ಹಿರಿಯ ಅಭಿನೇತ್ರಿ ಲೀಲಾವತಿ ಅವರದ್ದು ಹೃದಯವಂತಿಕೆಯ ಜೀವ: ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಹಿರಿಯ ಅಭಿನೇತ್ರಿ ಲೀಲಾವತಿ ಅವರದ್ದು ಹೃದಯವಂತಿಕೆಯ ಜೀವ. ಅವರ ಮನೋಜ್ಞ ಅಭಿನಯದ ಮೂಲಕ ನಮ್ಮ ನಡುವೆ ಎಂದೆಂದಿಗೂ ಜೀವಂತವಾಗಿ ಇರಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹಿರಿಯ ನಟಿ ಡಾ.ಎಂ.ಲೀಲಾವತಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, “ಹಿರಿಯ ನಟಿ ಲೀಲಾವತಿ ಅವರ ನೂರಾರು ದಾನ- ಧರ್ಮ ಕೆಲಸಗಳು ನಮ್ಮ ನಡುವೆ ಬದುಕಿವೆ. ಅವರೇನು ದೊಡ್ಡ ಶ್ರೀಮಂತರಲ್ಲ, ಆದರೆ ಮಾನವೀಯತೆಯ ಸ್ವರೂಪದಲ್ಲಿ ಶ್ರೀಮಂತರು. ಅವರ ಬಳಿ ಇದ್ದಿದ್ದೇ ಎಂಟತ್ತು ಎಕರೆ ಭೂಮಿ. ಅದರಲ್ಲೇ ಜನರಿಗೆ ಮತ್ತು ಪಶುಗಳಿಗೆ ಇಬ್ಬರಿಗೂ ಅನುಕೂಲವಾಗುವ ರೀತಿ ಆಸ್ಪತ್ರೆ ಕಟ್ಟಿಸಿದ್ದರು” ಎಂದು ಹೇಳಿದರು.
ಲೀಲಾವತಿ ಅವರು ಕಳೆದ 40 ವರ್ಷಗಳಿಂದಲೂ ನನಗೆ ಆತ್ಮೀಯರಾಗಿದ್ದರು. ಬಂಧೀಖಾನೆ ಸಚಿವನಾಗಿದ್ದ ವೇಳೆ ಜೈಲಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿಗಾಗಿ ನನ್ನ ಬಳಿ ಬಂದಿದ್ದರು. ಆಗ ಸಾಕಷ್ಟು ಹೊತ್ತು ಅವರ ದುಃಖ, ದುಮ್ಮಾನಗಳನ್ನು ಹಂಚಿಕೊಂಡಿದ್ದರು ಎಂದು ಶಿವಕುಮಾರ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸರ್ವಪಲ್ಲಿ ರಾಧಾಕೃಷ್ಣನ್, ಶ್ರೀಮತಿ ಇಂದಿರಾಗಾಂಧಿ ಅವರ ಕಾಲದಿಂದ ತಾವು ನಟಿಸಿದ ಚಿತ್ರ, ದೊರೆತ ಪುರಸ್ಕಾರ, ಸಹ ಕಲಾವಿದರ ಬಗ್ಗೆ ಪ್ರೀತಿ, ವಿಶ್ವಾಸ, ಚಿತ್ರರಂಗದಲ್ಲಿ ಅನುಭವಿಸಿದ ಏಳು- ಬೀಳು, ಮಗ ವಿನೋದ್ ರಾಜ್ ಯಶಸ್ಸಿಗೆ ಪಟ್ಟ ಕಷ್ಟ, ಅವರ ವಿರುದ್ದ ದೊಡ್ಡ ಪಿತೂರಿ ನಡೆದು ಬೆಳವಣಿಗೆಗೆ ಅಡ್ಡಿ ಮಾಡಿದ ಸಂಗತಿ ಸೇರಿದಂತೆ ಅನೇಕ ವಿಚಾರಗಳನ್ನು ನನ್ನ ಬಳಿ ಹಂಚಿಕೊಂಡಿದ್ದರು. ಈ ಎಲ್ಲಾ ವಿಚಾರಗಳು ಅವರ ನಿಧನದ ವೇಳೆ ನನಗೆ ನೆನಪಾಗುತ್ತಿದೆ. ಅವರು ಚರ್ಚೆ ಮಾಡಿದ ವಿಚಾರಗಳನ್ನು ನಾನು ಬಹಿರಂಗಗೊಳಿಸಲು ಹೋಗುವುದಿಲ್ಲ. ಅದರಿಂದ ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂದರು.
ಲೀಲಾವತಿ ಅವರು ನಿಧನರಾದ ಸುದ್ದಿ ಬೆಂಗಳೂರು ತಲುಪುವಾಗ ತಿಳಿಯಿತು. ಅವರ ಆರೋಗ್ಯ ಕ್ಷೀಣಗೊಂಡಿದ್ದ ಕಷ್ಟದ ಸಮಯದಲ್ಲಿಯೇ ನಮ್ಮ ಮನೆಗೆ ಬಂದು, ಅವರು ಕಟ್ಟಿಸಿದ್ದ ಪಶು ವೈದ್ಯಕೀಯ ಚಿಕಿತ್ಸಾಲಯ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ನೀಡಿದ್ದರು. ಅವರ ಕೊನೆಯ ಆಸೆಯಂತೆ ತೆಲಂಗಾಣ ಚುನಾವಣೆಯ ಒತ್ತಡದ ನಡುವೆಯೂ ಆಸ್ಪತ್ರೆ ಉದ್ಘಾಟನೆ ನೆರವೇರಿಸಿದ್ದೆ ಎಂದು ತಿಳಿಸಿದರು.
ಅವರ ಬಗ್ಗೆ ಇತರೇ ವಿಚಾರಗಳನ್ನು ಸದನದ ವೇಳೆ ಪ್ರಸ್ತಾವನೆ ಬಂದಾಗ ಮಾತನಾಡುತ್ತೇನೆ. ಅವರ ವಿಚಾರಗಳು ಸದನದ ದಾಖಲೆಗೆ ಹೋಗಬೇಕು ಎಂದರು.
ಲೀಲಾವತಿ ಅವರ ಅಂತ್ಯಕ್ರಿಯೆಗೆ ಸರ್ಕಾರ ತಯಾರಿ ನಡೆಸುತ್ತಿದೆಯೇ ಎಂದು ಕೇಳಿದಾಗ “ಈಗಾಗಲೇ ನಮ್ಮ ಶಾಸಕರಾದ ಶ್ರೀನಿವಾಸ್ ಅವರು ಸ್ಥಳೀಯ ಅಧಿಕಾರಿಗಳ ಬಳಿ ಮಾತನಾಡಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅವರ ಮಗ ವಿನೋದ್ ರಾಜ್ ಅವರು ಅಂತ್ಯಕ್ರಿಯೆ ಮಾಡುವುದು ಎಲ್ಲಿ ಎಂದು ತಿಳಿಸಿದ ನಂತರ ಮುಂದಿನ ಕೆಲಸಗಳನ್ನು ಮಾಡಲಾಗುವುದು” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ