
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಪ್ರಸಿದ್ಧ ಅನಂತಪದ್ಮನಾಭ ದೇವಾಲಯದ ಬಬಿಯಾ ಮೊಸಳೆ ಸಾವನ್ನಪ್ಪಿರುವ ಘಟನೆ ಕುಂಬಳೆ ದೇವಸ್ಥಾನದಲ್ಲಿ ನಡೆದಿದೆ.
ತಿರುವನಂತಪುರದಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎಂದೇ ಕರೆಯಲ್ಪಡುವ ಮಂಗಳೂರು ಸಮೀಪದ ಕುಂಬಳೆ ಅನಂತಪದ್ಮನಾಭ ದೇವಸ್ಥಾನದ ಸಸ್ಯಹಾರಿ ಮೊಸಳೆ ಎಂದೇ ಪ್ರಸಿದ್ಧವಾಗಿದ್ದ ಬಬಿಯಾ ಇಹಲೋಕ ತ್ಯಜಿಸಿದೆ.
ಕಳೆದ 77 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿ ವಾಸವಾಗಿದ್ದ ಈ ಬೃಹತ್ ಮೊಸಳೆಗೆ ದೇವರ ನೈವೇದ್ಯವೇ ಆಹಾರವಾಗಿತ್ತು. ಕಲ್ಯಾಣಿಯಲ್ಲಿ ವಾಸವಾಗಿದ್ದ ಬಬಿಯಾ ಮೊಸಳೆ ಅನಂತಪದ್ಮನಾಭನ ಕಾವಲು ಕಾಯುತ್ತಿದೆ ಎಂದೇ ಜನರು ನಂಬಿದ್ದರು. ಬಬಿಯಾ ಮೊಸಳೆ ಪ್ರತಿನಿತ್ಯ ಎರಡು ಬಾರಿ ದೇವರ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿತ್ತು. ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿತ್ತು. ಈವರೆಗೂ ಬಬಿಯಾ ಮೊಸಳೆ ಯಾರಿಗೂ ಘಾಸಿಗೊಳಿಸಿದ, ನೋವುಂಟು ಮಾಡಿದ ಘಟನೆಯೇ ಇಲ್ಲ. ಹಾಗಾಗಿ ದೇವರ ಕಾವಲಾಗಿ ಬಂದಿರುವ ಮೊಸಳೆ ಎಂದೇ ಹೇಳಲಾಗಿತ್ತು.
ದೇವಸ್ಥಾನದ ಆವರಣದಲ್ಲಿ ಮೊಸಳೆಯ ಅಂತಿಮ ವಿಧಿವಿಧಾನ ನಡೆದಿದ್ದು, ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ.
ಮಂಗಳೂರಿನಿಂದ 39 ಕಿ.ಮೀ ದೂರದಲ್ಲಿ ಕುಂಬಳೆ ಸಮೀಪ ಬದಿಯಡ್ಕ ಮಾರ್ಗವಾಗಿ ನಾಲ್ಕು ಕಿ.ಮೀ ದೂರದಲ್ಲಿ ಅನಂತಪದ್ಮನಾಭ ದೇವಾಲಯವಿದೆ. ವಿಶಾಲವಾದ ಪ್ರದೇಶದಲ್ಲಿ ಕೆರೆಯ ಮಧ್ಯಭಾಗದಲ್ಲಿ ಅನಂತಪದ್ಮನಾಭ ವಿರಾಜಮಾನನಾಗಿದ್ದಾನೆ. ಈ ದೇವಸ್ಥಾನದ ಕಲ್ಯಾಣಿಯಲ್ಲಿ ಬೃಹತ್ ಮೊಸಳೆ ಬಬಿಯಾ ವಾಸವಾಗಿತ್ತು. ಸಾಮಾನ್ಯವಾಗಿ ಮೊಸಳೆ ಮಾಂಸಾಹಾರಿಗಳು ಆದರೆ ಬಬಿಯಾ ಮೊಸಳೆ ಮಾತ್ರ ಸಸ್ಯಹಾರಿಯಾಗಿತ್ತು ಎಂಬುದೇ ವಿಶೇಷ.
ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್