ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಮಾಜಿ ಸಿಎಂ ಬಿ.ಎಸ್.ವೈ ಪುತ್ರ ಬಿ.ವೈ ವಿಜಯೇಂದ್ರಗೆ ಟಿಕೆಟ್ ನೀಡುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ವಿಜಯೇಂದ್ರಗೆ ಎಂಎಲ್ ಸಿ ಸ್ಥಾನದ ಬಗ್ಗೆ ಹೈಕಮಾಂಡ್ ಗೆ ಉಭಯ ಸಂಕಟ ಆರಂಭವಾಗಿದೆ ಎನ್ನಲಾಗುತ್ತಿದೆ.
ಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿ ನಾಯಕರು ಕಳುಹಿಸಿದ ಅಭ್ಯರ್ಥಿಗಳ ಹೆಸರಿನ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನೀಡುವುದು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆ ಎಂಬ ಚಿಂತನೆಯಲ್ಲಿ ಹೈಕಮಾಂಡ್ ನಾಯಕರು ಇದ್ದಾರೆ ಎನ್ನಲಾಗುತ್ತಿದೆ.
ವಿಜಯೇಂದ್ರಗೆ ಎಂಎಲ್ ಸಿ ಸ್ಥಾನ ನೀಡಿದರೆ ವಿಪಕ್ಷಗಳಿಗೂ ಅಸ್ತ್ರವಾದಂತಾಗುತ್ತದೆ. ಬಿಜೆಪಿಯೇ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುವ ಮೂಲಕ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂಬ ಆರೋಪಕ್ಕೆ ಸಿಲುಕಬೇಕಾಗುತ್ತದೆ.
ಒಂದು ವೇಳೆ ವಿಜಯೇಂದ್ರಗೆ ಟಿಕೆಟ್ ನೀಡದಿದ್ದಲ್ಲಿ ಚುನಾವಣೆ ಹೊತ್ತಲ್ಲಿ ಬಿಎಸ್ ವೈ ಮುನಿಸಿಕೊಳ್ಳುವ ಆತಂಕ ಇದೆ. ಹೀಗಾಗಿ ಹೈಕಮಾಂಡ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದು, ವಿಜಯೇಂದ್ರಗೆ ಎಂ ಎಲ್ ಸಿ ಸ್ಥಾನ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಿಧಾನ ಪರಿಷತ್ ಚುನಾವಣೆಗೆ ನಾಳೆಯೇ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಈ ನಿಟ್ಟಿನಲ್ಲಿ ಇಂದು ಸಂಜೆ ಅಥವಾ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.
ಭೀಕರ ಅಪಘಾತ; 8 ಕಾರ್ಮಿಕರು ಸ್ಥಳದಲ್ಲೇ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ