Cancer Hospital 2
Bottom Add. 3

ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಹಕ್ಕೊತ್ತಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ವೀರಶೈವ ಲಿಂಗಾಯತ ಅತ್ಯಂತ ಹೀನಾಯ ಸ್ಥಿತಿಗೆ ಬಂದಿದೆ.
ಮುಂದಿನ ದಿನಗಳಲ್ಲೂ ಈ ಪರಿಸ್ಥಿತಿ ಬದಲಾಗದಿದ್ದರೆ, ನಮ್ಮ ಸಮಾಜಕ್ಕೆ ಸುರಕ್ಷತೆಯ ದೊಡ್ಡ ಪ್ರಶ್ನೆ ಕಾಡಲಿದೆ. ಹಾಗಾಗಿ ವೀರಭದ್ರನಂತೆ ನಾವು ವೀರರಾಗಿ ಹೋರಾಡದಿದ್ದರೆ, ನಾವು ಅಭದ್ರರಾಗಲಿದ್ದೇವೆ. ಹಾಗಾಗಿ ವೀರರಾಗುವ ಕುರಿತು ಇಂದೇ ಸಂಕಲ್ಪ ಮಾಡೋಣ ಎಂದು ಶ್ರೀಶೈಲ ಪೀಠದ ಡಾ.ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.

ನಗರದ ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಮತ್ತು ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಎರಡೂ ಒಂದೇ ಎಂಬ ಸಂದೇಶವನ್ನೂ ಸಾರಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ.ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಸಾನ್ನಿಧ್ಯ ವಹಿಸಿ ಮಾತನಾಡಿದರು.

“ನಮ್ಮ ಸಮುದಾಯ ಬಲಿಷ್ಠವಾದರೆ, ಸಮಾಜದ ಮಠಗಳು ಬಲಿಷ್ಠವಾಗುತ್ತವೆ. ಒಂದುವೇಳೆ ಸಮುದಾಯ
ಹಿಂದೆ ಬಿದ್ದರೆ, ಮಠ–ಮಾನ್ಯಗಳಿಗೂ ಹಿನ್ನಡೆಯಾಗಲಿದೆ. ಈ ಬಗ್ಗೆ ಎಲ್ಲರೂ ಆಲೋಚಿಸಬೇಕು. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳು ರಾಜ್ಯದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ, ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಕೇವಲ 17 ಉಪ ಪಂಗಡಗಳಷ್ಟೇ ಸೇರ್ಪಡೆಯಾಗಿವೆ. ಇನ್ನೂಳಿದ ಉಪ ಪಂಗಡಗಳನ್ನು ಕೇಂದ್ರದ ಪಟ್ಟಿಯಲ್ಲಿ ಸೇರಿಸಬೇಕು. ಈಗ ನಮಗೆ ಆಗಿರುವ ಸರಿಪಡಿಸಲೇಬೇಕು” ಎಂದು ಒತ್ತಾಯಿಸಿದರು.

“ನ್ಯಾ.ಮಂಡಲ ಆಯೋಗದ ವರದಿ ಜಾರಿಗೊಳಿಸುವ ವೇಳೆ, ಯಾವುದೋ ಕಾರಣಕ್ಕಾಗಿ ನಮ್ಮ ಸಮುದಾಯದ ಸೇರ್ಪಡೆ ಬಿಟ್ಟು ಹೋಗಿರಬಹುದು. ಆದರೆ, ಬೇರೆ ಸಮುದಾಯಗಳನ್ನು ಯಾವ ಮಾನದಂಡದ ಆಧಾರದಲ್ಲಿ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಿದರೋ, ಆ ಎಲ್ಲ ಮಾನದಂಡಗಳು ನಮ್ಮ ಸಮುದಾಯಕ್ಕೂ ಅನ್ವಯವಾಗುತ್ತವೆ. ಹಾಗಾಗಿ ಅವುಗಳನ್ನು ಸೇರಿಸುವುದು ಅನಿವಾರ್ಯ” ಎಂದು ಪ್ರತಿಪಾದಿಸಿದರು.

“ನ್ಯಾ.ಚಿನ್ನಪ್ಪ ಆಯೋಗದ ವರದಿ ಪ್ರಕಾರ, ಬಲಿಜ, ಒಕ್ಕಲಿಗ, ಜಾಟ ಸಮುದಾಯಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ನಮ್ಮ ಸಮುದಾಯದ ಇವೆಲ್ಲ ಸಮುದಾಯಗಳಿಗಿಂತ ಕನಿಷ್ಠ ಮಟ್ಟದಲ್ಲಿದೆ. ಹೀಗಿದ್ದರೂ ನಮ್ಮ ಸಮುದಾಯ ಕಡೆಗಣಿಸಿ ಅನ್ಯಾಯ ಮಾಡಲಾಗಿದೆ. ಹಾಗಾಗಿ ನಮ್ಮನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಶಿಫಾರಸನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಬೇಕು. ಒಂದುವೇಳೆ ನಮ್ಮನ್ನು ಕಡೆಗಣಿಸಿದರೆ ವ್ಯತಿರಿಕ್ತ ಪರಿಣಾಮ ಎದುರಿಸಲು ಸಿದ್ಧವಾಗಬೇಕು” ಎಂದು ಎಚ್ಚರಿಕೆ ಕೊಟ್ಟರು.

“ಈಗಿನ ರಾಜ್ಯ ಸರ್ಕಾರ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿರುವ ಕುರಿತು ವೀರಶೈವ ಲಿಂಗಾಯತ ಸಮುದಾಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದಾರೆ. ಅದು ಗಂಭೀರವಾದ ವಿಚಾರ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡಬೇಕು” ಎಂದು ಒತ್ತಾಯಿಸಿದರು.

“ಸಮಾಜಕ್ಕೆ ಸಿಗಬಹುದಾದ ಸೌಕರ್ಯಗಳ ಬೇಡಿಕೆ ಕುರಿತು ವೀರಶೈವ ಲಿಂಗಾಯತ ಗುರುಪೀಠವಾಗಲಿ, ವಿರಕ್ತಮಠವಾಗಲಿ ಯಾವುದೇ ಸ್ವಾಮಿಗಳ ಅಥವಾ ಯಾವುದೇ ಮುಖಂಡರ ವಿಚಾರದಲ್ಲಿ ಭಿನ್ನಮತ ಇಲ್ಲ. ನಾವೆಲ್ಲರೂ ಹೋರಾಟ ಮಾಡುವುದು ಸಮುದಾಯದ ಹಿತಕ್ಕಾಗಿ” ಎಂದು ಸ್ಪಷ್ಟಪಡಿಸಿದರು.

“ಇತ್ತೀಚೆಗೆ ನ್ಯಾ.ಕಾಂತರಾಜ ವರದಿ ಜಾರಿಗೊಳಿಸುವ ಕುರಿತು ಚಿಂತನೆ ನಡೆದಿತ್ತು. ಅದರಿಂದ ಸಮಾಜಕ್ಕೆ ಮಾರಕವಾಗಲಿದೆ. ಈ ಹಿನ್ನೆಲೆಯಲ್ಲಿ ಆ ವರದಿಯನ್ನು ಪರಿಷ್ಕರಿಸದೆ, ಜಾರಿಗೊಳಿಸಿದರೆ ಅದಕ್ಕೂ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸಬೇಕು” ಎಂದು ಎಚ್ಚರಿಕೆ ಕೊಟ್ಟರು.

ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರನ್ನು ನಾಶಗೊಳಿಸುವ ಕಾರ್ಯ ನಡೆಯಿತು. ಅದಾಗ್ಯೂ ಸಮಾಜ ಸುಮ್ಮನಿದ್ದದ್ದು ಸರಿಯಲ್ಲ. ವೀರಶೈವ ಲಿಂಗಾಯತ ಮಠಗಳ ಮೇಲೆ ಮತ್ತು ಸ್ವಾಮಿಗಳ ದಾಳೀ
ನಡೆದಾಗಲೂ ಸುಮ್ಮನಿದ್ದದ್ದು ಸರಿಯಲ್ಲ. ಸಮಾಜದ ರಾಜಕಾರಣಿಗಳು, ಕಲಾವಿದರು, ಅಧಿಕಾರಿಗಳು ಮತ್ತು ಮುಖಂಡರನ್ನು ನಾಶಮಾಡುವ ಕೆಲಸ ನಡೆಯಿತು. ನಮ್ಮವರನ್ನು ನಾವು ರಕ್ಷಣೆ ಮಾಡಿಕೊಳ್ಳಲಾಗದಷ್ಟು ದುರ್ಬಲರಾಗುತ್ತಿದ್ದೇವೆ. ಇದನ್ನು ಸಮಾಜದ ಜನರು ಅರ್ಥ ಮಾಡಿಕೊಳ್ಳಬೇಕು. ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ಮುಖ್ಯವಾಗಿ ಹೆಣ್ಣು ಮಕ್ಕಳೂ ಈ ಜಾಗೃತಿ ಕಾಯಕಕ್ಕೆ ಮುಂದಾಗಬೇಕು. ನಿಮ್ಮ ಪತಿ, ಮಕ್ಕಳನ್ನು ಸಮಾಜದ ಕಾರ್ಯಕ್ಕೆ ಕಳುಹಿಸಬೇಕು” ಎಂದು ಕರೆ ನೀಡಿದರು.

“ಇಷ್ಟೊಂದು ದೊಡ್ಡ ಸಮುದಾಯವಿದ್ದರೂ ನಿರಭಿಮಾನಿಗಳಾಗಿದ್ದಾರೆ. ಸಮುದಾಯ ಹಾಳಾಗುತ್ತಿದೆ. ಸಮಾಜಪ್ರಜ್ಞೆಯೇ ಇಲ್ಲದಂತಾಗಿದೆ. ಸಮಾಜಕ್ಕೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸ್ಥಾನ ದೊರಕಿಸಿಕೊಳ್ಳುವುದಕ್ಕಾಗಿ ನಮ್ಮ ಸಮುದಾಯದ ಶಾಸಕರು, ಸಚಿವರು, ಸಂಸದರು ಮತ್ತು ರಾಜಕೀಯ ಮುಖಂಡರು ಸದನಗಳಲ್ಲಿ ಮಾತನಾಡಬೇಕು. ಹೋರಾಟದಲ್ಲಿ ಸಫಲತೆ
ಕಾಣಲು ಪ್ರಯತ್ನಪಡಬೇಕು. ಇಲ್ಲದಿದ್ದರೆ ಅಂತಹ ಮುಖಂಡರನ್ನು ಬಹಿಷ್ಕರಿಸಬೇಕಾದೀತು” ಎಂದು ಎಚ್ಚರಿಕೆ ಕೊಟ್ಟರು.

“ಹೋರಾಟ ಉಗ್ರವಾಗಬೇಕು. ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಅಗತ್ಯಬಿದ್ದರೆ ಸಮಾಜದ ಬಾಂಧವರೆಲ್ಲ ಬೆಂಗಳೂರಿನತ್ತ ಮುಖಮಾಡಬೇಕು ಎಂದ ಅವರು, ಸ್ವಾಮಿಗಳು, ಮಠಾಧೀಶರು ತಮ್ಮ ಸ್ಥಾನಮಾನಗಳನ್ನು ಮರೆತು ಸಮಾಜಕ್ಕಾಗಿ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಇದನ್ನು ನೀವೆಲ್ಲರೂ ಅರ್ಥೈಸಿಕೊಳ್ಳಬೇಕು” ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ, ಸರ್ಕಾರದ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾದೇಶಿಕ ಆಯುಕ್ತ ಡಾ.ಎಂ.ಜಿ.ಹಿರೇಮಠ ವಿಷಯ ಮಂಡಿಸಿ, “ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಉಪ ಪಂಗಡಗಳ ಸೇರ್ಪಡೆಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಹೆಚ್ಚಿನ
ಸೌಕರ್ಯ ಸಿಗುತ್ತವೆ” ಎಂದು ತಿಳಿಸಿದರು.

ಒಬಿಸಿ ಹೋರಾಟದ ಬಗ್ಗೆ ವಿವರಿಸಿದ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಡಾ.ಶೇಖರ ಸಜ್ಜನರ, “ಕೇಂದ್ರದ ಒಬಿಸಿ ಪಟ್ಟಿಯಲ್ಲಿ 1990ರಲ್ಲೇ ಜಾರಿಗೆ ಬಂದಂತೆ ದೇಶದ ಎಲ್ಲ ಜಾತಿಗಳ ಬಡವರಿಗೆ ಸೌಲಭ್ಯ ಸಿಗುತ್ತಿವೆ. ದೇಶದ 142 ಕೋಟಿ ಜನಸಂಖ್ಯೆ ಪೈಕಿ 58.40 ಕೋಟಿ ಜನರು ಒಬಿಸಿ ಪಟ್ಟಿಯ ವ್ಯಾಪ್ತಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಒಬಿಸಿ ಪಟ್ಟಿಗೆ ಸೇರದಿರುವ ನಮ್ಮ ಸಮುದಾಯದ ಉಪ ಪಂಗಡಗಳನ್ನು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ, ಕೇಂದ್ರಕ್ಕೆ ಶಿಫಾರಸು ಮಾಡಿ ಆ ಪಟ್ಟಿಗೆ ಸೇರ್ಪಡೆಗೊಳಿಸಬೇಕು” ಎಂದು
ಒತ್ತಾಯಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುರಗೋಡದದ ಶ್ರೀ ನೀಲಕಂಠ ಮಹಾಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್‌ ಸದಸ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ, ಡಾ.ವಿ.ಐ.ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಅಶೋಕ ಪೂಜಾರಿ, ವಿನಯ ನಾವಲಗಟ್ಟಿ,
ವಿರೂಪಾಕ್ಷಿ ಮಾಮನಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ, ಸುಭಾಷ ಪಾಟೀಲ, ಇತರರಿದ್ದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಿತ್ತೂರು ಕರ್ನಾಟಕ ಪ್ರದೇಶದ ಅಧ್ಯಕ್ಷ ಉಮೇಶ ಬಾಳಿ ಸ್ವಾಗತಿಸಿದರು.

ಇದಕ್ಕೂ ಮುಂಚೆ ರಾಣಿ ಚನ್ನಮ್ಮನ ವೃತ್ತದಿಂದ ಕಾಕತಿವೇಸ್‌ ಮೂಲಕ ವೀರಭದ್ರೇಶ್ವರ ಮೆರವಣಿಗೆ ಸಂಚರಿಸಿ, ಗಾಂಧಿ ಭವನ ತಲುಪಿತು.

Bottom Add3
Bottom Ad 2

You cannot copy content of this page