ಪ್ರಗತಿವಾಹಿನಿ ಸುದ್ದಿ: ಲಿಸ್ಬೆನ್; ಐಶಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಬರೋಬ್ಬರಿ 4 ಸಾವಿರ ಐಶಾರಾಮಿ ಕಾರುಗಳು ಸುಟ್ಟು ಭಸ್ಮವಾಗಿರುವ ಘಟನೆ ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಮಹಾಸಾಗರದ ವ್ಯಾಪ್ತಿಯಲ್ಲಿ ನಡೆದಿದೆ. ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು ಬೆಂಕಿ ನಂದಿಸಲು ಹರಸಾಹಸಪಡಲಾಗುತ್ತಿದೆ.
ಫೆಲಿಸಿಟಿ ಏಸ್ ಹೆಸರಿನ ಹಡಗು ಜರ್ಮನಿಯ ವೋಕ್ಸ್ವ್ಯಾಗನ್ ಕಾರು ತಯಾರಿಸುವ ಸ್ಥಳವಾದ ಎಮ್ಡೆನ್‌ನಿಂದ ಹೊರಟಿತ್ತು. ಹಡಗಿನಲ್ಲಿ ವೋಕ್ಸ್ ವ್ಯಾಗನ್ ಅಲ್ಲದೆ ಆಡಿ, ಬೆಂಟ್ಲೀಸ್, ಎಲೆಕ್ಟ್ರಿಕ್ ಕಾರುಗಳು ಸೇರಿದಂತೆ 4 ಸಾವಿರ ಕಾರುಗಳನ್ನು ಅಮೇರಿಕದ ಡಾವಿಸ್‌ವಿಲ್ಲೆಗೆ ಕೊಂಡೊಯ್ಯಲಾಗುತ್ತಿತ್ತು. ಹಡಗು ಪೋರ್ಚುಗಲ್‌ನ ಅಝೋರೋಸ್ ದ್ವೀಪದ ಬಳಿ ಸಾಗುತ್ತಿದ್ದಾಗ ಹಡಗಿನೊಳಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಕ್ಯಾಬಿನ್ ಸಿಬ್ಬಂದಿ ತಕ್ಷಣ ಸಮೀಪದ ಅಝೋರಿಯನ್ ಬಂದರಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಗ್ನಿ ಶಾಮಕಗಳನ್ನು ಹೊತ್ತ ಬೋಟ್‌ಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಹಡಗಿನಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಜ್ವಾಲೆ ತೀವ್ರವಾಗಿದ್ದು ಬೆಂಕಿ ಆರಿಸುವ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುವಂತಾಗಿದೆ ಎಂದು ಅಝೋರೋಸ್ ಬಂದರಿನ ಕ್ಯಾಪ್ಟನ್ ಜಾವೋಸ್ ಮೆಂಡೀಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಡಗಿನಲ್ಲಿ ಕಾರುಗಳನ್ನು ಇಡಲಾಗಿದ್ದ ಉಗ್ರಾಣ ಸಂಪೂರ್ಣ ಭಸ್ಮವಾಗಿದೆ. ಆದರೆ ಹಡಗಿನ ಇಂಧನ ಟ್ಯಾಂಕ್‌ನಿAದ ಬೆಂಕಿಯ ಜ್ವಾಲೆ ಇನ್ನೂ ದೂರದಲ್ಲಿದೆ. ಲಕ್ಷಾಂತರ ಲೀಟರ್ ಇಂಧನ ಇರುವ ಟ್ಯಾಂಕ್‌ಗೆ ಬೆಂಕಿ ವ್ಯಾಪಿಸಿದರೆ ಮತ್ತಷ್ಟು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುತ್ತಿದ್ದರೂ ಹೆಚ್ಚು ಯಶಸ್ಸು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಹೊತ್ತಿದ್ದು ಹೇಗೆ ?
ಹಡಗಿನಲ್ಲಿ ಲೀಥಿಯಂ ಬ್ಯಾಟರಿಗಳನ್ನು ಹೊಂದಿರುವ ಎಲೆಕ್ಟಿçಕ್ ಕಾರುಗಳನ್ನು ಸಹ ಕೊಂಡೊಯ್ಯಲಾಗುತ್ತಿತ್ತು. ಯಾವುದಾದರೂ ಕಾರಿನ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ತನಿಖೆಯ ಬಳಿಕವೇ ಸತ್ಯ ಗೊತ್ತಾಗಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಯೋಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ