾನಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೬ ರಂದು, ರಾಮದುರ್ಗ ಶ್ರೀಮತಿ. ಐ.ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೭ ರಂದು.

ರಾಯಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೮ ರಂದು, ಸಂಪಗಾಂವಿ (ನೇಸರಗಿ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫೆಬ್ರುವರಿ ೧೦ ರಂದು, ಹುಕ್ಕೇರಿ (ಯಮಕನಮರಡಿ) ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೧೧ ರಂದು, ಸವದತ್ತಿ ಶ್ರೀ. ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಫೆಬ್ರುವರಿ ೧೨ ರಂದು ಶಿಬಿರು ನಡೆಯಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ನಿಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಫೆ.೯ ರಂದು

ರಾಷ್ಟ್ರೀಯ ರಸ್ತೆ ಸುರಕ್ಷತೆ ಅಭಿಯಾನ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿಬಂಧ ಹಾಗೂ ಚಿತ್ರಕಲೆ ಸ್ಪಧೆಗಳನ್ನು ಫೆಬ್ರುವರಿ ೯ ರಂದು ಶಿವಾಜಿ ನಗರದ ಸ್ವಾಮಿ ವಿವೇಕಾನಂದ ಸಂಸ್ಥೆಯ ಸಿಟಿ ಶಾಖೆಯಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ ೧೦ ಗಂಟೆಗೆ ನಿಬಂಧ ಸ್ಪರ್ಧೆ ರಸ್ತೆ ಸುರಕ್ಷತೆ ವಿಷಯದ ಮೇಲೆ ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲೀಷ ವಿಷಯದಲ್ಲಿ ಬರೆಯಬಹುದು, ಮಧ್ಯಾಹ್ನ ೧೨ ಗಂಟೆಗೆ ಚಿತ್ರಕಲೆ ಸ್ಪರ್ಧೆ ರಸ್ತೆ ಸುರಕ್ಷತೆ ವಿಷಯದ ಮೇಲೆ.

ತಂಡಗಳು:

ಯು.ಕೆ.ಜಿ. ಯಿಂದ ೨ನೇ ತರಗತಿ, ೨ನೇ ತರಗತಿಯಿಂದ ೪ ನೇ ತರಗತಿ, ೫ನೇ ತರಗತಿಯಿಂದ ೭ ನೇ ತರಗತಿಯವರೆಗೆ, ೮ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಹಾಗೂ ಕಾಲೇಜು.

ಹೆಸರು ನೋಂದಾಯಿಸಲು ಫೆಬ್ರುವರಿ ೭ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ೦೮೩೧-೪೨೦೧೯೧೨, ೬೩೬೦೭೬೭೩೭೨ ಮತ್ತು ೯೪೮೦೪೯೯೨೯೫ ಗೆ ಸಂಪರ್ಕಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕೋಟ್ಟಾ- ಕಾಯ್ದೆಯಡಿಯಲ್ಲಿ ದಾಳಿ-೧೩ ಪ್ರಕರಣ ದಾಖಲು

  ಜಿಲ್ಲಾ ತಂಬಾಕು ನಿಯಂತ್ರಣಾಧಿಕಾಗಳ ಮಾರ್ಗದರ್ಶನದಡಿಯಲ್ಲಿ ದಾಳಿಯಲ್ಲಿ ಸಾರ್ವಜನಿಕರಿಗೆ ಕೋಟ್ಪಾ-೨೦೦೩ ಕಾಯ್ದೆ ವಿರುದ್ದವಾಗಿ ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹಿರಾತು ಪ್ರದರ್ಶನ ಶೈಕ್ಷಣಿಕ ಆವರಣದ ೧೦೦ ಮೀಟರ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿಕೊಡಲಾಯಿತು.

ಕೋಟ್ಪಾ-೨೦೦೩ ಕಾಯ್ದೆ ಅಡಿಯಲ್ಲಿ ಒಟ್ಟು ೧೩ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಯಿತು ಹಾಗೂ ಸೆಕ್ಷನ್-೪ ನಾಮ ಫಲಕವನ್ನು ವಿತರಿಸಲಾಯಿತು.

ಸದರಿ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಜಿಲ್ಲಾ ಸಮಾಜ ಕಾರ್ಯಕತೆಯಾದ ಕವಿತಾ ರಾಜನ್ನವರ, ಆರ್.ಬಿ ಶೇಕ, ಎಸ್.ಎಸ್. ಚಿಕ್ಕೋಡಿ ಹಾಗೂ ಪೊಲೀಸ ಸಿಬಂದ್ದಿಗಳು ಉಪಸ್ಥಿತರಿದ್ದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button