Kannada NewsKarnataka News

ರಸ್ತೆ ಅಪಘಾತಕ್ಕೆ ವಾಹನಗಳು ಕಾರಣವಲ್ಲ, ಮತ್ತೇನು?

ರಸ್ತೆ ಅಪಘಾತಕ್ಕೆ ವಾಹನಗಳು ಕಾರಣವಲ್ಲ, ಮತ್ತೇನು?

 ಪ್ರಗತಿವಾಹಿನಿ ಸುದ್ದಿ, ಅಥಣಿ – ರಸ್ತೆ ಅಪಘಾತಗಳು ವಾಹನಗಳ ಸಮಸ್ಯೆಯಿಂದ ಸಂಭವಿಸುವುದಿಲ್ಲ. ಅವುಗಳು ಸವಾರರ ನಿರ್ಲಕ್ಷ್ಯದಿಂದಾಗಿ ಸಂಭವಿಸುತ್ತವೆ. ಪ್ರತಿ ವರ್ಷ ಲಕ್ಷಾಂತರ ಅಪಘಾತಗಳು ಸಂಭವಿಸುತ್ತವೆ. ಇದರಿಂದಾಗಿ ನಾವು ನಮ್ಮ ದೇಶದ ಅತ್ಯಮೂಲ್ಯ ಆಸ್ತಿಯಾದ ಯುವಕರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅಥಣಿ ಪೋಲೀಸ್ ಠಾಣೆ ಡಿವಾಯ್‌ಎಸ್‌ಪಿ ಎಸ್ ವಿ ಗಿರೀಶ್ ಹೇಳಿದರು. 

ಅವರು ಸ್ಥಳೀಯ ಕೆ ಎ ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ನೂತನ ರಸ್ತೆ ಕಾನೂನು ಹಾಗೂ ನಿಯಮಗಳು-೨೦೧೯ ವಿಷಯದ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಇಂದಿನ ಯುವಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ಬಳಸುತ್ತಿದ್ದು ಅವರಿಗೆ ಸಂಚಾರಿ ನಿಯಮಗಳೇ ತಿಳಿದಿರುವುದಿಲ್ಲ. ಅದಲ್ಲದೆ ಮುಖ್ಯವಾಗಿ ವಾಹನ ಸವಾರರಿಗೆ ಬೇಕಾದಂತಹ ಡ್ರೈವಿಂಗ್ ಲೈಸನ್ಸ್ ಹಾಗೂ ಇನ್ಶೂರೆನ್ಸ್ ಇಲ್ಲದಿರುವುದು ದುರಂತವಾಗಿದೆ. ಅದಕ್ಕಾಗಿ ಎಲ್ಲ ವಿದ್ಯಾರ್ಥಿಗಳು ತಮ್ಮ ಅವಶ್ಯಕ ಡ್ರೈವಿಂಗ್ ಲೈಸನ್ಸ್ ಹಾಗೂ ಇನ್ಶೂರೆನ್ಸ್ ಮಾಡಿಸಿಕೊಳ್ಳಿ, ಸುಗಮ ಪ್ರಯಾಣ ಮಾಡಿ ಎಂದು ತಿಳಿಸಿದರು.
ಮತ್ತೋರ್ವ ಉಪನ್ಯಾಸಕರಾದ ಪಿಎಸ್‌ಆಯ್ ಉಸ್ಮಾನ ಅವಟಿ ಅವರು ಮಾತನಾಡುತ್ತಾ ರಸ್ತೆಯ ಸುರಕ್ಷತೆಗಳ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಮುಖ್ಯವಾಗಿ ಅಥಣಿಯು ಜನನಿಬಿಡ ಪ್ರದೇಶವಾಗಿದ್ದು ನಗರಕ್ಕೆ ಆಗಮನ ಮತ್ತು ನಿರ್ಗಮನ ರಸ್ತೆಯು ಒಂದೆ ಇರುವುದರಿಂದಾಗಿ ಎಲ್ಲ ವಾಹನಗಳು ಇದೇ ಮಾರ್ಗದಿಂದ ಚಲಿಸುತ್ತದೆ ಹಾಗಾಗಿ ಇಲ್ಲಿ ಅಪಘಾತಗಳು ಹೆಚ್ಚಿಗೆ ಸಂಭವಿಸುತ್ತವೆ. ಅದಕ್ಕಾಗಿ ತಾವೆಲ್ಲರೂ ರಸ್ತೆಯ ನಿಯಮಗಳನ್ನು ಹಾಗೂ ಸುರಕ್ಷಾಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸುರಕ್ಷತೆಯಿಂದಿರಿ ಎಂದರು.

ಹಲವಾರು ಕಾರಣಗಳಿಂದಾಗಿ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ತಿಳಿಯದೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸಲು ಇಂತಹ ಉಪನ್ಯಾಸ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ಅಭಿಪ್ರಾಯಪಟ್ಟರು. ಅದಲ್ಲದೆ ಅನೇಕ ರಸ್ತೆಯ ನಿಯಮಗಳನ್ನು ಪಾಲಿಸದೇ ಇರುವಂತಹವರಿಗೆ ಇತ್ತೀಚಿಗೆ ಸರಕಾರ ಜಾರಿಗೆ ತಂದ ದೊಡ್ಡ ಮೊತ್ತದ ಹಣದ ದಂಡವನ್ನೂ ಕೂಡ ವಿಧಿಸಲಾಗುತ್ತಿದೆ. ಅದಕ್ಕಾಗಿ ತಾವೆಲ್ಲರೂ ನಿಯಮಗಳನ್ನು ತಿಳಿದು ಪಾಲಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್ ಎಮ್ ದೇವರಡ್ಡಿ,  ಉಪ ಪ್ರಾಚಾರ್ಯ ಗಿರೀಶ್ ಕುಲಕರ್ಣಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರೋಬೇಶನರಿ ಪಿ ಎಸ್ ಆಯ್ ಆನಂದ ಸಿಕೆ, ಅರ್ಥಶಾಸ್ತ್ರ ವಿಭಾಗದ ವಿ ಎಮ್ ದೇಶಪಾಂಡೆ, ಎಸ್ ಎ ಗಡಗೆ, ರಾಜ್ಯಶಾಸ್ತ್ರ ವಿಭಾಗದ ಎಸ್ ಎಸ್ ಕಟಗೇರಿ, ಅರ್ಚನಾ ಪೂಜಾರಿ, ರಾಜಕುಮಾರ ಕಾಂಬಳೆ, ವಿಠೋಬಾ ತೋರತ್, ಸಂತೋಷ ಬಡಕಂಬಿ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪಾ ಮಾಳಿ ನಿರೂಪಿಸಿದರು, ಎಸ್ ಎ ಗಡಗೆ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button