ಪ್ರಗತಿವಾಹಿನಿ ಸುದ್ದಿ; ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳಿಗೆ ಎರಡು ದಿನದ ಕಾರ್ಯಾಗಾರ ಆಯೋಜನೆ ಮಾಡಿದೆ. ಬುಧವಾರದಿಂದ ಎರಡು ದಿನಗಳ ಕಾಲ ಮೈಸೂರಿನಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಅಕ್ಟೋಬರ್ 19 ಮತ್ತು 20ರಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಹಿಂದೆ ಬಿಡದಿಯಲ್ಲಿ ನಡೆದ ಜನತಾ ಪರ್ವ ಕಾರ್ಯಾಗಾದಲ್ಲಿ ನೀಡಲಾಗಿದ್ದ ಟಾಸ್ಕ್ ಪೂರ್ಣಗೊಳಿಸಿದ್ದಾರೆಯೇ? ಎಂದು ಪರಿಶೀಲನೆ ನಡೆಯಲಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿರುವ 126 ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆ, ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸುವ ಕುರಿತು ಕಾರ್ಯಾಗಾರದಲ್ಲಿ ಸೂಚನೆಗಳನ್ನು ನೀಡಲಾಗುತ್ತದೆ.
ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, “ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಇದೆ. ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಹೀಗಾಗಿ ಕ್ಷೇತ್ರವಾರು ಆಕಾಂಕ್ಷಿಗಳನ್ನು ಕರೆದು ಮಾತನಾಡುತ್ತಿದ್ದೇವೆ” ಎಂದು ಹೇಳಿದರು.
ಪಂಚರತ್ನ ರಥಯಾತ್ರೆಗೆ ಚಾಲನೆ:
ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ಯಾತ್ರೆಗೆ ನವೆಂಬರ್ 1ರಂದು ಎಚ್. ಡಿ. ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ಟಿಕೆಟ್ ಆಕಾಂಕ್ಷಿಗಳಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ.
ಪಂಚರತ್ನ ಯಾತ್ರೆಗೆ ಈಗಾಗಲೇ ವಾಹನಗಳು ಸಿದ್ದವಾಗುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಶಕ್ತಿ ಏನೆಂದು ಈ ಯಾತ್ರೆಯ ಮೂಲಕ ತೋರಿಸಲು ಪಕ್ಷ ಬಯಸಿದೆ. ಬಿಜೆಪಿಯ ಜನಸಂಕಲ್ಪ ಯಾತ್ರೆ ಮತ್ತು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ನಡುವೆ ಜೆಡಿಎಸ್ ರಥಯಾತ್ರೆಯನ್ನು ಆರಂಭಿಸಲಿದೆ.
ಪಂಚರತ್ನ ಯಾತ್ರೆ ಮೂಲಕ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಯಾವ ಕಾರ್ಯಕ್ರಮ ರೂಪಿಸುತ್ತೇವೆ ಎಂದು ತಿಳಿಸಲಾಗುತ್ತದೆ. ಆಗಸ್ಟ್ ತಿಂಗಳಿನಲ್ಲಿಯೇ ಈ ಯಾತ್ರೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಭಾರೀ ಮಳೆಯ ಕಾರಣ ಯಾತ್ರೆ ಮುಂದೂಡಲಾಗಿತ್ತು.
ಸ್ವಲ್ಪನಾದರೂ ಆತ್ಮಸಾಕ್ಷಿ ಎಂಬುದಿರಬೇಕು; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಎಂ
https://pragati.taskdun.com/politics/bidarbjp-janasankalpa-yatrecm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ