LatestUncategorized

*ಕಷ್ಟದ ದಿನಗಳನ್ನು ಸ್ಮರಿಸಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ವಜ್ಞ ಒಂದು ಮಾತು ಹೇಳಿದ್ದಾರೆ, ನಿಂಬೆಗಿಂತ ಶ್ರೇಷ್ಠವಾದ ಹುಳಿಯಿಲ್ಲ, ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ ಇಲ್ಲ, ಈಶ್ವರನಿಗಿಂತ ಶ್ರೇಷ್ಠವಾದ ದೇವರಿಲ್ಲ, ನಂಬಿಕೆಗಿಂತ ಶ್ರೇಷ್ಠವಾದ ಗುಣವಿಲ್ಲ’ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೀದಿ ವ್ಯಾಪಾರಿ ಸಂಘಟನೆಗಳ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನೀವು ಬೀದಿಯಲ್ಲಿ ವ್ಯಾಪಾರ ಮಾಡುತ್ತಿರುವ ಜನರು ಕಾಂಗ್ರೆಸ್ ಪಕ್ಷ ಮಾತ್ರ ನಿಮಗೆ ನೆಮ್ಮದಿ ಬದುಕು ನೀಡಲಿದೆ ಎಂದು ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೀರಿ. ನಿಮಗೆ ಕೋಟಿ ನಮನಗಳು. ನಿಮ್ಮ ಜನಸಂಖ್ಯೆ ಕಮ್ಮಿ ಇಲ್ಲ. ನೀವು ಸ್ವಂತ ಅಂಗಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನೀವು ಕೆಟ್ಟ ದಾರಿ ಹಿಡಿಯದೇ, ಸಮಾಜದಲ್ಲಿ ಗೌರವಯುತವಾಗಿ, ಸ್ವಾಭಿಮಾನದ ಬದುಕು, ಬದುಕಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ನಾಯಕರು ನಿಮ್ಮ ನೋವನ್ನು ತಿಳಿಸಿದ್ದಾರೆ. ಆಮೂಲಕ ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ನಿಮಗೆ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದರು.

ಈ ದೇಶಕ್ಕೆ ನೀವೆಲ್ಲರೂ ಆಸ್ತಿ. ಮಾಲ್ ಗಳಲ್ಲಿ, ಎಸಿ ಮಳಿಗೆಗಳಲ್ಲಿ ಖರೀದಿ ಮಾಡುವುದು ಒಂದು ಕಡೆಯಾದರೆ, ಅದೇ ಗುಣಮಟ್ಟದ ಆಹಾರ, ವಸ್ತುಗಳನ್ನು ಅವರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ಬರುತ್ತಿದ್ದೀರಿ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾತ್ರಿ ವೇಳೆ ಬೀದಿ ಬದಿ ವ್ಯಾಪಾರಿಗಳ ಬಳಿ ಹೋಗಿ ಚಿತ್ರಾನ್ನ ತಿಂದು ಬದುಕುತ್ತಿದ್ದೇವು. ಆಗ 1 ರೂ.ಗೆ ಒಂದು ಪ್ಯಾಕೆಟ್ ಚಿತ್ರಾನ್ನ ಸಿಗುತ್ತಿತ್ತು. ನಾವು ಎಷ್ಟೇ ಎತ್ತರಕ್ಕೆ ಬೆಳೆದರು ನಾವು ಬಂದ ಹಾದಿ ಮರೆಯಬಾರದು ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.

ಕಾಂಗ್ರೆಸ್ ಪಕ್ಷ ಈ ವರ್ಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಸದಾ ನೊಂದು ಬೆಂದ ಬಡವರ ಪರವಾದ ಪಕ್ಷ. ನಿಮ್ಮ ಬದುಕನ್ನು ದಿನ ಬಡ್ಡಿ ನಿಯಂತ್ರಣದಿಂದ ತಪ್ಪಿಸಬೇಕು. ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿ, ನಿಮಗೆ ಬಂಡವಾಳಶಾಹಿಗಳ ಕಾಟ ತಪ್ಪಿಸಿದರು. ಆಮೂಲಕ ಜನರಿಗೆ ಸುಲಭ ಸಾಲ ಸೌಲಭ್ಯ ಕಲ್ಪಿಸುವಂತೆ ಮಾಡಿದರು. ಈಗ ಬ್ಯಾಂಕ್ ಗಳು 10-15 ಸಾವಿರದಷ್ಟು ಸಣ್ಣ ಸಾಲ ನೀಡುವ ವ್ಯವಸ್ಥೆ ಮಾಡಿಕೊಡಲಾಗಿದೆ.

ಇನ್ನು ದೇಶದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ನಿವೇಶನ ಇಲ್ಲದವರಿಗೆ ನಿವೇಶನ ಕೊಟ್ಟಿದ್ದು, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕಾಯ್ದೆ ತಂದಿದ್ದರೆ, ಆಹಾರ ಬದ್ಧತೆ ಕಾಯ್ದೆ ಮೂಲಕ ನಿಮಗೆ 5-7 ಕೆ.ಜಿ ಅಕ್ಕಿ ನೀಡುತ್ತಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಇದೇ ಕಾರಣಕ್ಕೆ ನಾವು ನಿಮ್ಮ ಮುಂದೆ ಧೈರ್ಯವಾಗಿ ನಿಂತಿದ್ದೇವೆ.

ರಂಗಸ್ವಾಮಿ ಅವರು ನಿಮ್ಮ ಸಮಸ್ಯೆಗಳ ಬಗೆಹರಿಸಲು ಒಂದು ಪಟ್ಟಿ ನೀಡಿದ್ದಾರೆ. ಇದರಲ್ಲಿ ಪ್ರಮುಖವಾದುದು, ಪಾಲಿಕೆ ಹಾಗೂ ಪೊಲೀಸರಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವುದು. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೋವಿಡ್ ಸಮಯದಲ್ಲಿ ನಾವು ನಿಮ್ಮ ಪರ ಧ್ವನಿ ಎತ್ತಿದ್ದೇವು. ವಲಸೆ ಕಾರ್ಮಿಕರಿಂದ ಸರ್ಕಾರ ಬಸ್ ಟಿಕೆಟ್ ದುಪ್ಪಟ್ಟು ಮಾಡಿ ಸುಲಿಗೆ ಮಾಡಲು ಮುಂದಾದಾಗ, ಈ ಕಾರ್ಮಿಕರು ದೇಶ ನಿರ್ಮಾತೃಗಳು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಿ ಎಂದು ನಾವು ಪಕ್ಷದ ವತಿಯಿಂದ 1 ಕೋಟಿ ಚೆಕ್ ನೀಡಿದೆವು. ನಂತರ ಉತ್ತರ ಕರ್ನಾಟಕದ ಭಾಗದ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಯಿತು.

ಇನ್ನು ಸಾಂಪ್ರದಾಯಿಕ ವೃತ್ತಿ ಮಾಡಿಕೊಂಡು ಬಂದಿರುವ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಕೆಲವರಿಗೆ ಒಂದಿಷ್ಟು ಹಣ ಕೊಟ್ಟು ಮುಗಿಸಿದರು. ರಂಗಸ್ವಾಮಿ ಅವರು ತಮ್ಮ ಬೇಡಿಕೆ ಪಟ್ಟಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ಸೇರ್ಪಡೆ ಮಾಡುತ್ತೇವೆ.

ನಿಮಗೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪಿಸಿದರೆ ನೀವು ಅಲ್ಲಿ ಹೋಗಲು ಸಿದ್ಧರಿಲ್ಲ. ಹೀಗಾಗಿ ನಗರದ ಸೌಂದರ್ಯ ಕಾಪಾಡಿ, ನಿಮಗೂ ರಕ್ಷಣೆ ಸಿಗಬೇಕು. ಇದನ್ನು ಯಾವ ರೀತಿ ಮಾಡಬೇಕು ಎಂದು ನಿಮ್ಮ ಜತೆಯೇ ಚರ್ಚೆ ಮಾಡಿ ನಿಮ್ಮ ವಾರ್ಡ್ ಗಳಲ್ಲಿ ನಿಮ್ಮ ವಿಶ್ವಾಸ ತೆಗೆದುಕೊಂಡು ಸಮಿತಿ ಜತೆ ಸಭೆ ಮಾಡಿ ಸಹಾಯ ಮಾಡಬೇಕು. ಇದಕ್ಕೆ ಕಾನೂನು ಚೌಕಟ್ಟನ್ನು ಕಾಂಗ್ರೆಸ್ ಕಟ್ಟಿಕೊಡಲಿದೆ.

ನಿಮ್ಮ ನೆಮ್ಮದಿಯ ಬದುಕಿಗಾಗಿ ನಿಮ್ಮ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ ಸಿಗಲು ಚುನಾವಣೆ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ನೀಡಲಾಗುವುದು.

ಈ ಜನರ ಸಮಸ್ಯೆ ಅರ್ಥ ಮಾಡಿಕೊಂಡು ಕಾರ್ಯಕ್ರಮ ರೂಪಿಸುತ್ತಿದೆ. ಕಳೆದ ಮೂರೂವರೆ ವರ್ಷ ಆಡಳಿತದಲ್ಲಿ ಸರ್ಕಾರ ಬಡವರಿಗಾಗಿ ಯಾವುದಾದರೂ ಒಂದು ಕಾರ್ಯಕ್ರಮದ ಕೊಟ್ಟಿದ್ದರೆ, ಕೋವಿಡ್ ಸತ್ತವರ ಕುಟುಂಬಕ್ಕೆ ಪರಿಹಾರ, ಆಸ್ಪತ್ರೆ ವೆಚ್ಚ ಭರಿಸುತ್ತೇವೆ, ಚಾಲಕರಿಗೆ ಸಹಾಯಧನ, ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದಿದ್ದರು. ಯಾರಿಗಾದರೂ ಅನುಕೂಲ ಆಯಿತಾ? ಸರ್ಕಾರ ಕೊಡುವ ಆಹಾರ ಸಾಮಾಗ್ರಿಗೆ ಶಾಸಕರು ತಾವು ಹಂಚುತ್ತಿದ್ದೇವೆ ಎಂದು ಅವರ ಫೋಟೋ ಹಾಕಿ ಹಂಚಿದರು.

ನಮ್ಮ ನಾಯಕರಾದ ರಾಮಲಿಂಗಾ ರೆಡ್ಡಿ, ಪದ್ಮಾವತಿ, ದೇವರಾಜ್, ಜಮೀರ್, ಕೃಷ್ಣ ಭೈರೆಗೌಡ ಸೇರಿದಂತೆ ಹಲವರು ತಮ್ಮ ಜೇಬಿನ ಹಣದಿಂದ ನಿಮಗೆ ನೆರವು ನೀಡಿದ್ದಾರೆ.

ಈಗ ನಾವು ಜನರ ಧ್ವನಿಯಾಗಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ನಾವು ನಿಮ್ಮ ನೋವು ಕೇಳಲು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಧ್ವನಿ ನಮ್ಮ ಧ್ವನಿ.

ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದ ಬೆಳಗಾವಿಯ ವೀರಸೌಧದಿಂದ ಯಾತ್ರೆ ಆರಂಭಿಸಿ ಅಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದೆವು. ಅದೇನೆಂದರೆ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ಆಮೂಲಕ ತಿಂಗಳಿಗೆ 1500 ರೂಪಾಯಿ ಉಳಿತಾಯ ಆಗಲಿದೆ.

ಇನ್ನು ಮಹಿಳೆಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅವರಿಗೆ ಮನೆ ನಡೆಸಲು ಸಮಸ್ಯೆ ಎದುರಾಗಿದೆ. ಹೀಗಾಗಿ ಅವರಿಗೆ ನೆರವಾಗಲು ಪ್ರತಿ ಮನೆಯೋಡತಿಗೆ ತಿಂಗಳಿಗೆ 2 ಸಾವಿರಾದಂತೆ ವರ್ಷಕ್ಕೆ 24 ಸಾವಿರ ಹಣ ನೀಡಲಾಗುವುದು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಹರಿಯಾಣದಲ್ಲಿ ಪಾದಯಾತ್ರೆ ಮಾಡುವಾಗ ನಾನು ಅಲ್ಲಿಗೆ ಹೋಗಿ ಅವರ ಜತೆ ಚರ್ಚೆ ಮಾಡಿದೆ. ನಂತರ ಪ್ರಿಯಾಂಕಾ ಗಾಂಧಿ ಅವರು ಈ ಯೋಜನೆ ಘೋಷಣೆ ಮಾಡಿದರು.

ಈ ಬೀದಿ ಬದಿ ವ್ಯಾಪಾರಿಗಳಲ್ಲಿ ಮಹಿಳೆಯರೇ ಹೆಚ್ಚು. ಆಕೆಯೇ ಮನೆಯ ಜವಾಬ್ದಾರಿ ನಿಭಾಯಿಸುತ್ತಾರೆ. ನಿಮಗೆ ನೆರವಾಗಲು ನಮ್ಮ ಪಕ್ಷ ಬದ್ಧವಾಗಿದೆ.

ಈ ಸರ್ಕಾರಕ್ಕೆ ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಸಾಧ್ಯವಾಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸುಮಾರು 36 ಜನ ಸತ್ತಿದ್ದಾರೆ. ನಾನು ಸಿದ್ದರಾಮಯ್ಯ ಅವರು ಅಲ್ಲಿ ಪರಿಶೀಲನೆ ನಡೆಸಿದೆವು. ನಾನು ಎಲ್ಲಾ ಮನೆಗೂ ಹೋಗಿ ತಲಾ ಒಂದು ಲಕ್ಷ ಪರಿಹಾರ ಕೊಟ್ಟು ಬಂದೆವು.

ಬಿಜೆಪಿಗೆ ಅಧಿಕಾರ ಇದ್ದಾಗ ಜನರಿಗೆ ಯಾವುದೇ ಸಹಾಯ ಮಾಡಲಿಲ್ಲ. ನಾವು ಅನ್ನಭಾಗ್ಯ, ಶಾಲೆಯಲ್ಲಿ ಬಿಸಿಯೂಟ ಕಾರ್ಯಕ್ರಮ ಹೀಗೆ ಜನಪರ ಕಾರ್ಯಕ್ರಮ ಕೊಟ್ಟಾಗ ಜಾತಿ ನೋಡಿ ಕೊಡಲಿಲ್ಲ. ಹೀಗೆ ಕಾಂಗ್ರೆಸ್ ಪಕ್ಷ ನಿಮ್ಮ ಬದುಕಲ್ಲಿ ಬದಲಾವಣೆ ತರಲು ಬದ್ಧವಾಗಿದೆ. ನೀವು ನಮಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

*ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿ*

https://pragati.taskdun.com/budget-sessionkarnatakafeb-10thminister-madhuswamy/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button