Kannada NewsKarnataka NewsLatestNationalPolitics

*ಮನರೇಗಾದಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ ₹11 ಲಕ್ಷ ಕೋಟಿ ಭ್ರಷ್ಟಾಚಾರ* ; *ಆಕೆ ಉರುಳು ಹಾಕಿಕೊಳ್ಳಲು ಹೋಗಿದ್ರೂ ನೋಡಿಕೊಂಡು ಸುಮ್ಮನಿರುತ್ತಿದ್ದರಾ?* : *ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

*ʼವಿಬಿಜಿ ರಾಮ್ ಜಿ ಕಾಯ್ದೆʼ ಭ್ರಷ್ಟಾಚಾರಿ ಕಾಂಗ್ರೆಸ್‌ ಮಧ್ಯವರ್ತಿಗಳಿಗೆ ತೊಡಕು*

*

* ರಾಜ್ಯದಲ್ಲಿ ಸಿದ್ದರಾಮಯ್ಯ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ

* ರಾಹುಲ್‌ ಗಾಂಧಿ ಖುಷಿಪಡಿಸಲು ಇಲ್ಲಿ ಕಾಂಗ್ರೆಸ್‌ ಹೋರಾಟ

Home add -Advt

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್‌ ಅವಧಿಯಲ್ಲಿ ʼಮನರೇಗಾದಲ್ಲಿ ₹11 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಆಗಿದೆ. ಇಂಥ ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ ʼವಿಬಿಜಿ ರಾಮ್ ಜಿ ಕಾಯ್ದೆʼ ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, ʼವಿಬಿಜಿ ರಾಮ್ ಜಿ ಕಾಯ್ದೆʼಯಲ್ಲಿ ಎಐ ತಂತ್ರಜ್ಞಾನ, ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ ಎಂದರು.

ಮನರೇಗಾದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ₹11 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ವಿರೋಧಿಸಿಲ್ಲ. 2013ರಲ್ಲಿ ಸಿಎಜಿ ಪ್ರಕಾರ ದೇಶದಲ್ಲಿ 4.33 ಲಕ್ಷ ನಕಲಿ ಜಾಬ್ ಕಾರ್ಡ್ ಗಳಿದ್ದವು. ಮೊದಲು ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈಗ ಈ ಎಲ್ಲಾ ಅಕ್ರಮ, ಲೋಪಗಳಿಗೂ ತೆರೆ ಎಳೆಯಲೆಂದೇ ʼವಿಬಿಜಿ ರಾಮ್ ಜಿ ಕಾಯ್ದೆʼ ತಂದಿದ್ದೇವೆ ಎಂದು ಜೋಶಿ ಹೇಳಿದರು.

ʼವಿಬಿಜಿ ರಾಮ್ ಜಿ ಕಾಯ್ದೆʼಯಲ್ಲಿ ಕೂಲಿಕಾರರಿಗೆ 60 ದಿನಗಳ ಕಾಲ ಬಿಡುವು ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಿಗರು ಕೃಷಿ ಮೇಲೆ ದುಷ್ಪರಿಣಾಮ ಎನ್ನುತ್ತಿದ್ದಾರೆ, ಹಾಗಾದರೆ ಇವರ ಕಾಲದಲ್ಲೇನು 365 ದಿನ ಕೆಲಸ ಕೊಡುತ್ತಿದ್ದರಾ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ಕಾಲದಲ್ಲಿ ಮನರೇಗಾದಲ್ಲಿ ಡಿಜಿಟಲ್ ಪೇಮೆಂಟ್ ಅನ್ನೇ ಮಾಡುತ್ತಿರಲಿಲ್ಲ. ಇದೀಗ ತನ್ನ ಮಧ್ಯವರ್ತಿಗಳಿಗೆ ಅನುಕೂಲವಾಗಬೇಕೆಂಬ ನಿಲುವಿನಲ್ಲಿ ʼವಿಬಿಜಿ ರಾಮ್ ಜಿ ಕಾಯ್ದೆʼ ವಿರೋಧಿಸಿ ಹೋರಾಟ ಮಾಡುತ್ತಿದೆ ಎಂದು ಆರೋಪಿಸಿದರು.

*ರಾಜ್ಯದಲ್ಲಿ ಹೆಚ್ಚು ಭ್ರಷ್ಟಾಚಾರ:*

ಮನರೇಗಾದಲ್ಲಿ ರಾಜ್ಯಕ್ಕೆ ಹತ್ತು ವರ್ಷದಲ್ಲಿ 8 ಲಕ್ಷ 53 ಸಾವಿರ ಕೋಟಿ ಕೊಟ್ಟಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದಲ್ಲಿ ಮನರೇಗಾದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ. 80 ವರ್ಷದ ವ್ಯಕ್ತಿಯನ್ನೂ ಕೂಲಿಯನ್ನಾಗಿ ಮಾಡಿ ಹಣ ಪಡೆಯಲಾಗಿದೆ. ಇದೀಗ ರಾಹುಲ್ ಗಾಂಧಿಯಂತಹ ಅಪ್ರಬುದ್ಧ ರಾಜಕಾರಣಿಯನ್ನು ಖುಷಿಪಡಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

*ಗರಿ ಗರಿ ಅಂಗಿ ಹಾಕಿದವರಿಗೆ ದುಡ್ಡು ಸಿಗದು:*

ʼವಿಬಿಜಿ ರಾಮ್ ಜಿʼಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಸಮಸ್ಯೆಯಾಗುತ್ತಿದೆ. ಗರಿ ಗರಿ ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇನ್ನುಮುಂದೆ ದುಡ್ಡು ಸಿಗುವುದಿಲ್ಲ ಎಂದು ಹೇಳಿದರು.

ʼವಿಬಿಜಿ ರಾಮ್ ಜಿʼ ಕಾಯ್ದೆಯಲ್ಲಿ ಇನ್ನು 14 ದಿನದಲ್ಲೇ ಕೂಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಮಾನಿಟರಿಂಗ್ ಜವಾಬ್ದಾರಿಯನ್ನು ಪಂಚಾಯತ್‌ಗೂ ಕೊಡಲಾಗಿದೆ. ಪ್ರತಿ ವಾರ ಕೆಲಸದ ವಿವರ ಬಹಿರಂಗಪಡಿಸಬೇಕು. ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದರಲ್ಲಿ ಅಷ್ಟೊಂದು ವ್ಯವಸ್ಥಿತವಾಗಿ ಪಾರದರ್ಶಕತೆ ತರಲಾಗಿದೆ ಎಂದು ಜೋಶಿ ಸಮರ್ಥಿಸಿಕೊಂಡರು.

ಯುಪಿಎ ಅವಧಿಯಲ್ಲಿ ನರೇಗಾದಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸಲಿಲ್ಲವೆಂದು ಕಾಂಗ್ರೆಸ್ ನ ಒಬ್ಬರಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಚಿವರು, ಇವರ ಅವಧಿಯಲ್ಲಿ ನರೇಗಾ ಸಿಬ್ಬಂದಿಗೆ ವೇತನವೇ ಸಿಗುತ್ತಿರಲಿಲ್ಲ. ಇನ್ನು ಯುಪಿಎ ಕಾಲದಲ್ಲಿ ರಕ್ಷಣಾ ವ್ಯವಸ್ಥೆಗೂ ಏನೂ ಮಾಡಲಿಲ್ಲ. ಆಗಿನ ರಕ್ಷಣಾ ಸಚಿವ ಆ್ಯಂಟನಿ ಅವರು ಹೈಕಮಾಂಡ್‌ಗೆ ಹೆದರಿ ಯಾವುದಕ್ಕೂ ಸಹಿ ಮಾಡುತ್ತಲೇ ಇರಲಿಲ್ಲ ಎಂದು ಕುಟುಕಿದರು.

*ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯೇ?:*

ಅಧಿವೇಶನ ವೇಳೆ ವಿದೇಶಕ್ಕೆ ಹೋಗಿದ್ದ ರಾಹುಲ್ ಗಾಂಧಿ ಅವರೊಬ್ಬ ಗಂಭೀರ ರಾಜಕಾರಣಿಯೇ? ʼವಿಬಿಜಿ ರಾಮ್ ಜಿ ಕಾಯ್ದೆʼ ಯೋಜನೆ ಚರ್ಚೆ ವೇಳೆ ಸದನದಲ್ಲಿ ಇರಲೇ ಇಲ್ಲ. ಹೊಸ ಬದಲಾವಣೆ ಅನ್ವಯ ತಪ್ಪು ಕಂಡಲ್ಲಿ ನ್ಯಾಯಾಲಯಕ್ಕೆ ಹೋಗಬಹುದು. ಅಧಿಕಾರಿಗಳಿಗೆ ಶಿಕ್ಷೆ ಕೂಡ ಆಗತ್ತದೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಜೋಶಿ, ಮೊದಲೆಲ್ಲಾ ಸರ್ಕಾರ ₹100‌ ಹಾಕಿದರೆ ₹15 ಮಾತ್ರ ಜನರಿಗೆ ತಲುಪುತ್ತಿತ್ತು ಎಂಬುದನ್ನು ರಾಜೀವ್ ಗಾಂಧಿಯೇ ಹೇಳುತ್ತಿದ್ದರು. ಹಾಗಾದರೆ ಕಾಂಗ್ರೆಸ್‌ಗೆ ವ್ಯವಸ್ಥೆ ಹಾಗೇ ಇರಬೇಕಿತ್ತಾ? ಎಂದು ಹರಿಹಾಯ್ದರು.

*ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಎಸ್ಐಆರ್ ಭಯ:*

ಹುಬ್ಬಳ್ಳಿಯ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಎಸ್ಐಆರ್ ಭಯವಿದೆ. ಹಾಗಾಗಿಯೇ ಎಸ್ಐಆರ್ ಮಾಡಿ ಎಂದರೆ ಎಫ್ಐಆರ್ ಮಾಡುತ್ತಾರೆ. ಸಿಎಂ ಮತ್ತು ಗೃಹ ಸಚಿವರು ಪೊಲೀಸರ ಪರ ಮಾತಾಡಿದ್ದಾರೆ. ತನಿಖೆ ಮಾಡುತ್ತೇವೆ ಎನ್ನಬಹುದಿತ್ತಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.

*ನಿಮ್ಮ ದಾದಾಗಿರಿ ನಡೆಯಲ್ಲ:*

ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್‌ ಅವರ ಈ ತರಹದ ದಾದಾಗಿರಿ ಇಲ್ಲಿ ನಡೆಯಲ್ಲ ಎಂದ ಜೋಶಿ, ಕಾರ್ಪೊರೇಟರ್ ದೂರನ್ನು ತೆಗೆದುಕೊಂಡ ಪೊಲೀಸರು ಸುಜಾತಾ ಅವರ ದೂರನ್ನೇಕೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.

ಬಿಎಲ್‌ಒ ಮ್ಯಾಪಿಂಗ್ ಮಾಡಲು ಬಿಎಲ್‌ಎಗಳನ್ನು ಕರೆದುಕೊಂಡು ಹೋಗಲು ಅವಕಾಶವಿದೆ. ಆ ದಿನ ಕಾಂಗ್ರೆಸ್ನ ಬಿಎಲ್ಎ 2 ಇರಲಿಲ್ಲ. ಕಾಂಗ್ರೆಸ್ಸಿನವರು ಹೋಗಿ ಸುಜಾತಾ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಕಾರ್ಪೊರೇಟರ್ ಕಡೆಯವರ ದೂರಿನ ಮೇರೆಗೆ ಪೊಲೀಸರು ಸುಜಾತಾ ಅವರನ್ನು ಬಂಧಿಸುತ್ತಾರೆ. ಆಕೆ ತಾವೇ ಬಟ್ಟೆ ಬಿಚ್ಚಿಕೊಂಡರು ಎಂದಿದ್ದಾರೆ ಪೊಲೀಸರು. ಹಾಗಾದರೆ ಪೊಲೀಸರೇಕೆ ಸುಮ್ಮನಿದ್ದರು? ಆಕೆ ಉರುಳು ಹಾಕಿಕೊಳ್ಳಲು ಹೋಗಿದ್ರೂ ನೋಡಿಕೊಂಡು ಸುಮ್ಮನಿರುತ್ತಿದ್ದರಾ? ಎಂದು ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.

*ʼವಿಬಿ-ಜಿ ರಾಮ್ ಜಿʼಗೆ ಕಾಂಗ್ರೆಸ್ಸಿಗರ ಹೋರಾಟ ಯಾವ ಪುರುಷಾರ್ಥಕ್ಕೆ?*

* ಗ್ರಾಮೀಣರ ಉದ್ಯೋಗ ಹಕ್ಕು ಕಸಿಯಲಿದೆ ಎಂಬುದು ಶುದ್ಧ ಸುಳ್ಳು

* ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

* ಮೂಲಸೌಕರ್ಯ ಅಭಿವೃದ್ಧಿಪಡಿಸುವ ರಾಜ್ಯಗಳಿಗೆ ಸಿಗಲಿದೆ ₹17000 ಕೋಟಿ

ಬೆಂಗಳೂರು: ಕಾಂಗ್ರೆಸ್ಸಿಗರು ಯಾವ ಪುರುಷಾರ್ಥಕ್ಕೆ ಮತ್ತು ಅದ್ಯಾವ ನೈತಿಕತೆ ಇಟ್ಟುಕೊಂಡು ʼವಿಬಿ-ಜಿ ರಾಮ್ ಜಿʼ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.

ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಕುರಿತಂತೆ ಕಾಂಗ್ರೆಸ್ ಪಕ್ಷ ಜ.10ರಿಂದ ಹೋರಾಟಕ್ಕೆ ಕರೆ ನೀಡಿದ್ದು, ಜನರ ದಿಕ್ಕು ತಪ್ಪಿಸುವ ಮಗದೊಂದು ತಂತ್ರವಷ್ಟೇ ಎಂದು ಟೀಕಿಸಿದರು.

20 ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ ದೇಶ-ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಕಾಂಗ್ರೆಸ್ಸಿಗರೂ ಮಾಡಿದ್ದಾರೆಂದು ಜೋಶಿ ಸಮಜಾಯಿಷಿ ನೀಡಿದರು.

ʼವಿಬಿ-ಜಿ ರಾಮ್ ಜಿʼ ಗ್ರಾಮೀಣ ಜನರ ಉದ್ಯೋಗದ ಹಕ್ಕು ಕಸಿಯಲಿದೆ ಎಂಬ ಕಾಂಗ್ರೆಸ್ಸಿಗರ ಆರೋಪ ಶುದ್ಧ ಸುಳ್ಳು. ʼವಿಬಿ-ಜಿ ರಾಮ್ ಜಿʼ ಎಂಬುದು ಸಂಸತ್ತಿನ ಕಾಯ್ದೆ. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ; ಬದಲಾಗಿ ಉದ್ಯೂಗ ಖಾತ್ರಿಯನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. 

*ರಾಜ್ಯಗಳಿಗೆ ₹17000 ಕೋಟಿ:*

ಸರಿಯಾಗಿ ಕೆಲಸ ಕೊಟ್ಟು ಮೂಲಸೌಕರ್ಯ ಅಭಿವೃದ್ಧಿಪಡಿಸುವ ರಾಜ್ಯಗಳಿಗೆ ₹17 ಸಾವಿರ ಕೋಟಿ ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ ಅಂದಾಜಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಮನ್‍ರೇಗಾ ಇದ್ದಾಗಲೂ ಬೇರೆ ಬೇರೆ ರಾಜ್ಯ ಸರ್ಕಾರಗಳ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಉದ್ಯೋಗ ಕೊಟ್ಟಿದ್ದರು. ಅಲ್ಲದೇ, ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದ ಸಾಕಷ್ಟು ನಿದರ್ಶನಗಳಿವೆ ಎಂದರು.

*ಕೇಂದ್ರದ ದುಡ್ಡು ತಿನ್ನೋ ವ್ಯವಸ್ಥೆಯಿತ್ತು:*

ʼಖಾತ್ರಿʼಯಲ್ಲಿ ಈ ಹಿಂದೆ ಒಂದು ಪೈಸೆಯನ್ನೂ ರಾಜ್ಯ ಸರ್ಕಾರ ಕೊಡುತ್ತಿರಲಿಲ್ಲ; ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ದುಡ್ಡು ತಿನ್ನೋ ವ್ಯವಸ್ಥೆಯಿತ್ತು. ಇತ್ತೀಚೆಗೆ ಕೂಲಿ ಹಣ ನೇರ ಪಾವತಿಯಾಗುತ್ತಿದ್ದರೂ ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ. ಆದರೆ, ನಮ್ಮ ಸರ್ಕಾರ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಕೇಂದ್ರೀಕೃತ ಪಾವತಿ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ ಎಂದು ಸಮರ್ಥಿಸಿಕೊಂಡರು.

ʼವಿಬಿ-ಜಿ ರಾಮ್ ಜಿʼ ಯೋಜನೆ ನಿರ್ಧಾರದ ಹಕ್ಕುಗಳನ್ನು ಕೇಂದ್ರ ಸರ್ಕಾರವೇ ಇಟ್ಟುಕೊಂಡಿದೆ ಎಂಬುದು ದೊಡ್ಡ ಸುಳ್ಳು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದ ಜೋಶಿ, ಯುಪಿಎ ಕಾಲದ 10 ವರ್ಷದಲ್ಲಿ ₹12 ಲಕ್ಷ ಕೋಟಿ ಭ್ರಷ್ಟಾಚಾರವಾಗಿದೆ ಎಂದು ಅಮಿತ್ ಶಾ ಅವರು ಸಂಸತ್ತಿನಲ್ಲೇ ಹೇಳಿದ್ದು, ಕಾಂಗ್ರೆಸ್ ಪಕ್ಷ ಅದನ್ನು ಅಲ್ಲಗಳೆದಿಲ್ಲ ಎಂದು ತಿಳಿಸಿದರು.

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಈ ಕಾಯ್ದೆ ತರಲಾಗಿದೆ. ಗತಿಶಕ್ತಿ ಯೋಜನೆಯಡಿ ಬೇರೆ ಬೇರೆ ಉದ್ದೇಶಕೆ ₹85 ಲಕ್ಷ ಕೋಟಿ ಹೂಡಿಕೆಯ ವಿಭಿನ್ನ ಯೋಜನೆಗಳು ಮಂಜೂರಾಗಿವೆ. ʼವಿಬಿ-ಜಿ ರಾಮ್ ಜಿʼ ಇಲ್ಲವಾದರೆ ಅವೆಲ್ಲ ಹಾಗೇ ಬಿದ್ದಿರುತ್ತಿದ್ದವು ಎಂದರು ಜೋಶಿ.

*ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಸಾಧ್ಯ?:*

ಮನರೇಗಾದಲ್ಲಿ 100 ದಿನ ಇದ್ದ ಕೂಲಿ ಕೆಲಸವನ್ನು ʼವಿಬಿ-ಜಿ ರಾಮ್ ಜಿʼಯಲ್ಲಿ 125 ದಿನಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಹಿಂದೆ ಕೂಲಿ ಪಾವತಿಗೆ ನಿಗದಿತ ಕಾಲಾವಧಿಯೇ ಇರಲಿಲ್ಲ. ಈಗ 14 ದಿನದಲ್ಲಿ ಕೊಡಬೇಕು; ಇಲ್ಲವೇ ದಂಡ ಹಾಕುತ್ತಾರೆ ಎಂದು ಹೇಳಿದರು.

ಅನುಷ್ಠಾನಕ್ಕೆ ತಂದ ಕಾಮಗಾರಿ ನಿರ್ವಹಣೆಗೆ ಇದರಡಿ ಅವಕಾಶವಿದೆ. ಇವತ್ತು ಮಾಡುವುದು, ನಾಳೆ ಮರೆತುಬಿಡುವ ಪದ್ಧತಿಯಲ್ಲ. ನೀರಾವರಿ, ರಸ್ತೆ, ಶಾಲಾ ಕಟ್ಟಡ ಮಾಡಿದ್ದರೆ ಇಂತಿಷ್ಟು ವರ್ಷ ನಿರ್ವಹಣೆ ಮಾಡಬೇಕೆಂಬ ಸೂಚನೆ ಇರುತ್ತದೆ. ವಿಕಸಿತ ಗ್ರಾ.ಪಂ. ಯೋಜನೆ ತಯಾರಿಸಿ ʼವಿಕಸಿತ್ ಭಾರತ್ ರೂರಲ್ ಇನ್‍ಫ್ರಾಸ್ಟ್ರಕ್ಚರ್ʼ ಅಡಿ ಸೇರಿಸುತ್ತಾರೆ. ಇದರಲ್ಲಿ ಕಾಮಗಾರಿ ಗುಣಮಟ್ಟ ಮತ್ತು ಎಷ್ಟು ಕೆಲಸ ಎಂಬುದಕ್ಕೆ ಆದ್ಯತೆ ಕೊಡುತ್ತೇವೆ ಎಂದರು.

*6 ತಿಂಗಳಿಗೊಮ್ಮೆ ಸೋಷಿಯಲ್ ಆಡಿಟ್‌:

ಇನ್ನು ಮುಂದೆ ಆರು ತಿಂಗಳಿಗೊಮ್ಮೆ ಸೋಷಿಯಲ್ ಆಡಿಟ್‌ ನಡೆಯಲಿದೆ. ಮೊದಲು ಇದನ್ನು ಸಾಕ್ಷ್ಯವಾಗಿ ಪರಿಗಣಿಸುತ್ತಿರಲಿಲ್ಲ. ಇನ್ನು ಮುಂದೆ ಈ ವರದಿಯನ್ನು ಡಿಜಿಟಲ್ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಯಾವುದೇ ದೂರು-ಅಹವಾಲುಗಳಿದ್ದಲ್ಲಿ ತನಿಖೆ ನಡೆಸಿ ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ಪಾರದರ್ಶಕತೆ ತಂದಿದ್ದೇವೆ ಎಂದು ಜೋಶಿ ತಿಳಿಸಿದರು.

ಕೆಲಸವೇ ನಡೆಯದೇ ಹಣ ಪಾವತಿಸಿದ ಪ್ರಕರಣಗಳು ಪಶ್ಚಿಮ ಬಂಗಾಲದ 19 ಜಿಲ್ಲೆಗಳಲ್ಲಿ ಪತ್ತೆಯಾಗಿದ್ದು, ಹಣ ದುರ್ಬಳಕೆ ಕಾರಣಕ್ಕಾಗಿ ಅಲ್ಲಿ ಯೋಜನೆಯೇ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು ಎಂದು ಗಮನ ಸೆಳೆದ ಸಚಿವರು, 2025-26ರಲ್ಲಿ 23 ರಾಜ್ಯಗಳಲ್ಲಿ ಮೇಲ್ವಿಚಾರಣೆ ನಡೆಸಿದ ವೇಳೆ ಅದೆಷ್ಟೋ ಯೋಜನೆಗಳು ಇರಲೇ ಇಲ್ಲ; ಆದ ವೆಚ್ಚಕ್ಕೆ-ಕೆಲಸಕ್ಕೆ ತಾಳಮೇಳವೇ ಇರಲಿಲ್ಲ ಎಂದರು.

ಈ ಹಿಂದೆ ಡಿಜಿಟಲ್ ಇ ಪಾವತಿ ಶೇ.37ರಷ್ಟಿತ್ತು. ದುಡ್ಡು ಹಾಗೇ ಕೈಯಲ್ಲಿ ಕೊಡುತ್ತಿದ್ದರು. ನಾವು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು  ಶೇ.99ಕ್ಕೆ ತಲುಪಿಸಿದ್ದು, ನಾವು 125 ದಿನಕ್ಕೆ ನಮ್ಮ ಮೊತ್ತ ಹೆಚ್ಚಿಸುತ್ತೇವೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಜಾಸ್ತಿ ಹಣ ಸಿಗಲಿದೆ. ನೀರು, ಶೌಚಗೃಹ, ಇತರ ಅವಶ್ಯಕತೆ ಆಧರಿಸಿ ಯೋಜನೆ ರೂಪಿಸಲು ಗ್ರಾಮ ಪಂಚಾಯಿತಿಗೆ ವಿಶೇಷ ಅಧಿಕಾರ ಇರಲಿದೆ. ʼವಿಬಿ-ಜಿ ರಾಮ್ ಜಿʼಯಲ್ಲಿ ವಾರಕ್ಕೊಮ್ಮೆ ಎಷ್ಟು ಕೆಲಸವಾಗಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕಿದೆ. ಇದರಿಂದ ನಿಮಗೇನು ಸಮಸ್ಯೆ? ಎಂದು ಪ್ರಶ್ನಿಸಿದರು.

ಮೂರು ವರ್ಷದಲ್ಲಿ ಗ್ರಾಮಸಭೆಗಳ ಸೋಷಿಯಲ್ ಆಡಿಟ್‍ನಲ್ಲಿ 10.51 ಲಕ್ಷ ದೂರುಗಳು ಬಂದಿವೆ. ನಮಗೆ ಕೂಲಿ ಸಿಕ್ಕಿಲ್ಲ; ನಮ್ಮಲ್ಲಿ ಕೆಲಸ ಆಗಿಲ್ಲ; ದುಡ್ಡು ಹೊಡೆದಿದ್ದಾರೆ ಎಂಬ ದೂರುಗಳಿವೆ. ಹಾಗಾಗಿ ಇದೀಗ ಮೊಬೈಲ್ ಟ್ರ್ಯಾಕಿಂಗ್, ಜಿಪಿಎಸ್ ಟ್ರ್ಯಾಕ್ ಮಾಡಿದ್ದು, ಕಾಂಗ್ರೆಸ್ಸಿಗರಿಗೇನು ಸಮಸ್ಯೆ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

*ಸಿಎಂಗೆ ಬುದ್ಧಿ ಬೇಡವೇ?:*

ಹಳೆ ಕಲ್ಲು ಹೊಸ ಬಿಲ್ ಎನ್ನುವಂತೆ ಎಲ್ಲ ಕಡೆ ನಡೆದಿದೆ. 100 ದಿನಗಳ ಕಾಲ ಕೆಲಸ ಕೊಡಬೇಕಾದ ದಲಿತ ಮಹಿಳೆಯೊಬ್ಬರ ಹೆಸರಿನಲ್ಲಿ ದುಡ್ಡು ಹೊಡೆದಿದ್ದರು. ಸಿದ್ದರಾಮಯ್ಯರ ಮೊದಲ ಅವಧಿಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ದುಡ್ಡು ಹೊಡೆದ ಇಂಥ ಸಾವಿರ ಉದಾಹರಣೆಗಳಿವೆ. ಇದರಲ್ಲಿ ಬದಲಾವಣೆ, ಪಾರದರ್ಶಕತೆ ಬೇಡವೇ? ರಾಹುಲ್ ಗಾಂಧಿ ಅವರಿಗಂತೂ ಬುದ್ಧಿಯಿಲ್ಲ. ʼವಿಬಿ-ಜಿ ರಾಮ್ ಜಿʼ ವಿರೋಧಿಸಲು ನಿಮಗೂ ಬುದ್ಧಿ ಬೇಡವೇ ಸಿದ್ದರಾಮಯ್ಯನವರೇ? ಎಂದು ಸಿಎಂಗೆ ಚಾಟಿ ಬೀಸಿದರು ಜೋಶಿ.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಇದ್ದರು.

*ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ*

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿ ಕುಟುಂಬದ ಅಣತಿಯಂತೆ ನಿಷ್ಕ್ರಿಯವಾಗಿರುವ ಪತ್ರಿಕೆಗಾಗಿ ರಾಜ್ಯದ ಖಜಾನೆಯನ್ನೇ ಲೂಟಿ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಅಸ್ಥಿತ್ವದಲ್ಲಿರದ ಹಾಗೂ ದೇಶದಲ್ಲಿರುವ ರಾಷ್ಟ್ರೀಯ ಪತ್ರಿಕೆಗಳನ್ನು ಹೊರಗಿಟ್ಟ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನ್ಯಾಷನಲ್ ಹೆರಾಲ್ಡ್‌ಗೆ ಜಾಹೀರಾತು ಹಣವನ್ನು ಏಕೆ ನೀಡಿದೆ? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ಶೇ.69ರಷ್ಟು ಓದುಗರನ್ನು ಹೊಂದಿರುವ ಪತ್ರಿಕೆಗಳನ್ನು ಬಿಟ್ಟು ರಾಜ್ಯದಲ್ಲಿ‌ ನಿಷ್ಕ್ರಿಯವಾಗಿರುವ ದಿನಪತ್ರಿಕೆಗೆ ಹಣ ನೀಡಿದ್ದು, ವಿಶ್ವಾಸಾರ್ಹ ದಿನಪತ್ರಿಕೆಗಳಿಗೆ ಏನೂ ಸಿಗದಂತೆ ಲೂಟಿ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ‘ನಕಲಿ’ ಗಾಂಧಿ ಕುಟುಂಬವನ್ನು ಮತ್ತಷ್ಟು ‌ಓಲೈಸಲು ಮಾಡಿದ ಪಿತೂರಿಯೇ? ಇದು ಎಂದಿರುವ ಜೋಶಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನಿನ ಮೇಲೆ ಬಿಡುಗಡೆಯಾದಾಗ, ಕಾಂಗ್ರೆಸ್ ಸರ್ಕಾರ 2024–25ರಲ್ಲಿ ₹1 ಕೋಟಿ ಬದಲಿಗೆ ₹ 3 ಕೋಟಿ ಹಣ ನೀಡಿತು ಎಂದಿದ್ದಾರೆ. 

ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣವಿಲ್ಲ. ಆದರೆ, ನಿಷ್ಕ್ರಿಯವಾದ ಒಂದು ಪತ್ರಿಕೆ ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಹಣ ಪಡೆಯುತ್ತದೆ. ಇದು‌ ದುರಾಡಳಿತದ ಪರಮಾವಧಿ ಮತ್ತು ಅಧಿಕಾರ ದುರುಪಯೋಗ, ಹಗಲು ದರೋಡೆಯೇ ಸರಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

Related Articles

Back to top button