Kannada NewsLatest

ಮೇಲ್ಮನೆ ಚುನಾವಣೆ: ಬೆಳಗಾವಿಯಲ್ಲಿ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧೆ: ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಿಗೆ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭವಾಗಲಿದೆ. ಹೀಗಾಗಿ, ಒಂದು ಕ್ಷೇತ್ರಕ್ಕೆ ಮಾತ್ರ ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದರು.

ಒಂದು ಸ್ಥಾನ ಗೆಲ್ಲಲು ಸುಮಾರು 2200 ಮತಗಳು ಬೇಕು. ಕಾಂಗ್ರೆಸ್ ನಿಂದ ಇದಕ್ಕಿಂತ ಹೆಚ್ಚಿನ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ, ಒಂದು ಸ್ಥಾನ ಗೆಲ್ಲಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

ಟಿಕೆಟ್ ಗಾಗಿ 8 ಆಕಾಂಕ್ಷಿಗಳಿಂದ ಅರ್ಜಿ:

ಕಾಂಗ್ರೆಸ್ ನಿಂದ ಟಿಕೆಟ್ ಗಾಗಿ ಜಿಲ್ಲೆಯಲ್ಲಿ ಒಟ್ಟು 8 ಆಕಾಂಕ್ಷಿಗಳುಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿನ ಮೂವರು ಹಾಗೂ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಿಂದ ಐವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೇ 14 ರಂದು ಕೆಪಿಸಿಸಿಯಿಂದ ಶಾಸಕರು ಹಾಗೂ ಮಾಜಿ ಶಾಸಕರ ಸಭೆ ಕರೆಯಲಾಗಿದೆ. ಟಿಕೆಟ್ ಆಕಾಂಕ್ಷಿಗಳು ಕೂಡ ಭಾಗವಹಿಸಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು, ತೀರ್ಮಾನ ಕೈಗೊಳ್ಳಲಾಗುವುದು. ಗೆಲ್ಲುವವರಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ, ಅವರು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಸದ್ಯ ಚುನಾವಣೆ ಘೊಷಣೆಯಾಗಿದೆ. ಅವರಿಗೆ ಈಗ ಮೇಲ್ಮನೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶವಿದೆಯೋ? ಇಲ್ಲವೋ? ಅಥವಾ ಯಾವ ಕ್ರಮಕೈಗೊಳ್ಳಬೇಕು? ಎಂಬುದರ ಕುರಿತು ಜಿಲ್ಲಾಧಿಕಾರಿಗಳು ತಿಳಿಸಬೇಕು. ಈ ಬಗ್ಗೆ ತಾಂತ್ರಿಕವಾಗಿಯೂ ಪರಿಶೀಲಿಸಬೇಕು ಎಂದು ಸತೀಶ ಪ್ರತಿಕ್ರಿಯಿಸಿದರು.

ನೇರವಾಗಿ ಕ್ರಮಕೈಗೊಳ್ಳಿ:

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನವರಿದ್ದಾರೆ, ಬಿಜೆಪಿಯವರಿದ್ದಾರೆ ಎಂದು ಆರೋಪ-ಪ್ರತ್ಯಾರೋಪ ಮಾಡುವ ಬದಲು ನೇರವಾಗಿ ಕ್ರಮಕೈಗೊಳ್ಳಿ ಎಂದು ಸತೀಶ ಒತ್ತಾಯಿಸಿದರು. ಆರೋಪ ಮಾಡುತ್ತಾ ಕೂರುವುದರಿಂದ ಸರ್ಕಾರ, ಪೊಲೀಸರು ಇದ್ದು ವ್ಯರ್ಥವಾಗುತ್ತದೆ. ಪೊಲೀಸರ ಕೈಯಲ್ಲಿ ಅಧಿಕಾರವಿದೆ. ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಕೂಡಲೇ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಯುವ ನಾಯಕ ಮಹಮ್ಮದ್ ನಲಪಾಡ್, ಉಮರ್ ನಲಪಾಡ್ ಅವರೊಂದಿಗೆ ಹ್ಯಾಕರ್ ಶ್ರೀಕಿ ಅವರಿಗೆ ಸ್ನೇಹ ಇರಬಹುದು ಅಥವಾ ಕ್ಲಾಸ್ ಮೇಟ್ ಗಳು ಇರಬಹುದು. ಅದಕ್ಕೆ ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸುವುದು ಸರಿಯಲ್ಲ. ಹಾಗೊಂದು ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ನಲಪಾಡ್ ಗೆ ಸಂಪರ್ಕವಿದ್ದರೇ ಈ ಬಗ್ಗೆ ತನಿಖೆ ಮಾಡಿ, ಕ್ರಮಕೈಗೊಳ್ಳಲಿ ಎಂದು ಹೇಳಿದರು.

ಚುನಾವಣೆಯ ಅನುಭವಗಳನ್ನು ಹಂಚಿಕೊಂಡಿದ್ದೇನೆ:

ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೋ ಕುರಿತು ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಉಪಚುನಾವಣೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಯ ಅನುಭವಗಳನ್ನು ಹಂಚಿಕೊಳ್ಳಲು ಆ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 37 ಸೀಟುಗಳನ್ನು ಹೇಗೆ ಗಳಿಸಿತು ಎಂದು ವಿಡಿಯೋದಲ್ಲಿ ವಿಶ್ಲೇಷಣೆ ಮಾಡಿದ್ದೇನೆ ಎಂದರು.

ಬಿಜೆಪಿಯ ಸ್ಥಳೀಯ ಮುಖಂಡರು ತಮ್ಮ ಕಸರತ್ತಿನಿಂದ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದಂತೆ ಬಿಂಬಿಸಿಕೊಂಡರು. ನಮ್ಮ ಮೇಲೂ ಆರೋಪ ಮಾಡಿದರು. ಅವರೇನು ಸಾಹಸ ಮಾಡಿಲ್ಲ. ಕಾಂಗ್ರೆಸ್ ಹಾಗೂ ಎಂಇಎಸ್ ವೋಟುಗಳು ವಿಭಜನೆ ಆಗಿದ್ದರಿಂದ ಬಿಜೆಪಿ ಇಲ್ಲಿ ಜಯಗಳಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ್ ಹಾಜರಿದ್ದರು.
ಬುಟ್ಟಿಯಲ್ಲಿ ಹಾವಿದೆ ಬಿಡ್ತೀವಿ ಅಂತಾ ಯಾರಿಗೆ ಹೆದರಿಸ್ತಿದ್ದೀರಿ? ಕಾಂಗ್ರೆಸ್ ನಾಯಕರಿಗೆ ಅರಗ ಜ್ಞಾನೇಂದ್ರ ತಿರುಗೇಟು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button