ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೆಪ್ಟೆಂಬರ್ 13ರಿಂದ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೊದಲ ಅಧಿವೇಶನ ಆರಂಭವಾಗಲಿದ್ದು, ಈ ಅಧಿವೇಶಕ್ಕೆ ಜಾರಕಿಹೊಳಿ ಸಹೋದರರು ಗೈರಾಗುತ್ತಾರಾ?
ಸಿಡಿ ಪ್ರಕರಣ ಬಹಿರಂಗ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತನಿಖೆಯನ್ನು ಸರ್ಕಾರ ಎಸ್ ಐಟಿ ಗೆ ವಹಿಸಿದೆ. ಆದರೆ ಪ್ರಕರಣ ಈವರೆಗೂ ಬಗೆಹರಿದಿಲ್ಲ. ಕೇಸ್ ವಿಚಾರಣೆಯು ಕೋರ್ಟ್ ನಲ್ಲಿ ಬಾಕಿ ಇದೆ. ಇನ್ನೊಂದೆಡೆ ಸಿಎಂ ಬದಲಾವಣೆಯಾಗಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಹೋದರ ಬಾಲಚಂದ್ರ ಜಾರಕಿಹೊಳಿಗಾದರೂ ಕ್ಯಾಬಿನೇಟ್ ನಲ್ಲಿ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ. ಹೀಗಾಗಿ ಸರ್ಕಾರದ ನಡೆಯಿಂದ ಜಾರಕಿಹೊಳಿ ಸಹೋದರರು ಅಸಮಾಧಾನಗೊಂಡಿದ್ದಾರೆ.
ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾಗಿದ್ದ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಬೇಸರ ಜಾರಕಿಹೊಳಿ ಸಹೋದರರಿಗಿದ್ದು, ಈ ಎಲ್ಲಾ ಕಾರಣಗಳಿಂದಾಗಿ ಅಧಿವೇಶನಕ್ಕೆ ಸಾಂಕೇತಿಕವಾಗಿ ಒಂದು ದಿನ ಹಾಜರಾಗಿ ಬಳಿಕ ಗೈರಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ