ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಪರಿಷತ್ ಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬೆಳಗಾವಿಯಲ್ಲಿ ಟಿಕೆಟ್ ಗಾಗಿ ಲಾಭಿ ಜೋರಾಗಿದೆ.
ಕಾಂಗ್ರೆಸ್ ಟಿಕೆಟ್ ಬಯಸಿ 7-8 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ ಹಟ್ಟಿಹೊಳಿಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯಿದ್ದು, ಈಗಾಗಲೆ ವರಿಷ್ಠರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಚುನಾವಣೆ ಸಿದ್ಧತೆಯನ್ನು ಭರದಿಂದ ನಡೆಸಿದ್ದಾರೆ. ಕ್ರಿಯಾಶೀಲ ನಾಯಕರಾಗಿರುವ ಅವರಿಗೆ ಪಕ್ಷಬೇಧ ಮರೆತು ಜಿಲ್ಲೆಯಲ್ಲಿ ನಾಯಕರು ಕರೆ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ.
ಮಾಜಿ ಸದಸ್ಯ ವೀರಕುಮಾರ್ ಪಾಟೀಲ್ ಕೂಡ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಕಳೆದ ಬಾರಿ ಸ್ಪರ್ಧಿಸಿ ಸ್ವ ಪಕ್ಷೀಯರಿಂದಲೇ ಪರಾಭವಗೊಂಡಿದ್ದರು. ಆಗ, ರಮೇಶ ಜಾರಕಿಹೊಳಿ ಕಟ್ಟಾ ಬೆಂಬಲಿಗರಾಗಿರುವ ವಿವೇಕರಾವ್ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಶಹಜಹಾನ್ ಡೊಂಗರಗಾವ್, ಡಾ. ಎನ್.ಎ.ಮಗದುಮ್ಮ, ಸುನೀಲ್ ಹನಮಣ್ಣವರ್, ಕಿರಣ್ ಸಾಧುನವರ್, ವಿನಯ ನಾವಲಗಟ್ಟಿ ಸೇರಿ 7- 8 ಜನರು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಚನ್ನರಾಜ್ ಹಟ್ಟಿಹೊಳಿ, ವಿನಯ ನಾವಲಗಟ್ಟಿ ಮತ್ತು ಸುನೀಲ ಹನಮಣ್ಣವರ್ ಅರ್ಜಿಯನ್ನು ಮಾತ್ರ ಕೆಪಿಸಿಸಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಗೊತ್ತಾಗಿದೆ.
ಬೆಳಗಾವಿ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಕ್ಷೇತ್ರದ ಎರಡು ಸ್ಥಾನಕ್ಕಾಗಿ ಚುನಾವಣೆ ನಡೆಯಲಿದ್ದು, ಈ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲು ಕಾಂಗ್ರೆಸ್ ಒಲವು ತೋರಿದೆ.
ಬಿಜೆಪಿಯಲ್ಲಿ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ 4 -5 ಜನರು ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆೆ. ಬಿಜೆಪಿ ಒಂದೇ ಸ್ಥಾನಕ್ಕೆ ಸ್ಪರ್ಧಿಸಲಿದೆಯೋ ಎರಡೂ ಸ್ಥಾನಕ್ಕೆ ಸ್ಪರ್ಧಿಸಲಿದೆಯೋ ಖಚಿತವಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ