ವೀರಶೈವ ಲಿಂಗಾಯತ ಸಮಾಜ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಮಾಜ – ಲಕ್ಷ್ಮಿ ಹೆಬ್ಬಾಳ್ಕರ್


ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವೀರಶೈವ ಲಿಂಗಾಯತ ಸಮಾಜ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿರುವ ಸಮಾಜ. ಈ ಸಮುದಾಯದಲ್ಲಿ ಹುಟ್ಟಿದ್ದೆ ನನ್ನ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಲಿಂಗಾಯತ ಸಮಾಜ ಸರ್ವರಲ್ಲೂ ಸದಾಶಯವನ್ನೇ ಬಯಸುತ್ತದೆ. ಬಸವಣ್ಣನವರು ಕಂಡ ಕನಸಿಗೆ ಪೂರಕವಾಗಿ ನಡೆಯುತ್ತಿದೆ. ಈ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ನಮ್ಮ ಸಮಾಜ ಬೇರೆ ಸಮಾಜಕ್ಕೆ ಗೌರವ ಕೊಡುತ್ತಾ ಬಂದಿದೆ. ವೀರಶೈವ ಲಿಂಗಾಯತ ಸಮಾಜದವರು ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಕಡಿಮೆ ಇದ್ದೇವಿ. ಆದರೂ ಅಲ್ಲಿನ ಜನ ಬಹುದೊಡ್ಡ ಅಂತರದಿಂದ ನನ್ನನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ನಮ್ಮ ಸಮಾಜ ನೀಡಿರುವ ಸಂಸ್ಕೃತಿಯೇ ಕಾರಣ. ನಮ್ಮ ಸಂಸ್ಕೃತಿ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಸಚಿವನಾಗಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಉತ್ತಮ ಹೆಸರು ತರುವಂತ ಕೆಲಸ ಮಾಡುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
*ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ: ಬಸವರಾಜ ಬೊಮ್ಮಾಯಿ*
*ರಾಜಕೀಯ ಮೀರಿ ಒಗ್ಗಟ್ಟಾದರೆ ಸಮಾಜದ ಸಮಸ್ಯೆಗಳಿಗೆ ಪರಿಹಾರ: ಬಸವರಾಜ ಬೊಮ್ಮಾಯಿ*

ಈ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹಲವಾರು ಸವಾಲುಗಳನ್ನು ಎದುರಿಸಿದೆ. ಸವಾಲನ್ನು ಎದುರಿಸುವವರು ನಾಯಕರಾಗುತ್ತಾರೆ. ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜದ ನೂತನ ಶಾಸಕರು ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಯ ನಂತರ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ ಮಾಡುವುದು ಸಂಪ್ರದಾಯ. ಅದು ಪರಮ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ನಾವು ಒಂದು ಕಡೆ ಸೇರಿ ಪರಮಪೂಜ್ಯರ ನೇತೃತ್ವದಲ್ಲಿ ಸನ್ಮಾನಕ್ಕೆ ಒಳಪಡುವುದರ ಸಂದೇಶ ಏನೆಂದರೆ ಪರಮಪೂಜ್ಯರ ಹಾಗೂ ಸಮಾಜದ ರಕ್ಷಾ ಕವಚ ಮತ್ತು ಜವಾಬ್ದಾರಿಯ ಮಾಲೆ ಅಂತ ನನ್ನ ಭಾವನೆ. ರಾಜಕಾರಣಿ ಗಳಿಗೆ ಹಲವಾರು ಸವಾಲುಗಳಿವೆ. ಕೇವಲ ಚುನಾವಣೆ ಒಂದೆ ಸವಾಲಲ್ಲ. ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ. ನಾವು ವಿಶ್ವಗುರು ಬಸವಣ್ಣನವರ ಅವರ ಕಾಯಕವೇ ಕೈಲಾಸ ತತ್ವ ಪಾಲಿಸಬೇಕು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆವಾಸಹ್ಯ ಪಡಬೇಡ ಅನ್ನುವುದನ್ನು ಪಾಲಿಸಿದರೆ ಸಾಕು ಎಂದರು.
ನಮಗೆ ಚರಿತ್ರೆ ಇದೆ ಚಾರಿತ್ರ್ಯ ಬೇಕಿದೆ. ಆಚಾರ್ಯರಿದ್ದಾರೆ ಆಚರಣೆ ಬೇಕಿದೆ. ಚಾರಿತ್ರ್ಯ ಪರಮಪೂಜ್ಯರ ಆಶೀರ್ವಾದದಿಂದ ದೊರೆಯುತ್ತದೆ. ಒಬ್ಬ ನಾಯಕರು ಮಠಗಳನ್ನು ವಿರೋಧ ಮಾಡಿದ್ದರು, ಕೊಳ್ಳೆಗಾಲದಿಂದ ಹಿಡಿದು ಬೀದರ ವರೆಗೂ ನಮ್ಮ ಸಮಾಜ ಸಾವಿರಾರು ವರ್ಷಗಳಿಂದ ಮಠಗಳು ಶಿಕ್ಷಣ, ದಾಸೋಹ ಮಾಡಿಕೊಂಡು ಬಂದಿವೆ. ಸರ್ಕಾರ ಇಲ್ಲದ ಸಂದರ್ಭದಲ್ಲಿ ಶಿಕ್ಷಣ ನೀಡುತ್ತ ಬಂದಿವೆ. ಒಗ್ಗಟ್ಟಿನಲ್ಲಿ ಬಲ ಇದೆ. ರಾಜಕೀಯ ಮೀರಿ ಒಗ್ಗಟ್ಟಾದರೆ ನಮ್ಮ ಮುಂದಿನ ಪೀಳಿಗೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ವಿನಯ ಕುಲಕರ್ಣಿ, ಅಶೋಕ ಪಟ್ಟಣ, ಗಣೇಶ ಹುಕ್ಕೇರಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ನೂತನ ಶಾಸಕರುಗಳನ್ನು ಅಭಿನಂದಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ